ಚಾಮರಾಜನಗರ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆತ ಕೃತ್ಯ ಖಂಡಿಸಿ ಸಂವಿಧಾನ ಸಂರಕ್ಷಣಾ ಸಮಿತಿ ವತಿಯಿಂದ ಅ.18ರಂದು ಚಾಮರಾಜನಗರ ಬಂದ್‌ಗೆ ಕರೆ ನೀಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಅಯ್ಯನಪುರ ಶಿವಕುಮಾರ್ ತಿಳಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಾಜಗಳ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವ್ಯಾಪಾರಿಗಳು, ವರ್ತಕರು ಸೇರಿದಂತೆ ಎಲ್ಲ ವರ್ಗಗಳ ಮುಖಂಡರ ಜೊತೆ ಪೂರ್ವಭಾವಿ ಸಭೆ ನಡೆಸಿ ಸ್ವಯಂಪ್ರೇರಿತ ಬಂದ್‌ಗೆ ನಿರ್ಧರಿಸಲಾಗಿದೆ.
18 ರಂದು ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಬಂದ್ ನಡೆಯಲಿದ್ದು ಅಂದು ಭುವನೇಶ್ವರಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ‍್ಯಾಲಿ ನಡೆಯಲಿದೆ. ರಾಜಕೀಯ ಪಕ್ಷಗಳು, ಹೋಟೆಲ್ ಮಾಲೀಕರು, ವ್ಯಾಪಾರಿಗಳು, ಗೂಡ್ಸ್ ಹಾಗೂ ಸಾರಿಗೆ ವಾಹನಗಳ ಚಾಲಕರು–ಮಾಲೀಕರು, ಕನ್ನಡಪರ ಹೋರಾಟಗಾರರು, ಪ್ರಗತಿಪರ ಸಂಘಟನೆಗಳ ಹೋರಾಟಗಾರರು ಬಂದ್‌ಗೆ ಬೆಂಬಲ ನೀಡಿದ್ದಾರೆ ಎಂದು ತಿಳಿಸಿದರು.
ಮನುವಾದಿ ವಕೀಲ ರಾಕೇಶ್ ಕಿಶೋರ್ ಸುಪ್ರೀಂಕೋರ್ಟ್ ಸಿಜೆಐ ಮೇಲೆ ಶೂ ಎಸೆದು ನ್ಯಾಯಪೀಠ ಹಾಗೂ ಸಂವಿಧಾನ ವ್ಯವಸ್ಥೆಗೆ ಅಪಮಾನ ಮಾಡಿದ್ದಾರೆ. ಆರೋಪಿ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಗಡೀಪಾರು ಮಾಡಬೇಕು ಎಂದು ಅಯ್ಯನಪುರ ಶಿವಕುಮಾರ್ ಒತ್ತಾಯಿಸಿದರು.
ಮೈಸೂರು ಚಾಮರಾಜನಗರ ಜಿಲ್ಲಾ ನಾಯಕ ಸಮಾಜದ ಅಧ್ಯಕ್ಷ ಎಂ.ರಾಮಚಂದ್ರ ಮಾತನಾಡಿ, ನ್ಯಾಯಾಲಯದ ತೀರ್ಪು ತೃಪ್ತಿಯಾಗದಿದ್ದರೆ ಮೇಲ್ಮನವಿ ಸಲ್ಲಿಸಿ ಕಾನೂನು ಹೋರಾಟ ಮಾಡಲು ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಅವಕಾಶವಿದೆ. ಆದರೆ, ವಕೀಲ ರಾಕೇಶ್ ಕಿಶೋರ್ ಸಂವಿಧಾನ ಪೀಠಕ್ಕೆ ಅವಮಾನ ಮಾಡಿದ್ದು ಖಂಡನೀಯ ಎಂದರು.
ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಎಸ್.ಕೆ.ಉಮೇಶ್, ಉಪ್ಪಾರ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವ್, ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾರಂ ಶ್ರೀನಿವಾಸ ಗೌಡ, ಎಸ್‌ಡಿಪಿಐ ಮುಖಂಡ ಅಬ್ರಾರ್ ಅಹಮದ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಆರ್.ಮಹದೇವ್, ಮುಖಂಡ ನಾಗವಳ್ಳಿ ನಾಗಯ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.