ADVERTISEMENT

ಹೊರಗಿನವರಿಗೆ ಸ್ಪರ್ಧಿಸಲು ಅವಕಾಶ ಕೊಡೆವು: ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳು

ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳ ಒಗ್ಗಟ್ಟು, ಪ‍ಕ್ಷದಲ್ಲಿ ಗೊಂದಲ ಸೃಷ್ಟಿ: ರುದ್ರೇಶ್‌ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2022, 16:02 IST
Last Updated 26 ಸೆಪ್ಟೆಂಬರ್ 2022, 16:02 IST
ಬಿಜೆಪಿ ಮುಖಂಡರಾದ ನಿಜಗುಣರಾಜು, ಅಮ್ಮನಪುರ ಮಲ್ಲೇಶ್‌, ಎಂ.ರಾಮಚಂದ್ರ, ಡಾ.ಎ.ಆರ್‌.ಬಾಬು ಜಂಟಿಯಾಗಿ ಪತ್ರಿಕಾಗೋಷ್ಠಿ ನಡೆಸಿದರು
ಬಿಜೆಪಿ ಮುಖಂಡರಾದ ನಿಜಗುಣರಾಜು, ಅಮ್ಮನಪುರ ಮಲ್ಲೇಶ್‌, ಎಂ.ರಾಮಚಂದ್ರ, ಡಾ.ಎ.ಆರ್‌.ಬಾಬು ಜಂಟಿಯಾಗಿ ಪತ್ರಿಕಾಗೋಷ್ಠಿ ನಡೆಸಿದರು   

ಚಾಮರಾಜನಗರ: ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಆರ್‌ಐಡಿಎಲ್‌) ಅಧ್ಯಕ್ಷ ಎಂ.ರುದ್ರೇಶ್‌ ಅವರು ನಗರಕ್ಕೆ ಬಂದು, ‘ನಾನು ಚುನಾವಣಾ ಟಿಕೆಟ್‌ ಆಕಾಂಕ್ಷಿ, ವರಿಷ್ಠರೇ ನನ್ನನ್ನು ಇಲ್ಲಿಗೆ ಕಳುಹಿಸಿದ್ದಾರೆ’ ಎಂದು ಹೇಳಿರುವುದು ಚಾಮರಾಜನಗರ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳನ್ನು ಕೆರಳಿಸಿದ್ದು, ರುದ್ರೇಶ್‌ ವಿರುದ್ಧ ಹರಿಹಾಯ್ದಿದ್ದಾರೆ.

ಮುಂಬರುವ ಚುನಾವಣೆಗೆ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಾದ ಕಾಡಾ ಅಧ್ಯಕ್ಷ ನಿಜಗುಣರಾಜು, ಎಂ.ರಾಮಚಂದ್ರ, ಅಮ್ಮನಪುರ ಮಲ್ಲೇಶ್‌ ಮತ್ತು ಡಾ.ಎ.ಆರ್‌.ಬಾಬು ಅವರು ನಗರದಲ್ಲಿ ಸೋಮವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಒಗ್ಗಟ್ಟು ಪ್ರದರ್ಶಿಸಿದರು.

‘ಚುನಾವಣೆಯಲ್ಲಿ ಸ್ಥಳೀಯರಿಗೇ ಟಿಕೆಟ್‌ ನೀಡಬೇಕು. ಹೊರಗಿನವರಿಗೆ ಟಿಕೆಟ್‌ ನೀಡಲು ಅವಕಾಶ ನೀಡುವುದಿಲ್ಲ. ಇಲ್ಲಿ ಯಾರಿಗೇ ಕೊಟ್ಟರೂ ಎಲ್ಲರೂ ಒಗ್ಗಟ್ಟಿನಿಂದ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇವೆ’ ಎಂದು ಹೇಳಿದರು.

ADVERTISEMENT

ಇನ್ನಿಬ್ಬರು ಆಕಾಂಕ್ಷಿಗಳಾದ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಹಾಗೂ ನಾಗಶ್ರೀ ಪ್ರತಾಪ್‌ ಅವರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ, ‘ತುರ್ತು ಕಾರ್ಯದ ನಿಮಿತ್ತ ಅವರಿಗೆ ಭಾಗವಹಿಸಲು ಸಾಧ್ಯವಾಗಿಲ್ಲ. ಆದರೆ, ಅವರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ’ ಎಂದು ಮುಖಂಡರು ಸಮಜಾಯಿಷಿ ನೀಡಿದರು.

