ಚಾಮರಾಜನಗರ: ಮಾರುಕಟ್ಟೆಯಲ್ಲಿ ಏರುಮುಖವಾಗಿದ್ದ ಟೊಮೆಟೊ ದರ ಮತ್ತೆ ಇಳಿಮುಖವಾಗಿದೆ. ಕಳೆದವಾರ ಕೆ.ಜಿಗೆ ₹50 ತಲುಪಿದ್ದ ಟೊಮೆಟೊ ಬೆಲೆ ಪ್ರಸ್ತುತ 30ಕ್ಕೆ ಕುಸಿತವಾಗಿದ್ದು ಗ್ರಾಹಕರು ನಿರಾಳರಾಗಿದ್ದಾರೆ.
ಮಾರುಕಟ್ಟೆಗೆ ಏಕಾಏಕಿ ಟೊಮೆಟೊ ಪೂರೈಕೆ ಕಡಿಮೆಯಾಗಿದ್ದರಿಂದ ದರ ದಿಢೀರ್ ಹೆಚ್ಚಾಗಿತ್ತು. ಒಂದೇ ವಾರದಲ್ಲಿ ಬೆಲೆ ದುಪ್ಪಟ್ಟಾಗಿ ಮತ್ತಷ್ಟು ಹೆಚ್ಚಾಗುವ ಸುಳಿವು ನೀಡಿತ್ತು. ಬೆಲೆ ಏರುತ್ತಿದ್ದಂತೆ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಆವಕವಾದ ಪರಿಣಾಮ ಮತ್ತೆ ದರ ಇಳಿಕೆಯಾಗುತ್ತಿದೆ ಎನ್ನುತ್ತಾರೆ ವ್ಯಾಪಾರಿಗಳು.
ಟೊಮೆಟೊ ದರ ಸಂಪೂರ್ಣವಾಗಿ ಮಾರುಕಟ್ಟೆಯ ಬೇಡಿಕೆ ಹಾಗೂ ಪೂರೈಕೆ ಮೇಲೆ ಅವಲಂಬಿತವಾಗಿರುತ್ತದೆ. ಮಳೆ ಹೆಚ್ಚಾಗಿ ಬೆಳೆ ನಾಶವಾದರೆ, ಜಮೀನಿನಲ್ಲಿ ಕೊಳೆತರೆ ಸಹಜವಾಗಿ ಬೆಲೆ ಹೆಚ್ಚಾಗುತ್ತದೆ. ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಪೂರೈಕೆಯಾಗುತ್ತಿದ್ದರೂ ಗುಣಮಟ್ಟದ ಕೊರತೆ ಕಾಣುತ್ತಿದೆ. ಶೇ 25ರಷ್ಟು ಹಣ್ಣು ಬಳಕೆಗೆ ಯೋಗ್ಯವಾಗಿಲ್ಲ ಎನ್ನುತ್ತಾರೆ ವ್ಯಾಪಾರಿ ಶ್ರೀನಿವಾಸ್.
ನುಗ್ಗೆ ಇಳಿಕೆ: ಶತಕದ ಗಡಿ ದಾಟಿದ್ದ ನುಗ್ಗೆಕಾಯಿ ದರವೂ ಇಳಿಕೆಯಾಗಿದೆ. ಕೆ.ಜಿಗೆ ₹30 ರಿಂದ ₹50ರವರೆಗೂ ಮಾರಾಟವಾಗುತ್ತಿದೆ. ಮದುವೆ, ಗೃಹ ಪ್ರವೇಶ ಸಹಿತ ಶುಭ ಸಮಾರಂಭಗಳಲ್ಲಿ ಸಾಂಬಾರ್ ತಯಾರಿಕೆಗೆ ಹೆಚ್ಚಾಗಿ ನುಗ್ಗೆಕಾಯಿ ಬಳಕೆಯಾಗುವುದರಿಂದ ಮದುವೆ ಸೀಸನ್‌ನಲ್ಲಿ ನುಗ್ಗೆಕಾಯಿ ದರ ಗಗನಕ್ಕೇರುತ್ತದೆ. ಸದ್ಯ ಹೆಚ್ಚಾಗಿ ಮದುವೆ ಸಮಾರಂಭಗಳು ನಡೆಯದ ಪರಿಣಾಮ ದರ ಇಳಿಕೆಯಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.
ಬಾಳೆಹಣ್ಣಿನ ದರ ಅಲ್ಪ ಇಳಿಕೆ: ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಶತಕದ ಗಡಿ ದಾಟಿದ್ದ ಏಲಕ್ಕಿ ಬಾಳೆಹಣ್ಣಿನ ದರ ಅಲ್ಪ ಇಳಿಕೆಯಾಗಿದ್ದು ಕೆ.ಜಿಗೆ ₹80ಕ್ಕೆ ಮಾರಾಟವಾಗುತ್ತಿದೆ. ಪಚ್ಚಬಾಳೆ ದರವೂ ₹50 ರಿಂದ ₹40ಕ್ಕೆ ಕುಸಿದಿದೆ. ₹200ರ ಗಡಿ ತಲುಪಿದ್ದ ಸೇಬು, ದಾಳಿಂಬೆ ದರ ಅಲ್ಪ ಇಳಿಕೆಯಾಗಿದ್ದು ತಲಾ ₹ 160ಕ್ಕೆ ದೊರೆಯುತ್ತಿದೆ. ಮೋಸಂಬಿ ಗಾತ್ರದ ಆಧಾರದ ಮೇಲೆ ₹60 ರಿಂದ ₹80 ದರ ಇದೆ.
ಹೂವಿನ ದರ ಕುಸಿತ: ಹಬ್ಬದಲ್ಲಿ ಆಕಾಶಕ್ಕೇರಿದ್ದ ಹೂವಿನ ದರ ಸದ್ಯ ಪಾತಾಳಕ್ಕೆ ಕುಸಿದಿದೆ. ಹಬ್ಬದ ದಿನ ಕೆ.ಜಿಗೆ ₹ 1500 ರಿಂದ ₹ 1800ರವರೆಗೆ ತಲುಪಿ ಹುಬ್ಬೇರಿಸಿದ್ದ ಕನಕಾಂಬರ ಪ್ರಸ್ತುತ 400ರಿಂದ 600ಕ್ಕೆ ಇಳಿದಿದೆ. ₹300ರವರೆಗೆ ಮಾರಾಟವಾಗಿದ್ದ ಸಣ್ಣ ಮಲ್ಲಿಗೆ ₹100 ರಿಂದ ₹160, ₹400 ಮುಟ್ಟಿದ್ದ ಮಲ್ಲಿಗೆ ₹280, ₹300 ತಲುಪಿದ್ದ ಸೇವಂತಿಗೆ ₹60 ರಿಂದ ₹80, ₹ 200ರವರೆಗೆ ಹೆಚ್ಚಿದ್ದ ಸುಗಂಧರಾಜ ₹100 ರಿಂದ ₹120ಕ್ಕೆ ಧಾರಣೆಯಾಗುತ್ತಿದೆ. ಆಯುಧ ಪೂಜೆಯವರೆಗೂ ಹೂವಿನ ದರ ಬಹುತೇಕ ಸ್ಥಿರವಾಗಿರಲಿದೆ ಎನ್ನುತ್ತಾರೆ ಹೂವಿನ ವ್ಯಾಪಾರಿ ರವಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.