ಚಾಮರಾಜನಗರ: ಅಖಿಲ ಕರ್ನಾಟಕ ಕನ್ನಡ ಮಹಸಭಾ ವತಿಯಿಂದ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಗುರುವಾರ ನಗರದ ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿ 9 ದಿನಗಳ ದಸರಾ ಸಾಂಸ್ಕೃತಿಕ ಉತ್ಸವಕ್ಕೆ ಜಾನಪದ ವಿದ್ವಾಂಸ ದೊಡ್ಡ ಗವಿಬಸಪ್ಪ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ರಾಜ್ಯ ಸರ್ಕಾರ ಈ ವರ್ಷ ಚಾಮರಾಜನಗರದಲ್ಲಿ ದಸರಾ ಮಹೋತ್ಸವ ಆಚರಿಸದೆ ಹಿಂದೆ ಸರಿದಿರುವುದು ಬೇಸರದ ಸಂಗತಿ. ಸರ್ಕಾರ ಮಾಡಬೇಕಾದ ಉತ್ಸವವನ್ನು ಅಖಿಲ ಕರ್ನಾಟಕ ಕನ್ನಡ ಮಹಸಾಭಾ ನಡೆಸುತ್ತಿರುವುದು ಅಭಿನಂದನೀಯ. ಜಾನಪದ ಕಲೆಗಳ ತವರಿನಲ್ಲಿ ದಸರಾ ಉತ್ಸವ ಆಚರಿಸುವ ನಿಟ್ಟಿನಲ್ಲಿ ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಸರ್ಕಾರದ ಮೇಲೆ ಒತ್ತಡ ಹಾಕುವಲ್ಲಿ ವಿಫಲರಾಗಿದ್ದಾರೆ’ ಎಂದರು.
ರಂಗಕರ್ಮಿ ಕೆ.ವೆಂಕಟರಾಜು ಮಾತನಾಡಿ, ‘ಇತಿಹಾಸ ಪ್ರಸಿದ್ಧ ಚಾಮರಾಜೇಶ್ವರನ ದೇವಸ್ಥಾನ ನಿರ್ಮಾಣ ಮಾಡಿ ಮುಂದಿನ ವರ್ಷ 200 ವರ್ಷಗಳು ತಂಬುಲಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅದ್ದೂರಿ ಹಾಗೂ ಅರ್ಥಪೂರ್ಣವಾದ ಕಾರ್ಯಕ್ರಮಗಳನ್ನು ಆಯೋಜಿಸಬೇಕು’ ಎಂದರು.
‘ಚಾಮರಾಜೇಶ್ವರನ ದೇವಸ್ಥಾನ ಅತ್ಯಂತ ಸುಂದರ ಒಳಾಂಗಣ ಹಾಗೂ ಅದ್ಭುತ ವಾಸ್ತುಶಿಲ್ಪಗಳಿಂದ ರಚನೆಯಾಗಿದ್ದು ಹಿಂದೆ ದೇಗುಲಕ್ಕೆ ಹೊಂದಿಕೊಂಡತೆ ಸಂಸ್ಕೃತ ಪಾಠಶಾಲೆ ನಡೆಯುತ್ತಿತ್ತು, ವೇದಾಧ್ಯಯನ ಕೇಂದ್ರವಾಗಿಯೂ ಪ್ರಸಿದ್ಧಿ ಪಡೆದಿತ್ತು. ಜನರ ನಂಬಿಕೆ ಹಾಗೂ ಶ್ರದ್ಧಾ ಕೇಂದ್ರವಾಗಿರುವ ದೇವಸ್ಥಾನಕ್ಕೆ ಎರಡು ಶತಮಾನಗಳು ತುಂಬುತ್ತಿರುವುದು ಸಂತಸದ ವಿಚಾರವಾಗಿದ್ದು ವಿಜೃಂಭಣೆಯಿಂದ ಸಂಭ್ರಮಾಚರಣೆ ನಡೆಯಬೇಕು’ ಎಂದರು.