ಅನಗತ್ಯ ಗೊಂದಲ: ಅಮ್ಮನಪುರ ಮಲ್ಲೇಶ್‌ ಮಾತನಾಡಿ, ‘ರಾಮನಗರದವರಾದ ಎಂ.ರುದ್ರೇಶ್‌ ಅವರು ಅಲ್ಲಿ ರಾಜಕಾರಣ ಮಾಡುವುದು ಬಿಟ್ಟು 150 ಕಿ.ಮೀ ದೂರದಲ್ಲಿರುವ ಚಾಮರಾಜನಗರದಲ್ಲಿ ರಾಜಕಾರಣ ಮಾಡುವುದು ಬೇಡ. ಇಲ್ಲಿನ ಜನರು ಮುಗ್ಧರು ಜಿಲ್ಲೆ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ವರಿಷ್ಠರೇ ನನ್ನನ್ನು ಇಲ್ಲಿಗೆ ಕಳುಹಿಸಿದ್ದಾರೆ ಎಂದೆಲ್ಲ ಹೇಳಿದ್ದಾರೆ. ಅಲ್ಲಿಂದ ಇಲ್ಲಿಗೆ ಬಂದು ಸುಳ್ಳು ಹೇಳಿಕೆಗಳನ್ನು ನೀಡಿ ಪಕ್ಷದಲ್ಲಿ ಗೊಂದಲ ಸೃಷ್ಟಿಸುವುದನ್ನು ಅವರು ಬಿಡಬೇಕು. ಇಲ್ಲಿಯೇ ಹಲವರು ಟಿಕೆಟ್‌ ಆಕಾಂಕ್ಷಿಗಳಿದ್ದಾರೆ. ತಮ್ಮ ಇತಿಮಿತಿಯಲ್ಲಿ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ. ಪಕ್ಷದ ಯಾರಿಗಾದರೂ ಒಬ್ಬರಿಗೆ ಟಿಕೆಟ್‌ ನೀಡಿದರೆ ಉಳಿದವರು, ಒಟ್ಟಾಗಿ ಅವರ ಗೆಲುವಿಗೆ ಶ್ರಮಿಸಲಿದ್ದಾರೆ’ ಎಂದರು.

‘ರುದ್ರೇಶ್‌ ಅವರು ಭ್ರಷ್ಟಾಚಾರ ಮಾಡಿದ ಹಣದಲ್ಲಿ ಇಲ್ಲೆಲ್ಲ ಸುತ್ತಾಡಿ ಶಾಲಾ ಮಕ್ಕಳಿಗೆ ಚೀಲ ಕೊಡುತ್ತಿದ್ದಾರೆ. ಅವರು ಬೇಕಿದ್ದರೆ ರಾಮನಗರದಲ್ಲಿ ಸ್ಪರ್ಧಿಸಲಿ. ಅದು ಬಿಟ್ಟು, ಚಾಮರಾಜನಗರ ಜಿಲ್ಲೆಗೆ ಅವರು ಕಾಲಿಡುವುದು ಬೇಡ. ಪಕ್ಷದ ವರಿಷ್ಠರಿಗೂ ಇದನ್ನು ತಿಳಿಸಲಿದ್ದೇವೆ. ಭ್ರಷ್ಟಾಚಾರ ನಡೆಸುತ್ತಿರುವ ಅವರನ್ನು ಇನ್ನೂ ಆ ಹುದ್ದೆಯಲ್ಲಿ ಯಾಕೆ ಮುಂದುವರಿಸಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ’ ಎಂದರು.

‘ಅವರ ಆಮಿಷಗಳಿಗೆ ಬಲಿಯಾಗಿ ಇಲ್ಲಿಯ ಕೆಲವರು ಅವರನ್ನು ಕ್ಷೇತ್ರಕ್ಕೆ ಕರೆದುಕೊಂಡು ಬಂದು ಪಕ್ಷದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿಜಗುಣರಾಜು ಅವರು ಮಾತನಾಡಿ, ‘ರುದ್ರೇಶ್‌ ಅವರು ಭೇಟಿ ನೀಡಿದ ಗ್ರಾಮಗಳಲ್ಲಿ ಅನುದಾನ ನೀಡುವುದಾಗಿ ಸುಳ್ಳು ಭರವಸೆ ನೀಡಿದ್ದಾರೆ. ಕೆಆರ್‌ಐಡಿಎಲ್‌ ಕಾಮಗಾರಿ ನಡೆಸುವ, ಲಾಭ ಆಧಾರಿತ ಕಂಪನಿ. ಅದು ಅನುದಾನ ನೀಡುವುದಿಲ್ಲ. ಈ ವಿಚಾರವನ್ನು ನಾವು ವರಿಷ್ಠರಿಗೆ ತಿಳಿಸಿದ್ದೇವೆ. ಅವರು ಪ್ರವಾಸ ಮಾಡುವಂತೆ ತಿಳಿಸಿಲ್ಲ ಎಂದು ಹೇಳಿದ್ದಾರೆ. ಪಕ್ಷದಲ್ಲಿ ಟಿಕೆಟ್‌ ಹಂಚಿಕೆಗೆ ಒಂದು ವ್ಯವಸ್ಥೆ ಇದೆ. ಅದರಂತೆ ನಡೆಯಬೇಕು. ಅದು ‌ಬಿಟ್ಟು ಗಾಳಿಯಲ್ಲಿ ಗುಂಡು ಹೊಡೆದು ಗೊಂದಲ ಸೃಷ್ಟಿಸಬಾರದು’ ಎಂದರು.

