ಚಾಮರಾಜನಗರ: ಜಿಲ್ಲೆಯ ನಗರ ಹಾಗೂ ಗ್ರಾಮಾಂತರ ಭಾಗಗಳ ರಸ್ತೆಗಳಲ್ಲಿ ಅಪಾಯಕ್ಕೆ ಆಹ್ವಾನ ನೀಡುವ ಗುಂಡಿಗಳು ಬಾಯ್ತೆರೆದು ನಿಂತಿದ್ದು, ವಾಹನ ಸವಾರರ ಹಾಗೂ ಪಾದಚಾರಿಗಳ ಜೀವಕ್ಕೆ ಕಂಟಕವಾಗಿವೆ. ಸ್ಥಳೀಯ ಆಡಳಿತಗಳು ಹಾಗೂ ಲೋಕೋಪಯೋಗಿ ಇಲಾಖೆ ನಿಯಮಿತವಾಗಿ ರಸ್ತೆಗಳ ನಿರ್ವಹಣೆ ಮಾಡದ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ಗುಂಡಿಬಿದ್ದ ರಸ್ತೆಗಳಲ್ಲಿ ಪ್ರಯಾಣಿಸುವುದೇ ದುರಸ್ತವಾಗಿದೆ.
ಜಿಲ್ಲಾ ಕೇಂದ್ರವಾದ ಚಾಮರಾಜನಗರದಲ್ಲಿ ನಗರಸಭೆ ವ್ಯಾಪ್ತಿಗೊಳಪಟ್ಟು 31 ವಾರ್ಡ್‌ಗಳಿದ್ದು ರಸ್ತೆಗಳ ಪರಿಸ್ಥಿತಿ ತೀರಾ ಶೋಚನೀಯವಾಗಿದೆ. ಅಡಿಯುದ್ದ ಆಳದ ಯಮಸ್ವರೂಪಿ ಗುಂಡಿಗಳು ಅಪಾಯಕ್ಕೆ ಆಹ್ವಾನ ನೀಡುವಂತಿವೆ. ಗುಂಡಿಬಿದ್ದ ರಸ್ತೆಗಳಲ್ಲಿ ವಾಹನ ಚಾಲಾಯಿಸುವಾಗ ಪ್ರತಿನಿತ್ಯ ಅವಘಡಗಳು ಸಂಭವಿಸುತ್ತಿವೆ.
ಚಾಮರಾಜನಗರ ಸ್ವತಂತ್ರ ಜಿಲ್ಲೆಯಾಗಿ ರೂಪುಗೊಂಡು 25 ವರ್ಷಗಳು ಕಳೆದರೂ ನಗರದ ಬಹುಪಾಲು ಬಡಾವಣೆಗಳಿಗೆ ರಸ್ತೆ ಸಂಪರ್ಕವಿಲ್ಲ. ನಗರದ ಹಳೆಯ ಬಡಾವಣೆಗಳಲ್ಲಿ ಮಾತ್ರ ಮುಖ್ಯ ರಸ್ತೆಗಳು ನಿರ್ಮಾಣವಾಗಿದ್ದು ಹೊಸ ಬಡಾವಣೆಗಳಿಗೆ ಇದುವರೆಗೂ ರಸ್ತೆಗಳನ್ನು ನಿರ್ಮಾಣ ಮಾಡಿಲ್ಲ. ಹಲವು ವರ್ಷಗಳಿಂದ ಸಾರ್ವಜನಿಕರು ನಡೆದಾಡುತ್ತಿರುವ, ವಾಹನಗಳು ಓಡಾಡುತ್ತಿರುವ ಕಾಲುದಾರಿಗಳೇ ಮುಖ್ಯ ರಸ್ತೆಗಳಾಗಿ ಬದಲಾಗಿವೆ.
ನಗರದಲ್ಲಿ ಮುಖ್ಯ ರಸ್ತೆಗಳ ಹೊರತಾಗಿ ಅಡ್ಡರಸ್ತೆಗಳಿಗೆ ಇದುವರೆಗೂ ಡಾಂಬರ್ ಬಿದ್ದಿಲ್ಲ. ಮಳೆಗಾಲದಲ್ಲಿ ಕೆಸರುಮಯವಾದ ಗುಂಡಿಗಳಿಂದ ತುಂಬಿರುವ ರಸ್ತೆಗಳಲ್ಲಿ ನಾಗರಿಕರು ಪ್ರಯಾಸದಿಂದ ಸಂಚರಿಸಬೇಕಾಗಿದೆ. ಪ್ರಗತಿ ನಗರ, ಪ್ರಶಾಂತ್ ನಗರ, ಬುದ್ಧನಗರ, ರಾಮಸಮುದ್ರ, ಭೀಮಸಮುದ್ರ, ಭಗೀರಥ ನಗರ, ಹೌಸಿಂಗ್ ಬೋರ್ಡ್ ಕಾಲೊನಿ, ಗಾಳಿಪುರ, ಸೋಮವಾರ ಪೇಟೆಯ ರಸ್ತೆಗಳು ದುಸ್ಥಿತಿಯಲ್ಲಿವೆ.
