ADVERTISEMENT

‌ಚಾಮರಾಜನಗರ| ಉದ್ಯಮ ಆರಂಭಕ್ಕೆ ಉದ್ಯೋಗ ಸೃಷ್ಟಿಗೆ ಅವಕಾಶ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 6:51 IST
Last Updated 13 ಜನವರಿ 2026, 6:51 IST
ಚಾಮರಾಜನಗರದ ಹಳೆ ಕೆಡಿಪಿ ಸಭಾಂಗಣದಲ್ಲಿ ಸೋಮವಾರ ಉದ್ಯೋಗ ಮತ್ತು ಜೀವನೋಪಾಯ ಶ್ರೇಷ್ಠತಾ ಕೇಂದ್ರ ಹಾಗೂ ಜಿಲ್ಲಾಡಳಿತ ಸಹಯೋಗದಲ್ಲಿ ಉದ್ಯಮಶೀಲರಿಗಾಗಿ ಆಯೋಜಿಸಿದ್ದ ಬಿಸಿನೆಸ್ ಎಕ್ಸಲೆನ್ಸ್ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಶ್ರೀರೂಪಾ ಮಾತನಾಡಿದರು
ಚಾಮರಾಜನಗರದ ಹಳೆ ಕೆಡಿಪಿ ಸಭಾಂಗಣದಲ್ಲಿ ಸೋಮವಾರ ಉದ್ಯೋಗ ಮತ್ತು ಜೀವನೋಪಾಯ ಶ್ರೇಷ್ಠತಾ ಕೇಂದ್ರ ಹಾಗೂ ಜಿಲ್ಲಾಡಳಿತ ಸಹಯೋಗದಲ್ಲಿ ಉದ್ಯಮಶೀಲರಿಗಾಗಿ ಆಯೋಜಿಸಿದ್ದ ಬಿಸಿನೆಸ್ ಎಕ್ಸಲೆನ್ಸ್ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಶ್ರೀರೂಪಾ ಮಾತನಾಡಿದರು   

ಚಾಮರಾಜನಗರ: ಉದ್ಯಮ ಆರಂಭಿಸಲು ಬಯಸುವವರಿಗೆ ಹಣಕಾಸು ಸೌಲಭ್ಯಗಳು ಲಭ್ಯವಿದ್ದು ಜಿಲ್ಲೆಯ ಯುವಜನತೆ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶ್ರೀರೂಪಾ ಸಲಹೆ ನೀಡಿದರು.

ನಗರದ ಹಳೆಯ ಕೆಡಿಪಿ ಸಭಾಂಗಣದಲ್ಲಿ ಸೋಮವಾರ ಉದ್ಯೋಗ ಮತ್ತು ಜೀವನೋಪಾಯ ಶ್ರೇಷ್ಠತಾ ಕೇಂದ್ರ ಹಾಗೂ ಜಿಲ್ಲಾಡಳಿತ ಸಹಯೋಗದಲ್ಲಿ ಉದ್ಯಮಶೀಲರಿಗಾಗಿ ಆಯೋಜಿಸಿದ್ದ ಬಿಸಿನೆಸ್ ಎಕ್ಸಲೆನ್ಸ್ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ‘ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮ ಚಟುವಟಿಕೆಗಳನ್ನು ಕೈಗೊಳ್ಳಲು ಹಣಕಾಸು ಸಂಸ್ಥೆಗಳು ಸಾಲಸೌಲಭ್ಯ ಒದಗಿಸುತ್ತಿವೆ. ಉದ್ಯಮ ಮಾಡುವ ಬಗ್ಗೆ ಆಸಕ್ತಿ ಹೊಂದಿರುವವರು ಹಣಕಾಸು ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಉದ್ಯಮ ಸ್ಥಾಪನೆ ಮಾಡಿ ಉದ್ಯೋಗ ಸೃಷ್ಟಿಸಬೇಕು, ಇದರಿಂದ ಜಿಲ್ಲೆಯ ಪ್ರಗತಿಗೂ ಅನುಕೂಲವಾಗಲಿದೆ ಎಂದು ಶ್ರೀರೂಪಾ ಹೇಳಿದರು.

ಉದ್ಯಮಶೀಲರಾಗಲು ಬಯಸುವರಿಗೆ ಕಾರ್ಯಾಗಾರದಲ್ಲಿ ಉತ್ತಮ ಮಾಹಿತಿ ಹಾಗೂ ಮಾರ್ಗದರ್ಶನ ದೊರೆಯಲಿದ್ದು ಉದ್ಯಮ ಆರಂಭಿಸಲು ಪೂರಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದರು.