ರಾಮಚಂದ್ರ ಹಾಗೂ ಡಾ.ಎ.ಆರ್‌.ಬಾಬು ಮಾತನಾಡಿ, ‘ಸ್ಥಳೀಯವಾಗಿ ಹಲವು ಮಂದಿ ಟಿಕೆಟ್‌ ಆಕಾಂಕ್ಷಿಗಳಿದ್ದಾರೆ. ದಿನನಿತ್ಯ ಕ್ಷೇತ್ರದ ಜನರೊಂದಿಗೆ ಒಡನಾಡುತ್ತಿದ್ದಾರೆ. ಪಕ್ಷವು ಸ್ಥಳೀಯರಿಗೆ ಟಿಕೆಟ್‌ ನೀಡಬೇಕು. ಹೊರಗಿನವರಿಗೆ ನೀಡುವುದಕ್ಕೆ ಅವಕಾಶ ನೀಡುವುದಿಲ್ಲ. ಹಲವು ವರ್ಷಗಳಿಂದ ಪಕ್ಷಕ್ಕೆ ಒಂದಲ್ಲ ಒಂದು ಸೇವೆ ಮಾಡಿಕೊಂಡು ಬಂದವರು ಹಲವರು ಇದ್ದಾರೆ. ಪಕ್ಷವನ್ನು ಕಟ್ಟಿ ಬೆಳೆಸಿದ್ದೇವೆ. ಅವರಲ್ಲಿ ಯಾರಿಗಾದರೂ ಟಿಕೆಟ್‌ ಕೊಡಲಿ. ಒಟ್ಟಾಗಿ ಕೆಲಸ ಮಾಡುತ್ತೇವೆ’ ಎಂದರು.

ಮುಖಂಡ ಸಿ.ಎನ್‌.ಬಾಲರಾಜು ‌ಇದ್ದರು.

‘ಸ್ಥಳೀಯರಿಗೆ ಟಿಕೆಟ್‌ ನೀಡಿ’

ಇದೇ ವಿ‌ಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಪ್ರತ್ಯೇಕವಾಗಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಮುಖಂಡ ಕೆಲ್ಲಂಬಳ್ಳಿ ಸೋಮನಾಯಕ, ‘ಸ್ಥಳೀಯವಾಗಿ ಹಲವು ಟಿಕೆಟ್‌ ಆಕಾಂಕ್ಷಿಗಳಿದ್ದಾರೆ. ಪಕ್ಷದ ವರಿಷ್ಠರು ಸ್ಥಳೀಯರಿಗೆ ಟಿಕೆಟ್‌ ನೀಡಬೇಕು. ನಮ್ಮ ಜಿಲ್ಲೆಗೆ ಒಂದು ಇತಿಹಾಸ ಇದೆ. ಕಳೆದ ವರ್ಷ ಚಾಮರಾಜನಗರ ಮತ್ತು ಹನೂರಿನಲ್ಲಿ ಕಡಿಮೆ ಮತಗಳಿಂದ ಸೋತಿದ್ದೇವೆ. ಹೊರಗಡೆಯಿಂದ ಬಂದು ವ್ಯಾಪಾರೀಕರಣದ ರಾಜಕಾರಣ ಮಾಡುವವರಿಗೆ ಟಿಕೆಟ್‌ ನೀಡಬಾರದು’ ಎಂದು ಆಗ್ರಹಿಸಿದರು.

‘ಹೊರಗಡೆಯಿಂದ ಬಂದು ಒಂದೆರಡು ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಚೀಲ, ಪುಸ್ತಕ ನೀಡಿದ ಮಾತ್ರಕ್ಕೆ ಇಲ್ಲಿಯ ಪ್ರಮುಖ ನಾಯಕನಾಗುವುದಿಲ್ಲ. ಇಲ್ಲಿಗೆ ಬಂದು ವ್ಯಾಪಾರೀಕರಣ ಹಾಗೂ ಬ್ಯಾನರ್ ರಾಜಕೀಯ ಮಾಡುವುದು ಬೇಡ. ಇಂತಹವರಿಗೆ ಮಠ ಮಾನ್ಯಗಳು ಮನ್ನಣೆ ಕೊಡಬಾರದು. ಅವರನ್ನು ತಮ್ಮ ಹತ್ತಿರಕ್ಕೆ ಸೇರಿಸಿಕೊಳ್ಳಬಾರದು’ ಎಂದು ಮನವಿ ಮಾಡಿದರು.

ನಗರಸಭೆ ಸದಸ್ಯ ಶಿವರಾಜು, ಯಜಮಾನರಾದ ರಾಜು ನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.