ಕೊಳ್ಳೇಗಾಲದಲ್ಲೂ ಸ್ಥಿತಿ ಭಿನ್ನವಾಗಿಲ್ಲ: ಕೊಳ್ಳೇಗಾಲ ತಾಲ್ಲೂಕಿನ ನಗರ ಹಾಗೂ ಗ್ರಾಮೀಣ ಪ್ರದೇಶದ ಮುಖ್ಯ ರಸ್ತೆಗಳು ಗುಂಡಿಗಳಿಂದ ತುಂಬಿಹೋಗಿದ್ದು ಸಾರ್ವಜನಿಕರು ಪ್ರತಿನಿತ್ಯ ಸಮಸ್ಯೆ ಅನುಭವಿಸುತ್ತಿದ್ದಾರೆ. ನಗರ ಭಾಗಗಳ ಮುಖ್ಯ ರಸ್ತೆಗಳು ಸೇರಿದಂತೆ ಬಡಾವಣೆಗಳ ಪ್ರಮುಖ ರಸ್ತೆಗಳು ಹಾಳಾಗಿವೆ. ಗ್ರಾಮೀಣ ಪ್ರದೇಶಗಳ ರಸ್ತೆಗಳ ಸ್ಥಿತಿಯಂತೂ ಗಂಭೀರವಾಗಿದೆ.
ಕೊಳ್ಳೇಗಾಲದಿಂದ ಪ್ರಸಿದ್ಧ ಭರಚುಕ್ಕಿ ಜಲಪಾತಕ್ಕೆ 15 ಕಿ.ಮೀ ರಸ್ತೆ ಗುಂಡಿಗಳಿಂದ ತುಂಬಿದ್ದು, ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರು ಪ್ರಯಾಸದಿಂದ ಸಂಚರಿಸಬೇಕಾಗಿದೆ. ಸತ್ತೆಗಾಲ ಹ್ಯಾಂಡ್‌ಪೋಸ್ಟ್‌ನಿಂದ ಜಲಪಾತ ಸಂಪರ್ಕಿಸುವ 5 ಕಿ.ಮೀ ರಸ್ತೆ ಸಂಪೂರ್ಣ ಹಾಳಾಗಿದೆ.
ಕೊಳ್ಳೇಗಾಲದಿಂದ ಗುಂಡಾಲ್ ಜಲಾಶಯಕ್ಕೆ ತೆರಳುವ ರಸ್ತೆಯ ಸ್ಥಿತಿಯೂ ಗಂಭಿರವಾಗಿದೆ. ಮಧುವನಹಳ್ಳಿಯಿಂದ ಲೊಕ್ಕನಹಳ್ಳಿ ಮಾರ್ಗದ ರಸ್ತೆಯಲ್ಲಿ ವಾಹನಗಳು ಸಾಗಬೇಕಾದರೆ ನೂರಾರು ಗುಂಡಿಗಳನ್ನು ಹಾದುಹೋಗಬೇಕು. ಉಗನೀಯ, ಪಾಳ್ಯ, ಗುಂಡೇಗಾಲ, ಸೇರಿದಂತೆ ಹಲವು ಭಾಗಗಳ ರಸ್ತೆಗಳು ಸಂಚಾರಕ್ಕೆ ಯೋಗ್ಯವಾಗಿಲ್ಲ. ಮಳೆಗಾದಲ್ಲಿ ರಸ್ತೆಗಳು ಕೆಸರು ಗದ್ದೆಗಳಾಗಿ ಬದಲಾಗುತ್ತವೆ. ಕೆಲವು ರಸ್ತೆಗಳು ಸಣ್ಣ ಕೆರೆಗಳಂತೆ ಕಾಣುತ್ತವೆ.
