ADVERTISEMENT

ಯಳಂದೂರು: ಚಾಮುಂಡೇಶ್ವರಿ ಉತ್ಸವಕ್ಕೆ ಜನಸಾಗರ

ಅಂಬಳೆ ಗ್ರಾಮದಲ್ಲಿ ಎಳನೀರು, ಪಂಜಿನ ಸೇವೆ ಸಲ್ಲಿಸಿದ ಮಹಿಳೆಯರು

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2022, 4:17 IST
Last Updated 15 ಸೆಪ್ಟೆಂಬರ್ 2022, 4:17 IST
ಯಳಂದೂರು ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿ ಬುಧವಾರ ನಡೆದ ಚಾಮುಂಡೇಶ್ವರಿ ಹಬ್ಬದಲ್ಲಿ ಪಾಲ್ಗೊಂಡಿದ್ದ ಜನರು
ಯಳಂದೂರು ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿ ಬುಧವಾರ ನಡೆದ ಚಾಮುಂಡೇಶ್ವರಿ ಹಬ್ಬದಲ್ಲಿ ಪಾಲ್ಗೊಂಡಿದ್ದ ಜನರು   

ಯಳಂದೂರು: ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿ ಬುಧವಾರ ಚಾಮುಂಡೇಶ್ವರಿ ಉತ್ಸವ ಸಂಭ್ರಮದಿಂದ ನಡೆಯಿತು.

ಸುಮಂಗಲಿಯರು ನಸುಕಿನಿಂದಲೇ ಎಳನೀರು ಮತ್ತು ಪಂಜು ಸೇವೆ ಸಲ್ಲಿಸಿ, ದೇವರಿಗೆ ಪ್ರಸಾದ ಅರ್ಪಿಸಿದರು. ಮಧ್ಯಾಹ್ನ ನಡೆದ ಚಂಡಿ ಮತ್ತು ರಕ್ತ ಬೀಜಾಸುರನ ಕಾಳಗಕ್ಕೆ ಭಕ್ತ ಸಾಗರ ಸಾಕ್ಷಿಯಾಯಿತು.

ಈ ಹಬ್ಬದಲ್ಲಿ ಒಂದೊಂದು ದೇವರಿಗೆ ಭಕ್ತರು ಹರಕೆ ಒಪ್ಪಿಸುವ ವಾಡಿಕೆ ಇದೆ. ಪರಿಶಿಷ್ಟರು ಗದ್ದೆ ಮಾರಮ್ಮನಿಗೆ ತಂಬಿಟ್ಟು ಇಟ್ಟು, ಆರತಿ ಬೆಳಗುತ್ತಾರೆ. ನಂತರ ಗ್ರಾಮದಲ್ಲಿ ರಸ ಮುದ್ರೆ ಇಡುತ್ತಾರೆ. ಅರ್ಚಕರು ಗಂಡು–ಹೆಣ್ಣು ದೇವರನ್ನು ಪ್ರತಿನಿಧಿಸುತ್ತಾರೆ. ಹಬ್ಬ ಸಮಾಪ್ತಿಯಾಗುವ ತನಕ ಮೂರು ದೇವಾಲಯಗಳಲ್ಲಿ ಅರ್ಚಕರು ಆಶ್ರಯ ಪಡೆಯುತ್ತಾರೆ. ಇಲ್ಲಿ ಕಠಿಣ ನೇಮ ನಿಷ್ಠೆ ಪೂರೈಸಿ ಮಳೆ, ಬೆಳೆ ಸಮೃದ್ಧಿಗಾಗಿ ದೇವಿಯನ್ನು ಆರಾಧಿಸುತ್ತಾರೆ. 45 ದಿನಗಳ ಕಾಲ ಈ ಹಬ್ಬ ಜರುಗುತ್ತದೆ.

ADVERTISEMENT

‘ಕಂದಹಳ್ಳಿ, ಬೂದಂಬಳ್ಳಿ, ಚಂಗಚಹಳ್ಳಿ ಗ್ರಾಮಸ್ಥರು ನಸುಕಿ ನಿಂದಲೇ ಊರ ಮಧ್ಯದ ದೇವರ ಅಖಾಡದಲ್ಲಿ ರಕ್ತ ಬೀಜಾಸುರನ ಕಾಳಗಕ್ಕೆ ವೇದಿಕೆ ಸಜ್ಜುಗೊಳಿಸಿದ್ದರು. ಮಧ್ಯಾಹ್ನ ಗ್ರಾಮಸ್ಥರು ನಾಲ್ಕು ಮೂಲೆಗಳಲ್ಲಿ ಬಿದಿರು ತಟ್ಟೆ ನೆಟ್ಟ ಸ್ಥಳಕ್ಕೆ ಸತ್ತಿಗೆ, ಸೂರಿಪಾನಿ ಹೊತ್ತು ಸಾಗಿದರು. ಹೆಬ್ಬರಕ್ಕೆ ಪುಷ್ಪ, ಸುಗಂಧಗಳನ್ನು ಇಟ್ಟು, ಶಬ್ದ ಮಾಡುತ್ತಾ ಮೆರವಣಿಗೆಯಲ್ಲಿ ಪ್ರವೇಶಿಸಿದರು. ಕಿಕ್ಕಿರಿದು ತುಂಬಿದ ಜನಸ್ತೋಮದ ಜಯ ಘೋಷಗಳ ನಡುವೆ ಚಾಮುಂಡೇಶ್ವರಿ ದುಷ್ಟ ಶಕ್ತಿಯನ್ನು ಸಂಹಾರ ನಡೆಸುವ ಭಕ್ತರ ವೈಭವವನ್ನು ಸಾವಿರಾರು ಜನರು ಕಣ್ತುಂಬಿಕೊಂಡರು.

ದೇವಾಳಮ್ಮ, ಬಸವೇಶ್ವರ, ಆರ್ವತಮ್ಮ ಗುಡಿಗಳಲ್ಲಿ ಪೂಜೆ ನಡೆಯಿತು. ಭಕ್ತರು ವೈವಿಧ್ಯಮಯ ಪೋಷಾಕು ಧರಿಸಿ ಗಮನ ಸೆಳೆದರು. ಪುರಾಣದ ದೇವ–ದೇವತೆಗಳ ಕದನ ಗಳನ್ನು ಗ್ರಾಮಸ್ಥರು ಸಾಂಕೇತಿಕವಾಗಿ ಆಚರಿಸಿದರು.‌

ಸೆ.18ರಂದು ದೇವಳದ ಮುಂಭಾಗ ಉಮಾ ಮಹೇಶ್ವರಿ ಕೊಂಡೋತ್ಸವ ಜರುಗಲಿದೆ. ಮಡೆ ಉತ್ಸವ ಮತ್ತು ರಂಗ ಚದುರಿಸುವ ಧಾರ್ಮಿಕ ಕ್ರಿಯೆಗಳು ಶಾಸ್ತ್ರೋಕ್ತವಾಗಿ ಜರುಗಲಿವೆ. ಹಬ್ಬ ಸೆ.24ರಂದು ಸಂಪನ್ನಗೊಳ್ಳಲಿದೆ ಎಂದು ಗ್ರಾಮಸ್ಥರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.