ಯಳಂದೂರು: ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿ ಗುರುವಾರ ಪುರಾಣ ಪ್ರಸಿದ್ಧ ಚಾಮುಂಡೇಶ್ವರಿ ರಥೋತ್ಸವ ಅಪಾರ ಭಕ್ತರ ಸಡಗರ ಸಂಭ್ರಮಗಳ ನಡುವೆ ಅದ್ದೂರಿಯಾಗಿ ಜರುಗಿತು.
ಅಷಾಢ ಶುದ್ಧ ಪೂರ್ಣಿಮೆ ಪೂರ್ವಾಷಾಢ ನಕ್ಷತ್ರದಲ್ಲಿ ಸಾವಿರಾರು ಭಕ್ತರು ಚಾಮುಂಡೇಶ್ವರಿಯ ದೇವಾಲಯದಲ್ಲಿ ಸರ್ವಾಲಂಕೃತ ದೇವಿಯ ದರ್ಶನ ಪಡೆದರು. ಮಕ್ಕಳು ಮತ್ತು ಮಹಿಳೆಯರು ಹೂ, ಹಣ್ಣು ಕಾಯಿ ಪೂಜೆ ನೆರವೇರಿಸಿ ಧನ್ಯತೆ ಮೆರೆದರು. ದೇಗುಲದ ಸುತ್ತಲೂ ಧೂಪ ದೀಪ ಬೆಳಗಿ ಸನ್ಮಂಗಳವನ್ನು ಉಂಟುಮಾಡುವಂತೆ ದೇವಿಯನ್ನು ಪ್ರಾರ್ಥಿಸಿದರು.
ಮುಂಜಾನೆಯಿಂದಲೇ ಅಷ್ಟ ದೇವಿಯರ ಮೂಲಮೂರ್ತಿಗೆ ಬಗೆ ಬಗೆ ಪುಷ್ಪಗಳ ಅಲಂಕಾರ ಮಾಡಿ, ತಂಪು ತುಂಬಲಾಗಿತ್ತು. ಮಧ್ಯಾಹ್ನ ಮಂಗಳಾರತಿ ನೆರವೇರಿಸಿ ಭಕ್ತರ ದರ್ಶನಕ್ಕೆ ಮುಕ್ತಗೊಳಿಸಲಾಯಿತು. ಉತ್ಸವಮೂರ್ತಿಯನ್ನು ಹೂ ಹಾರಗಳಿಂದ ಸಿಂಗರಿಸಿ, ಆಭರಣಗಳಿಂದ ಅಲಂಕರಿಸಿ ರಥಾರೋಹಣ ಮಾಡಲಾಯಿತು. ಈ ಸಮಯದಲ್ಲಿ ಮಂಗಳವಾದ್ಯ ಮೊಳಗಿಸಿ, ದೇವಿಯನ್ನು ಅರ್ಚಿಸಲಾಯಿತು. ಈ ವೇಳೆ ನೆರದಿದ್ದ ಸಾವಿರಾರು ಮಂದಿ ದೇವರ ಬೆಳ್ಳಿ ದಂಡಕಗಳನ್ನು ಹೊತ್ತು ದೇಗುಲದ ಸುತ್ತಲೂ ತೇರನ್ನು ಎಳೆದು ಪುನೀತರಾದರು.
ಪ್ರತಿ ಭಕ್ತರಿಗೂ ಪಾಯಸದ ಊಟ ವಿತರಿಸಲಾಯಿತು. ದೇವಳದ ಆಡಳಿತ ಮಂಡಳಿ ಸದಸ್ಯರು ಮತ್ತು ಅರ್ಚಕರು ಗುರು ಪೂರ್ಣಿಮೆ ಉತ್ಸವ ಸಾಂಗವಾಗಿ ಜರುಗಲು ನೆರವಾದರು ಎಂದು ಚಿಂತಕ ನಾಗೇಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.