ಶಾಲಾ ಕಾಲೇಜುಗಳಿಗೆ ತೆರಳುವ ಮಕ್ಕಳು ಗುಂಡಿಬಿದ್ದ ರಸ್ತೆಗಳಲ್ಲಿ ಸಾಗುವಾಗ ಅವಘಡಗಳಿಗೆ ತುತ್ತಾಗುತ್ತಿದ್ದಾರೆ. ರಸ್ತೆಗಳ ಗುಂಡಿ ಮುಚ್ಚಲು ಹಾಗೂ ಹೊಸ ರಸ್ತೆ ನಿರ್ಮಾಣಕ್ಕೆ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಮನವಿ ನೀಡಿದರೂ ಯಾರೂ ಕಾಳಜಿ ವಹಿಸಿಲ್ಲ. 15 ವರ್ಷಗಳಿಂದಲೂ ಗುಂಡಲ್ ಜಲಾಶಯದ ಮುಖ್ಯರಸ್ತೆಯ ದುರಸ್ತಿ ಭಾಗ್ಯ ಕಂಡಿಲ್ಲ.
ಈ ರಸ್ತೆಯು ಅಂತರ ರಾಜ್ಯ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದ್ದು ಹನೂರು ಶಾಸಕರಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ರಸ್ತೆಯಲ್ಲಿ ಒಂದು ಅಡಿಗೂ ಆಳದ ಗುಂಡಿಗಳಿದ್ದು ನಿತ್ಯವೂ ಅಪಘಾತಗಳು ಸಂಭವಿಸುತ್ತಿವೆ. ತಿಂಗಳ ಹಿಂದಷ್ಟೆ ಗುಂಡಲ್ ಜಲಾಶಯದ ರಸ್ತೆಯ ಹಳ್ಳದಲ್ಲಿ ಬಿದ್ದು ಇಬ್ಬರು ಸವಾರರು ಕಾಳು ಮೂಳೆ ಮುರಿದುಕೊಂಡಿದ್ದಾರೆ ಎಂದು ದೂರುತ್ತಾರೆ ಗ್ರಾಮದ ಶ್ರೀನಿವಾಸ್.
ಇಪ್ಪತ್ತು ವರ್ಷಗಳ ಹಿಂದೆ ನಿರ್ಮಿಸಿರುವ ರಸ್ತೆಯನ್ನು ಕಾಲಕಾಲಕ್ಕೆ ನಿರ್ವಹಣೆ ಮಾಡದ ಪರಿಣಾಮ ದುಸ್ಥಿತಿ ತಲುಪಿದೆ. ಕಾಡಂಚಿನ ಗ್ರಾಮಗಳ ಜನರು ಹಾಗೂ ವಿದ್ಯಾರ್ಥಿಗಳು 25 ಕಿ.ಮೀ ಉದ್ಧದ ಹಳಾದ ರಸ್ತೆಯಲ್ಲಿಯೇ ಸಂಚರಿಸಿ ಗುಂಡ್ಲುಪೇಟೆ ಪಟ್ಟಣ ತಲುಪಬೇಕು. ರಸ್ತೆಗಳು ಹಾಳಾಗಿರುವುದರಿಂದ ತುರ್ತು ಸಂದರ್ಭದಲ್ಲಿ ಗಿರಿಜನರ ಹಾಡಿಗಳಿಗೆ ಆಟೊ, ಕಾರುಗಳು ಸಹಿತ ಯಾವುದೇ ವಾಹನಗಳು ಬಾಡಿಗೆ ಬರುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ ಆದಿವಾಸಿಗಳು.
ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಸದ್ಯ ಹೆಚ್ಚು ಮಳೆ ಸುರಿಯುತ್ತಿದ್ದು ರಸ್ತೆಗಳ ಸ್ಥಿತಿ ಗಂಭೀರವಾಗಿದೆ. ಗುಂಡ್ಲುಪೇಟೆಯಿಂದ ಬೋಮ್ಮಲಾಪುರ ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯೆ ಹಲವು ವರ್ಷಗಳ ಹಿಂದೆ ರಸ್ತೆ ಆಗೆಯಲಾಗಿದ್ದು ಸುಮಾರು ಒಂದು ಕಿ.ಮೀನಷ್ಟು ರಸ್ತೆ ಸಂಚಾರಕ್ಕೆ ದುಸ್ತರವಾಗಿದೆ. ರಸ್ತೆ ಕಾಮಗಾರಿ ವ್ಯಾಜ್ಯ ನ್ಯಾಯಾಲಯದಲ್ಲಿರುವುದರಿಂದ ಕಾಮಗಾರಿ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಶಿವಪುರ ಗ್ರಾಮದ ಮಂಜಪ್ಪ ಹೇಳುತ್ತಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಬಸವಪುರದಿಂದ ಬೆಂಡರವಾಡಿ ರಸ್ತೆ ತೀರಾ ಹದಗೆಟ್ಟಿದೆ. ಕಲ್ಲಿಗೌಡನಹಳ್ಳಿ ಗ್ರಾಮದಿಂದ ಮಗುವಿನಹಳ್ಳಿ ಸಂಪರ್ಕದ ರಸ್ತೆ ಮಳೆಯಿಂದಾಗಿ ತೀರ ಹದಗೆಟ್ಟಿದೆ.
