ADVERTISEMENT

ಚಾಮರಾಜನಗರ: ರಂಗ‌ಮಂದಿರ ಉದ್ಘಾಟನೆಗೆ ಕೂಡಿ ಬಂದ ಮುಹೂರ್ತ

12 ವರ್ಷಗಳ ಬಳಿಕ ಕಾಮಗಾರಿ ಪೂರ್ಣ, ವರನಟ ಡಾ.ರಾಜ್‌ಕುಮಾರ್‌ ಹೆಸರು, 15ರಂದು ಉದ್ಘಾಟನೆ

ಸೂರ್ಯನಾರಾಯಣ ವಿ
Published 11 ಆಗಸ್ಟ್ 2022, 19:30 IST
Last Updated 11 ಆಗಸ್ಟ್ 2022, 19:30 IST
ರಂಗಮಂದಿರದ ಒಳಾಂಗಣದಲ್ಲಿ ಆಸನಗಳನ್ನು ಅಳವಡಿಸಲು ನೆಲವನ್ನು ಸಜ್ಜುಗೊಳಿಸುತ್ತಿರುವುದು
ರಂಗಮಂದಿರದ ಒಳಾಂಗಣದಲ್ಲಿ ಆಸನಗಳನ್ನು ಅಳವಡಿಸಲು ನೆಲವನ್ನು ಸಜ್ಜುಗೊಳಿಸುತ್ತಿರುವುದು   

ಚಾಮರಾಜನಗರ: ಜಿಲ್ಲೆಯ ರಂಗಭೂಮಿ, ಜಾನಪದ ಕಲಾವಿದರ ಬಹುದಿನಗಳ ಬೇಡಿಕೆ, ಆಶಯ ಕೈಗೂಡುವ ಸಮಯ ಕೊನೆಗೂ ಬಂದಿದೆ.

ಜಾನಪದ ಕಲೆ, ರಂಗಭೂಮಿ ಚಟುವಟಿಕೆಗಳಿಗೆ ವೇದಿಕೆ ಕಲ್ಪಿಸುವ ರಂಗಮಂದಿರದ ಕೆಲಸ 12 ವರ್ಷಗಳ ಬಳಿಕ ಮುಕ್ತಾಯವಾಗುತ್ತಿದೆ. ಸ್ವಾತಂತ್ರ್ಯದ ಅಮೃತಮಹೋತ್ಸವದ ದಿನ ಅಂದರೆ ಇದೇ 15ರಂದು ರಂಗಮಂದಿರದ ಉದ್ಘಾಟನೆಗೆ ಮುಹೂರ್ತ ನಿಗದಿಯಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು 14 ಹಾಗೂ 15ರಂದು ಭೇಟಿ ನೀಡಲಿದ್ದು, ಅವರ ಪ್ರವಾಸ ವೇಳಾಪಟ್ಟಿಯಲ್ಲಿ ರಂಗಮಂದಿರ ಉದ್ಘಾಟನೆ ಸಮಾರಂಭವನ್ನೂ ಉಲ್ಲೇಖಿಸಲಾಗಿದೆ.

ADVERTISEMENT

ಡಾ.ರಾಜ್‌ಕುಮಾರ್‌ ಹೆಸರು: ರಂಗಮಂದಿರಕ್ಕೆ ವರನಟ ಡಾ.ರಾಜ್‌ಕುಮಾರ್‌ ಅವರ ಹೆಸರು ಇಡುವುದು ಖಚಿತವಾಗಿದೆ. ಸಚಿವರ ಪ್ರವಾಸ ಪಟ್ಟಿಯಲ್ಲಿ ‘ವರನಟ ಡಾ.ರಾಜ್‌ಕುಮಾರ್‌ ರಂಗಮಂದಿರ’ ಉದ್ಘಾಟನೆ ಎಂದು ಹೇಳಲಾಗಿದೆ.

ರಂಗಮಂದಿರಕ್ಕೆ ಯಾರ ಹೆಸರು ಇಡಬೇಕು ಎಂದು ಪ್ರಸ್ತಾಪವಾದಾಗಲೆಲ್ಲ, ಜಿಲ್ಲೆಯವರೇ ಆದ ಡಾ.ರಾಜ್‌ಕುಮಾರ್‌ ಅವರ ಹೆಸರನ್ನು ಬಹಳಷ್ಟು ಜನರು ಹೇಳಿದ್ದರು. ಅದರಂತೆ ಸರ್ಕಾರವೂ ಅದೇ ಹೆಸರು ಇಡಲು ನಿರ್ಧರಿಸಿದೆ. ಕಲಾವಿದರು, ರಂಗಾಸಕ್ತರು ಈ ತೀರ್ಮಾನವನ್ನು ಸ್ವಾಗತಿಸಿದ್ದಾರೆ.

