ಯಳಂದೂರು: ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರತಿನಿತ್ಯ ನೂರಾರು ದ್ವಿಚಕ್ರ ವಾಹನಗಳು ನಿಲ್ಲುವ ಸ್ಥಳವಾಗಿ ಮಾರ್ಪಟ್ಟಿದೆ. ಕಾರು ಇಲ್ಲವೇ ಪ್ರವಾಸಿ ವಾಹನಗಳ ಆಶ್ರಯ ತಾಣವಾಗಿದ್ದು, ಸರ್ಕಾರಿ ಬಸ್, ಖಾಸಗಿ ಬಸ್ ನಿಲುಗಡೆಗೆ ಸ್ಥಳ ಸಿಗದೆ ರಸ್ತೆ ಬದಿ ನಿಲ್ಲುವಂತಾಗಿದೆ. ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದು ರಸ್ತೆ ದಾಟಬೇಕಿದೆ.
ಪಟ್ಟಣದಿಂದ ನೂರಕ್ಕೂ ಹೆಚ್ಚು ಸರ್ಕಾರಿ ಬಸ್ ರಾಜಧಾನಿ ಸೇರಿ ಹತ್ತಾರು ನಗರಗಳನ್ನು ಸಂಪರ್ಕಿಸುತ್ತವೆ. ಕಿರಿದಾದ ಬಸ್ ನಿಲ್ದಾಣದಲ್ಲಿ ಸ್ಕೂಟರ್, ಬೈಕ್ ಮತ್ತಿತರ ವಾಹನಗಳು ದಿನವಿಡೀ ನಿಲ್ಲುವುದರಿಂದ ಬಸ್‌ಗಳ ಹಿಮ್ಮುಖ ಮತ್ತು ಮುಮ್ಮುಖ ಚಲನೆಗೆ ಅಡಚಣೆ ಉಂಟಾಗಿದೆ. ಬಹಳಷ್ಟು ಬಸ್‌ಗಳು ಸ್ಥಳದ ಅಭಾವದಿಂದ, ರಸ್ತೆಯಲ್ಲಿ ನಿಲ್ಲುವುದರಿಂದ, ಪ್ರಯಾಣಿಕರಿಗೆ ಮತ್ತು ಸವಾರರಿಗೆ ಕಿರಿಕಿರಿಯಾಗುತ್ತಿದೆ.
ನಿಲ್ದಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಹೊಂದಿಕೊಂಡಿದ್ದು, ಬಸ್ ಹತ್ತಲು ಮತ್ತು ಬಸ್ ಇಳಿದು ತೆರಳಬೇಕಾದರೆ ಜೀವ ಕೈಗೆ ಬಂದಂತಾಗುತ್ತದೆ. ಜನರ ನಡುವೆ ದ್ವಿಚಕ್ರ ವಾಹನಗಳು ವೇಗವಾಗಿ ನುಗ್ಗುತ್ತವೆ. ನಡುವೆ ನಿಲ್ದಾಣದಲ್ಲಿ ಕಾರು, ಸ್ಕೂಟರ್ ನಿಲ್ಲುವುದರಿಂದ ಮಕ್ಕಳು, ವೃದ್ಧರು ಮತ್ತು ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ವಿದ್ಯಾರ್ಥಿನಿ ನವ್ಯ ಅಳಲು ತೋಡಿಕೊಂಡರು.
ನಿತ್ಯ ಸಾವಿರಾರು ವಿದ್ಯಾರ್ಥಿಗಳು ಮತ್ತು ಗ್ರಾಮೀಣ ಭಾಗದ ಜನರು ಪಟ್ಟಣಕ್ಕೆ ಬರುತ್ತಾರೆ. ಆದರೆ, ಬಸ್ ನಿಲ್ದಾಣದಲ್ಲಿ ಸುರಕ್ಷತೆ ಇಲ್ಲದಂತಾಗಿದೆ. ವಾಹನ ವೇಗ ತಗ್ಗಿಸುವ ಬಗ್ಗೆ ಸೂಚನಾ ಫಲಕವೂ ಇಲ್ಲಿಲ್ಲ. ಅಪಘಾತ ವಲಯವಾಗಿ ರೂಪುಗೊಳ್ಳುವ ಮೊದಲು ಸಂಬಂಧಪಟ್ಟವರು ಬಸ್ ನಿಲ್ದಾಣದಲ್ಲಿ ಸುಗಮ ಸಂಚಾರಕ್ಕೆ ಕ್ರಮಕೈಗೊಳ್ಳಬೇಕು ಎನ್ನುತ್ತಾರೆ ಪಟ್ಟಣದ ನಿವಾಸಿಗಳು.
ಪೊಲೀಸ್ ಚೌಕಿ ಇದ್ದರೂ ಪ್ರಯೋಜನ ಶೂನ್ಯ:
ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತೆ ಪೊಲೀಸ್ ಚೌಕಿ ಇದೆ. ಆದರೂ ಸಮೀಪದಲ್ಲಿ ಖಾಸಗಿ ವಾಹನಗಳನ್ನು ನಿಲ್ಲಿಸಲಾಗುತ್ತದೆ. ನಾಗರಿಕರಿಗೆ ತೊಂದರೆ ಎದುರಾದರೂ ಈ ಬಗ್ಗೆ ಪೊಲೀಸರು ತಲೆ ಕೆಡಿಸಿಕೊಳ್ಳುವುದಿಲ್ಲ. ಪಟ್ಟಣ ಪಂಚಾಯಿತಿ ಸಿಬ್ಬಂದಿ ದ್ವಿಚಕ್ರ ವಾಹನಗಳನ್ನು ಬೇರೆಡೆ ನಿಲ್ಲಿಸುವ ಸೂಚನಾ ಫಲಕ ಅಳವಡಿಸಿಲ್ಲ ಎಂದು ಪ್ರವಾಸಿ ರೂಪಾ ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.