ಗುಂಡಿಬಿದ್ದ ರಸ್ತೆಗಳಲ್ಲಿ ಸಂಚಾರ: ಯಳಂದೂರು ತಾಲ್ಲೂಕಿನಾದ್ಯಂತ ಮಳೆ ಸುರಿಯುತ್ತಿದ್ದು ರಸ್ತೆಗಳಲ್ಲಿ ಗುಂಡಿಗಳ ಪ್ರಮಾಣ ಹೆಚ್ಚಾಗಿದೆ. ಮದ್ದೂರು ಆಲ್ಕೆರೆ ರಸ್ತೆ, ಹೊನ್ನೂರು ಮೆಲ್ಲಹಳ್ಳಿ ರಸ್ತೆ, ಕೆಸ್ತೂರು, ಮಲ್ಲಿಗೆ ಹಳ್ಳ ರಸ್ತೆಗಳಲ್ಲಿ ಮಣ್ಣು ಮೇಲೆದ್ದು ವಾಹನ ಸವಾರರು ಪ್ರಯಾಸ ಪಡಬೇಕಾಗಿದೆ. ಕಪ್ಪುಮಣ್ಣಿನೊಂದಿಗೆ ಮಳೆ ನೀರು ಸೇರಿ ವಾಹನಗಳ ಸಂಚಾರ ದುರಸ್ತರವಾಗಿದೆ. ಗುಂಬಳ್ಳಿ ಮೂಲಕ ಸಾಗುವ ಕೋಮರನಪುರ, ವಡಗೆರೆ ರಸ್ತೆಯಯಲ್ಲಿ ಸಮಸ್ಯೆ ಹೆಚ್ಚಾಗಿದೆ.
ಪಟ್ಟಣದಲ್ಲಿನ ಜಹಾಗಿರ್ದಾರ್ ಬಂಗಲೆ ಮುಂಭಾಗ ಮಳೆ ಸುರಿದರೆ ಕೆಸರು ತುಂಬುತ್ತದೆ. ಆಟೋ, ಗೂಡ್ಸ್ ವಾಹನಗಳ ಸಂಚಾರ ದುಸ್ತರವಾಗುತ್ತದೆ. ತಳ್ಳು ಗಾಡಿಗಳು ಪಾಸ್ಟ್ ಫುಡ್ ಮಾರಾಟಗಾರರಿಗೂ ಇಲ್ಲಿಗೆ ತೆರಳಲು ತೊಂದರೆ ಅನುಭವಿಸುತ್ತಾರೆ. ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸುತ್ತಾರೆ ಕೆಸ್ತೂರಿನ ಕಿರಣ್.
ಕುಲುಮೆ ರಸ್ತೆಯಿಂದ ಸಂತೆಮರಹಳ್ಳಿ ವೃತ್ತದವರೆಗೆ ₹ 80 ಲಕ್ಷ ವೆಚ್ಚದಲ್ಲಿ ರಸ್ತೆ ಕಾಮಗಾರಿ ಟೆಂಡರ್ ಅಂತಿಮವಾಗಿದ್ದು ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ. ನಗರದಲ್ಲಿ ರಸ್ತೆಗಳಲ್ಲಿರುವ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಿಸುವ ಕೆಲಸ ಮಾಡಲಾಗುವುದು. ನಗರದ ವಿದ್ಯಾರ್ಥಿನಿಯರ ಹಾಸ್ಟೆಲ್ ರಸ್ತೆ ಕಾಮಗಾರಿಗೂ ಹಣ ಮಜೂರಾಗಿದೆ.ಸುರೇಶ್ ಚಾಮರಾಜನಗರ ನಗರಸಭೆ ಅಧ್ಯಕ್ಷ
ಗುಂಡಿಬಿದ್ದಿರುವ ರಸ್ತೆಗಳಲ್ಲಿ ಅಪಘಾತಗಳು ಹೆಚ್ಚಾಗುತ್ತಿವೆ. ಮಳೆಗಾಲವಾಗಿರುವುದರಿಂದ ಗುಂಡಿ ಕಾಣದೆ ವಾಹನ ಚಲಾಯಿಸಿ ನಿತ್ಯ ಬಿದ್ದು ಗಾಯಗೊಳ್ಳುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಗುಂಡಿಬಿದ್ದ ರಸ್ತೆಗಳ ದುರಸ್ತಿಗೆ ಗಮನ ಹರಿಸಬೇಕು.–ಈಶ ದೇಶವಳ್ಳಿ