12 ವರ್ಷಗಳ ಬಳಿಕ ಪೂರ್ಣ: ಜನಪದೀಯವಾಗಿ ಹಾಗೂ ಸಾಂಸ್ಕೃತಿಕವಾಗಿ ಸಿರಿವಂತವಾಗಿರುವ ಜಿಲ್ಲೆಯಲ್ಲಿ ಒಂದು ಸುಸಜ್ಜಿತ ರಂಗಮಂದಿರ ಬೇಕು ಎನ್ನುವುದು ಹಲವು ಕಲಾವಿದರು ಹಾಗೂ ರಂಗಾಸಕ್ತರ ಕೂಗಾಗಿತ್ತು.ಕಲಾವಿದರ ಒತ್ತಾಯಕ್ಕೆ ಮಣಿದ ರಾಜ್ಯ ಸರ್ಕಾರ 2009–10ನೇ ಸಾಲಿನಲ್ಲಿ ರಂಗಮಂದಿರ ನಿರ್ಮಾಣಕ್ಕೆ ಅನುಮೋದನೆ ನೀಡಿತ್ತು. ಜಿಲ್ಲಾಡಳಿತ ಭವನದ ಸಮೀಪ ಒಂದು ಎಕರೆ 20 ಗುಂಟೆ ಪ್ರದೇಶದಲ್ಲಿ₹3.5 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿತ್ತು.

ಒಳಾಂಗಣದ ಕೆಲಸ ಆಗಿರಲಿಲ್ಲ.ಒಳಾಂಗಣದಲ್ಲಿ ಸ್ಥಳಾವಕಾಶ ಕಡಿಮೆ ಇದೆ ಹಾಗೂ ರಂಗಮಂದಿರದ ರೀತಿಯಲ್ಲಿ ನಿರ್ಮಿಸಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಮಹದೇವ ಪ್ರಸಾದ್‌ ಅವರು ಮತ್ತೆ ಕೆಲವು ಕಾಮಗಾರಿ ನಡೆಸಲು ಸೂಚಿಸಿದ್ದರು.

ಆ ಬಳಿಕ, ಉಳಿದ ಕೆಲಸಗಳನ್ನು ಮಾಡಲು ಹೆಚ್ಚುವರಿ ಅನುದಾನಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಸರ್ಕಾರ ₹2.50 ಕೋಟಿ ಬಿಡುಗಡೆಯನ್ನೂ ಮಾಡಿತ್ತು. ಆದರೆ ಕೆಲಸಗಳು ನಿಧಾನವಾಗಿತ್ತು. ದುಡ್ಡಿದ್ದರೂ, ಕೆಲಸ ಪೂರ್ಣವಾಗದಿರುವುದಕ್ಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಕಲಾವಿದರು, ರಂಗಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸುತ್ತಲೇ ಬಂದಿದ್ದರು.

ವಿ.ಸೋಮಣ್ಣ ಅವರು ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆಯೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಕಾಮಗಾರಿ ಬೇಗ ಮುಗಿಸುವಂತೆ ತಾಕೀತು ಮಾಡಿದ್ದರು. ಜಿಲ್ಲೆಯಾಗಿ 25 ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ರಂಗಮಂದಿರದ ಉದ್ಘಾಟನೆಯಾಗಬೇಕು ಎಂದು ಅವರು ಕಟ್ಟುನಿಟ್ಟಾಗಿ ಹೇಳಿದ್ದರು. ಅದರಂತೆ ಜುಲೈ ತಿಂಗಳ ನಂತರ ಕಾಮಗಾರಿ ವೇಗ ಪಡೆದು ಈಗ ಕೊನೆಯ ಹಂತ ತಲುಪಿದೆ. ಒಟ್ಟಾರೆ ರಂಗಮಂದಿರಕ್ಕೆ ₹6.50 ಕೋಟಿಯಷ್ಟು ವೆಚ್ಚವಾಗಿದೆ.

ಆರಂಭದ ನೀಲ ನಕ್ಷೆಯಲ್ಲಿ ರಂಗ ಮಂದಿರದ ಆಸನ ಸಾಮರ್ಥ್ಯ 450 ಇತ್ತು. ಈಗ ಅದನ್ನು 500ಕ್ಕೆ ಹೆಚ್ಚಿಸಲಾಗಿದೆ. ಉದ್ಘಾಟನೆಗೆ ಇನ್ನು ಮೂರು ದಿನಗಳಷ್ಟೇ ಬಾಕಿ ಇದ್ದು,ಆಸನಗಳನ್ನು ಅಳವಡಿಸಲು ನೆಲವನ್ನು ಸಜ್ಜುಗೊಳಿಸಲಾಗುತ್ತಿದೆ. ಗುರುವಾರ ಕುರ್ಚಿಗಳೂ ಬಂದಿವೆ.