ADVERTISEMENT

ಜಿಲ್ಲೆಯಲ್ಲಿ ಉದ್ಯೋಗಗಳನ್ನು ಸೃಷ್ಟಿಸಲು ಸಹಕಾರಿಯಾಗುವಂತೆ ವೋಲ್ವೋ ಗ್ರೂಪ್ ಹೂಡಿಕೆ ಅವಕಾಶಗಳನ್ನು ಪರಿಶೀಲಿಸಬೇಕು. ಸಿಐಐ-ಸಿಇಎಲ್ ಮೂಲಕ ವೋಲ್ವೋ ಗ್ರೂಪ್ ಸಿಎಸ್‌ಆರ್ ಅನುದಾನದ ನೆರವಿನಿಂದ ಕಾರ್ಯಕ್ರಮ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಶ್ರೀರೂಪ ತಿಳಿಸಿದರು.

ವೋಲ್ವೋ ಗ್ರೂಪ್‌ನ ಸಿಎಸ್‌ಆರ್ ನಿರ್ದೇಶಕ ಜಿ.ವಿ.ರಾವ್ ಮಾತನಾಡಿ ಸಿಐಐ-ಸಿಇಎಲ್ ಮತ್ತು ಸಿಎಸ್‌ಆರ್ ಮೂಲಕ ಸಂಸ್ಥೆಯು ದೇಶದಾದ್ಯಂತ ಸೂಕ್ಷ್ಮ ಗಾತ್ರದ ಉದ್ಯಮಗಳನ್ನು ಬೆಂಬಲಿಸುತ್ತಿದೆ. ಉದ್ಯಮಶೀಲರು ಕಲಿಕೆಯನ್ನು ತಂತ್ರಾತ್ಮಕ ಹೂಡಿಕೆಯಾಗಿ ಪರಿಗಣಿಸಬೇಕು, ಚಾಮರಾಜನಗರ ಜಿಲ್ಲೆಯಲ್ಲಿಯೂ ಸೂಕ್ಷ್ಮ ಉದ್ಯಮಗಳ ಬೆಳವಣಿಗೆಗೆ ವೋಲ್ವೋ ಗ್ರೂಪ್ ಬೆಂಬಲ ನೀಡಲಿದೆ ಎಂದರು.

ಮೈಸೂರು ವಲಯ ಮಂಡಳಿಯ ಅಧ್ಯಕ್ಷರು ಹಾಗೂ ಆಟೋಮೊಟಿವ್ ಆಕ್ಸಲ್ಸ್ ಲಿಮಿಟೆಡ್‌ ಅಧ್ಯಕ್ಷ ಹಾಗೂ ನಿರ್ದೇಶಕ ನಾಗರಾಜ ಗರ್ಗೇಶ್ವರಿ ಕೈಗಾರಿಕಾ ಅಭಿವೃದ್ಧಿಗೆ ಸಂಬಂಧಿಸಿದ ನೀತಿ ಉಪಕ್ರಮಗಳ ಕುರಿತು ಮಾಹಿತಿ ನೀಡಿ ಉದ್ಯಮಶೀಲರು ವ್ಯವಸ್ಥಿತವಾಗಿ ಸಾಮರ್ಥ್ಯ ವೃದ್ಧಿಸಿಕೊಳ್ಳುವುದು, ಮಾರ್ಗದರ್ಶನ ಮತ್ತು ಕೈಗಾರಿಕಾ ಅನುಭವದಿಂದ ಹೇಗೆ ಲಾಭ ಪಡೆಯಬಹುದು ಎಂಬುದನ್ನು ವಿವರಿಸಿದರು.

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಉಪನಿರ್ದೇಶಕ ದೊರೈರಾಜು ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋನಾ ರೋತ್ ಅವರ ಸಂದೇಶ ವಾಚಿಸಲಾಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ, ಸಿಐಐ ಸೆಲ್ ತಂಡದ ಪಿ.ಹರಿಹರನ್, ಸಯಾನಿ ಚಟರ್ಜಿ, ಸಿಎಸ್‌ಆರ್ ಜಿಲ್ಲಾ ಸಂಯೋಜಕಿ ರಕ್ಷಿತಾ ನಾಯಕ್ ಕಾರ್ಯಕ್ರಮದಲ್ಲಿ ಇದ್ದರು.