ಉಗನೀಯ ಗ್ರಾಮ ಇನ್ನೂ ರಸ್ತೆ ಭಾಗ್ಯ ಕಂಡಿಲ್ಲ. ಕೆಲವು ರಸ್ತೆಗಳು ಹಾಳಾಗಿ ಹಲವು ವರ್ಷ ಕಳೆದರೂ ದುರಸ್ತಿ ಮಾಡಿಲ್ಲ. ಜನಪ್ರತಿನಿಧಿಗಳು ಅಧಿಕಾರಿಗಳು ಅಭಿವೃದ್ಧಿ ಮಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಚುನಾವಣೆ ಬಂದಾಗ ಮಾತ್ರ ಉಗನೀಯ ಗ್ರಾಮ ನೆನಪಾಗುತ್ತದೆ. ಶಾಸಕರು ರಸ್ತೆ ನಿರ್ಮಾಣ ಮಾಡಿಕೊಡಬೇಕು.ರವಿ ಉಗನೀಯ
ಚಾಮರಾಜನಗರದ ಸರ್ಕಾರಿ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಾಳಾಗಿದ್ದು ಗುಂಡಿ ಬಿದ್ದಿದೆ. ಮಳೆ ಬಂದರೆ ವಿದ್ಯಾರ್ಥಿನಿಯರು ನಡೆದಾಡಲು ಆಗುವುದಿಲ್ಲ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗುತ್ತದೆ. ನಿತ್ಯವೂ ಬಿದ್ದು ಗಾಯಗೊಳ್ಳುತ್ತಿದ್ದರೆ ನಗರಸಭೆ ಕೂಡಲೇ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು.ಗುರುರಾಜ್ ವಿದ್ಯಾರ್ಥಿ
ಯಳಂದೂರು ತಾಲ್ಲೂಕಿನ ಗ್ರಾಮೀಣ ರಸ್ತೆಗಳು ಅಲ್ಲಲ್ಲಿ ಗುಂಡಿಬಿದ್ದಿದ್ದು ರೈತರಿಗೆ ಹಾಗೂ ಗ್ರಾಮೀಣ ಭಾಗದ ಸಂಚಾರ ವ್ಯವಸ್ಥೆಗೆ ತೊಂದರೆಯಾಗಿದೆ. ಮಳೆ ಸುರಿದರೆ ದವಸ ಧಾನ್ಯಗಳನ್ನು ಸಾಗಿಸುವುದು ದುಸ್ತರವಾಗುತ್ತದೆ. ಗ್ರಾಮೀಣ ಅರ್ಥ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ರಸ್ತೆಗಳು ದುರಸ್ತಿ ಮಾಡಬೇಕು.ಕಿರಣ್ ಜೆ.ಕೆಸ್ತೂರು ಗ್ರಾಮಸ್ಥ
ಚಾಮರಾಜನಗರ ಜಿಲ್ಲೆಯಲ್ಲಿ 664 ಕಿ.ಮೀ ರಾಜ್ಯ ಹೆದ್ದಾರಿ 926 ಕಿ.ಮೀ ಜಿಲ್ಲಾ ಮುಖ್ಯ ರಸ್ತೆಗಳು 195 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿವೆ. ರಾಷ್ಟ್ರೀಯ ಹೆದ್ದಾರಿಗಳು ತಮಿಳುನಾಡು ಹಾಗೂ ಕೇರಳ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುತ್ತವೆ. ರಾಜ್ಯದ ದಕ್ಷಿಣ ಭಾಗದ ಕೊನೆಯಯಲ್ಲಿರುವ ಜಿಲ್ಲೆಯಯ ಒಟ್ಟು ಭೂಭಾಗದ ಪೈಕಿ ಶೇ 51ರಷ್ಟು ಅರಣ್ಯ ಇದೆ.
ನಿರ್ವಹಣೆ: ಬಾಲಚಂದ್ರ.ಎಚ್
ಪೂರಕ ಮಾಹಿತಿ: ನಾ.ಮಂಜುನಾಥಸ್ವಾಮಿ, ಅವಿನ್ ಪ್ರಕಾಶ್ ವಿ, ಮಲ್ಲೇಶ ಎಂ., ಮಹದೇವ್ ಹೆಗ್ಗವಾಡಿಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.