ಅಖಿಲ ಕರ್ನಾಟಕ ಕನ್ನಡ ಮಹಾಸಭಾ ಅಧ್ಯಕ್ಷ ಚಾರಂ ಶ್ರೀನಿವಾಸ ಗೌಡ ಮಾತನಾಡಿ, ‘2008ರಿಂದ ಗ್ರಾಮೀಣ ದಸರಾ, 2013ರಿಂದ ಚಾಮರಾಜನಗರ ದಸರಾ ಆಚರಿಸಿಕೊಂಡು ಬರುತ್ತಿದ್ದ ರಾಜ್ಯ ಸರ್ಕಾರ ಏಕಾಏಕಿ ಚಾಮರಾಜನಗರ ದಸರಾ ನಿಲ್ಲಿಸಿದ್ದು ಕಲಾವಿದರು ಸೇರಿದಂತೆ ಸಾರ್ವಜನಿಕರಿಗೆ ಅತೀವ ಬೇಸರ ಮೂಡಿಸಿತು. ಅನಾಚೂನವಾಗಿ ನಡೆದುಕೊಂಡು ಬಂದಿರುವ ಪರಂಪರೆ ನಿಲ್ಲಬಾರದು ಎಂಬ ಉದ್ದೇಶದಿಂದ ಕಲಾವಿದರು, ಸಮಾನಮನಸ್ಕರ ಜೊತೆಗೂಡಿ ಸಲಹೆ, ಅಭಿಪ್ರಾಯ, ನೆರವು ಪಡೆದು ಚಾಮರಾಜನಗರ ದಸರಾ ನಡೆಸಲಾಗುತ್ತಿದೆ’ ಎಂದರು.
ಚಾಮರಾಜನಗರಕ್ಕೂ ಮೈಸೂರು ಅರಸರಿಗೂ ಅವಿನಾಭಾವ ಸಂಬಂಧವಿದೆ. ಅರಸರ ಹೆಸರನ್ನೇ ಚಾಮರಾಜನಗರಕ್ಕೆ ಇರಿಸಲಾಗಿದೆ, ಚಾಮರಾಜೇಶ್ವರನ ದೇವಸ್ಥಾನವೂ ಅರಸರ ಕೊಡುಗೆಯಾಗಿದೆ, ಇಂತಹ ಐತಿಹಾಸಿಕ ಪರಂಪರೆ ಉಳಿಯಬೇಕು, ಬೆಳೆಯಬೇಕು ಎಂಬ ಉದ್ದೇಶದಿಂದ ಸರ್ಕಾರದ ಬದಲಾಗಿ ಕಲಾವಿದರೇ ಒಟ್ಟಾಗಿ ಚಾಮರಾಜನಗರ ದಸರಾ ನಡೆಸುತ್ತಿದ್ದಾರೆ ಎಂದರು.
ದಲಿತ ಮಹಾಸಭಾ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ ಪಾಪು ಮಾತನಾಡಿದರು. ಚಾಮರಾಜೇಶ್ವರಸ್ವಾಮಿ ನಾದಸ್ವರ ತಂಡದಿಂದ ಕಾರ್ಯಕ್ರಮ ನಡೆಯಿತು. ರವಿಚಂದ್ರಪ್ರಸಾದ್ ಕಹಳೆ ಅವರಿಂದ ಕೊಂಬು ಕಹಳೆ ವಾದನ ನಡೆಯಿತು, ದೊಡ್ಡ ಗವಿಬಸಪ್ಪ ತಂಡದಿಂದ ಜನಪದ ಗೀತೆಗಳ ಗಾಯನ, ಶಾರದ ಭಜನಾ ತಂಡದಿಂದ ಭಜನೆ, ಕಾಳಿಕಾಂಬ ಭಜನಾ ಮಂಡಳಿಯಿಂದ ಭಜನೆ, ಅಕ್ಷತಾ ಜೈನ್ ತಂಡದಿಂದ ಭರತನಾಟ್ಯ, ಅಪ್ಪು ಮೆಲೋಡಿನ್ ತಂಡದಿಂದ ಗೀತ ಗಾಯನ ನಡೆಯಿತು.
ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಸುರೇಶ್ ನಾಯಕ, ಉದ್ಯಮಿ ಶ್ರೀನಿಧಿ ಕುದರ್, ಕಲಾವಿದರಾದ ಘಟಂ ಕೃಷ್ಣ, ಜ.ಸುರೇಶ್‌ನಾಗ್, ಬಂಗಾರು, ನಟರಾಜು, ಉಮ್ಮತ್ತೂರು ಬಸವರಾಜು, ಚಂದ್ರು, ಗಣೇಶ್ ದೀಕ್ಷಿತ್, ಚಾ.ವೆಂ.ರಾಜಗೋಪಾಲ್, ಮಹೇಶ್‌ಗೌಡ,
ಪಣ್ಯದಹುಂಡಿ ರಾಜು, ಜಗದೀಶ್, ಹೊನ್ನಮ್ಮ, ಚಿನ್ನಮ್ಮ, ಮಂಗಲದ ಶಿವಣ್ಣ, ಮಲ್ಲಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.