ADVERTISEMENT

ಚಾಮರಾಜನಗರ: ವಿಷಮುಕ್ತ, ಆರೋಗ್ಯಕರ ಬೆಲ್ಲ ತಯಾರಿಕೆ ಗುರಿ

ಜಿಲ್ಲೆಯ ಆಲೆಮನೆಗಳಿಗೆ ಆಧುನಿಕ ಸ್ಪರ್ಶ, ರೈತರಿಗೆ ಪ್ರಾತ್ಯಕ್ಷಿಕೆ ಮೂಲಕ ತರಬೇತಿ

ಸೂರ್ಯನಾರಾಯಣ ವಿ
Published 21 ಫೆಬ್ರುವರಿ 2021, 19:30 IST
Last Updated 21 ಫೆಬ್ರುವರಿ 2021, 19:30 IST
ಯಳಂದೂರಿನಲ್ಲಿ ರಾಸಾಯನಿಕ ಮುಕ್ತ ಬೆಲ್ಲವನ್ನು ತಯಾರಿಸುವ ವಿಧಾನವನ್ನು ರಮೇಶ್‌ ಅವರು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು
ಯಳಂದೂರಿನಲ್ಲಿ ರಾಸಾಯನಿಕ ಮುಕ್ತ ಬೆಲ್ಲವನ್ನು ತಯಾರಿಸುವ ವಿಧಾನವನ್ನು ರಮೇಶ್‌ ಅವರು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು   

ಚಾಮರಾಜನಗರ: ಜಿಲ್ಲೆಯಲ್ಲಿರುವ ಸಾಂಪ್ರದಾಯಿಕ ಆಲೆಮನೆಗಳಿಗೆ ಪುನಶ್ಚೇತನ ನೀಡಲು ಮುಂದಾಗಿರುವ ಜಿಲ್ಲಾಡಳಿತ, ಬೆಲ್ಲ ತಯಾರಿಕೆ ಪ್ರಕ್ರಿಯೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಸುವಂತೆ ಹಾಗೂ ಬೆಲ್ಲಕ್ಕೆ ರಾಸಾಯನಿಕಗಳನ್ನು ಹಾಕದಂತೆ ಆಲೆಮನೆಗಳ ಮಾಲೀಕರು ಹಾಗೂ ರೈತರನ್ನು ಪ್ರೇರೇಪಿಸುವ ಕೆಲಸ ಮಾಡುತ್ತಿದೆ.

ಜಿಲ್ಲಾ ಪಂಚಾಯಿತಿಯ ಖಾದಿ ಮತ್ತು ಗ್ರಾಮೋದ್ಯೋಗ ವಿಭಾಗವು ಜೆಎಸ್‌ಎಸ್‌ ನೈಪುಣ್ಯತಾ ತರಬೇತಿ ಸಂಸ್ಥೆಯ ಸಹಕಾರ ಪಡೆದುಕೊಂಡು ತಜ್ಞರ ಮೂಲಕ ಆಲೆ‌ಮನೆ ಮಾಲೀಕರು ಹಾಗೂ ಆಸಕ್ತ ರೈತರಿಗೆ ತರಬೇತಿ ನೀ‌ಡುತ್ತಿದೆ. ಮೊದಲ ಹಂತದ ತರಬೇತಿ ಮುಕ್ತಾಯವಾಗಿದ್ದು, ಎರಡನೇ ಹಂತ‌ದ್ದು ನಡೆಯುತ್ತಿದೆ. ಚಾಮರಾಜನಗರ ಹಾಗೂ ಯಳಂದೂರು ತಾಲ್ಲೂಕುಗಳಲ್ಲಿ ನಡೆದಿದೆ. ಕೊಳ್ಳೇಗಾಲ ಮತ್ತು ಗುಂಡ್ಲುಪೇಟೆ ತಾಲ್ಲೂಕುಗಳಲ್ಲಿ ಸೋಮವಾರ ಮತ್ತು ಮಂಗಳವಾರ ಪ್ರಾತ್ಯಕ್ಷಿಕೆ ಸಹಿತ ತರಬೇತಿ ನಡೆಯಲಿದೆ. ‌ಮೂರನೇ ಹಂತದ ತರಬೇತಿ ಇದೇ 25ರಿಂದ ಮಾರ್ಚ್‌ 3ರವರೆಗೆ ನಡೆಯಲಿದೆ.

ಜಿಲ್ಲೆಯಲ್ಲಿ 250 ಆಲೆಮನೆಗಳಿದ್ದು, ಬಹುತೇಕ ಮುಚ್ಚುವ ಸ್ಥಿತಿಗೆ ಬಂದಿವೆ. ಇವುಗಳ ಮಾಲೀಕರಿಗೆ ಬ್ಯಾಂಕುಗಳಿಂದ ಸಬ್ಸಿಡಿ ಆಧಾರದಲ್ಲಿ ಸಾಲ ಕೊಡಿಸಿ ಆಲೆಮನೆಗಳನ್ನು ಆಧುನೀಕರಣಗೊಳಿಸಿ ರಾಸಾಯನಿಕ ಮುಕ್ತ, ಆರೋಗ್ಯ ಕರ ಬೆಲ್ಲ ತಯಾರಿಸಿ, ಅದರ ಮೌಲ್ಯವರ್ಧನೆ ಮಾಡಿ ಮಾರಾಟ ಮಾಡುವುದಕ್ಕೆ ಅವಕಾಶ ಕಲ್ಪಿಸುವುದು ಯೋಜನೆಯ‍‍ಉದ್ದೇಶ.