ಇದೇ 14ರ ಒಳಗಾಗಿ ಕಾಮಗಾರಿಗಳೆಲ್ಲವೂ ಮುಗಿಯಲಿದೆ ಎಂದು ಕಾಮಗಾರಿ ಹೊಣೆ ಹೊತ್ತಿರುವ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

‘ಉಚಿತವಾಗಿ ಕೊಡದಿರಿ, ಬಾಡಿಗೆ ಕಡಿಮೆ ಇರಲಿ’

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ರಂಗಕರ್ಮಿ ಹಾಗೂ ಶಾಂತಲಾ ಕಲಾವಿದರು ತಂಡದ ಕೆ.ವೆಂಕಟರಾಜು, ‘ಕೊನೆಗೂ ರಂಗಮಂದಿರ ಲೋಕಾರ್ಪಣೆಗೊಳ್ಳುತ್ತಿದೆ. ನಾಟಕ ಪ್ರದರ್ಶನ, ರಂಗ ಚಟುವಟಿಕೆಗಳಿಗೆ ಸಮರ್ಪಕ ವೇದಿಕೆ ಇಲ್ಲದೆ ತೊಂದರೆ ಅನುಭವಿಸುತ್ತಿದ್ದೆವು. ಕಟ್ಟಡ ನಿರ್ಮಾಣ ಆದರೂ ಕೆಲಸ ಪೂರ್ಣವಾಗದೆ ಇದ್ದುದರಿಂದ ಸಮಸ್ಯೆಯಾಗುತ್ತಿತ್ತು. ಜಿಲ್ಲೆಯ ಬೆಳ್ಳಿ ಹಬ್ಬದ ಸಂಭ್ರಮದಲ್ಲಾದರೂ ಉದ್ಘಾಟನೆಯಾಗುತ್ತಿದೆಯಲ್ಲಾ ಎಂಬ ಸಮಾಧಾನ ಇದೆ’ ಎಂದರು.

‘ಜಿಲ್ಲಾಡಳಿತ ಯಾವುದೇ ಕಾರಣಕ್ಕೂ ರಂಗಮಂದಿರಕ್ಕೆ ಹೆಚ್ಚು ಬಾಡಿಗೆ ನಿಗದಿ ಮಾಡಬಾರದು. ಕಡಿಮೆ ಬಾಡಿಗೆ ಇದ್ದಷ್ಟೂ ಪ್ರದರ್ಶನಗಳು ಹೆಚ್ಚಾಗುತ್ತವೆ. ನಿರಂತರವಾಗಿ ಕಾರ್ಯಕ್ರಮಗಳು ನಡೆಯುತ್ತವೆ. ಯಾರಿಗೂ ಉಚಿತವಾಗಿ ನೀಡಬಾರದು. ಸರ್ಕಾರದ ವಿವಿಧ ಇಲಾಖೆಗಳೂ ಕಾರ್ಯಕ್ರಮ ಮಾಡಿದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಬಾಡಿಗೆ ಕಟ್ಟಬೇಕು. ರಂಗಮಂದಿರದ ಆವರಣದ ಸ್ವಚ್ಛತೆಗೆ ಗಮನಹರಿಸಬೇಕು’ ಎಂದರು.

--

ರಾಜ್‌ಕುಮಾರ್ ಹೆಸರು ಇಡಲು ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗಿದೆ. ಒಳಾಂಗಣದ ಕಾಮಗಾರಿ ವೇಗವಾಗಿ ಕಾಮಗಾರಿ ನಡೆಯುತ್ತಿದೆ
ಜಯಪ್ರಕಾಶ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಹಾಯಕ ನಿರ್ದೇಶಕ

---

ಆಸನ ಅಳವಡಿಸುವ ಕಾಮಗಾರಿ ಮಾತ್ರ ಬಾಕಿ ಇದ್ದು, 2–3 ದಿನಗಳಲ್ಲಿ ಮುಗಿಯಲಿದೆ. 15ರಂದು ಸಚಿವರು ರಂಗಮಂದಿರ ಉದ್ಘಾಟಿಸಲಿದ್ದಾರೆ
ವಿನಯ್‌ಕುಮಾರ್‌, ಲೋಕೋಪಯೋಗಿ ಇಲಾಖೆ ಇಇ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.