ADVERTISEMENT

ಮಾಲೀಕರ ಬಂಡವಾಳ ಹೂಡಿಕೆ ಸಾಮರ್ಥ್ಯಕ್ಕೆ ತಕ್ಕಂತೆ ವಿವಿಧ ಮೊತ್ತದ ಬಂಡವಾಳಕ್ಕೆ ಅನುಗುಣವಾಗಿಖಾದಿ ಮತ್ತು ಗ್ರಾಮೋದ್ಯೋಗ ವಿಭಾಗವು ಯೋಜನಾ ವರದಿ ಸಿದ್ಧಪಡಿಸಿದೆ. ಇದರ ಭಾಗವಾಗಿ ಆಧುನಿಕ ಪದ್ಧತಿಯಲ್ಲಿ ರಾಸಾಯನಿಕ ಮುಕ್ತ ಬೆಲ್ಲ ತಯಾರಿಕೆ ವಿಧಾನವನ್ನು ಆಲೆಮನೆ ಮಾಲೀಕರಿಗೆ ಹಾಗೂ ರೈತರಿಗೆ ತಿಳಿಸಿಕೊಡುವುದಕ್ಕಾಗಿ ಪ್ರಾತ್ಯಕ್ಷಿಕೆ ಮೂಲಕ ವಿವರಿಸಲಾಗುತ್ತಿದೆ.

‘ನಮ್ಮಲ್ಲಿರುವ ಆಲೆಮನೆಗಳಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಬೆಲ್ಲ ತಯಾರಿಸಲಾಗುತ್ತಿದೆ. ಇಲ್ಲಿ ಉತ್ಪಾದನಾ ವೆಚ್ಚ, ಉತ್ಪನ್ನ ನಷ್ಟದ (ವೇಸ್ಟೇಜ್‌) ಪ್ರಮಾಣವೂ ಹೆಚ್ಚು. ಬೆಲ್ಲ ತಯಾರಿಸುವಾಗ ಅದಕ್ಕೆ ಆಕರ್ಷಕ ಬಣ್ಣ ಬರುವಂತೆ ಮಾಡಲು ರಾಸಾಯನಿಕವನ್ನೂ ಬಳಸುತ್ತಿದ್ದಾರೆ. ಆಲೆಮನೆಗಳಲ್ಲಿ ಸ್ವಚ್ಛತೆಯನ್ನೂ ಕಾಪಾಡಿಕೊಳ್ಳುತ್ತಿಲ್ಲ. ಆಲೆಮನೆಗಳಲ್ಲಿ ಆಧುನಿಕ ಸಲಕರಣೆಗಳನ್ನು ಬಳಸಿ, ಆರೋಗ್ಯಕರ ಬೆಲ್ಲವನ್ನು ತಯಾರಿಸುವಂತೆ ಮಾಡಲು ಈ ಯೋಜನೆ ರೂಪಿಸಲಾಗಿದೆ’ ಎಂದು ಖಾದಿ ಮತ್ತು ಗ್ರಾಮೊದ್ಯೋಗ ವಿಭಾಗದ ಉಪ ನಿರ್ದೇಶಕ ರಾಜೇಂದ್ರ ಪ್ರಸಾದ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘₹5, ₹10 ಲಕ್ಷದಿಂದಹಿಡಿದು ₹8 ಕೋಟಿವರೆಗೂ ಬಂಡವಾಳ ಹೂಡಿ ವ್ಯವಸ್ಥಿತವಾಗಿ ಆಲೆಮನೆ ಅಭಿವೃದ್ಧಿ ಪಡಿಸುವ ಯೋಜನೆಗಳನ್ನು ಸಿದ್ಧಪಡಿಸಲಾಗಿದೆ. ಕೆಲವು ಆಲೆಮನೆಗಳ ಮಾಲೀಕರು ಹಾಗೂ ರೈತರು ಇದರ ಬಗ್ಗೆ ಆಸಕ್ತಿಯನ್ನೂ ತೋರಿಸಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಈ ಮಾದರಿಯ ಕೆಲವು ಆಧುನಿಕ ಆಲೆಮನೆಗಳ ನಿರ್ಮಾಣವಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ತಯಾರಾಗುತ್ತಿರುವುದು ರಾಸಾಯನಿಕ ಬೆಲ್ಲ

‘ಈಗ ಆಲೆಮನೆಗಳಲ್ಲಿ ಅರೆ ಉಕ್ಕಿನ ಕೊಪ್ಪರಿಗೆ (ಎಂ.ಎಸ್‌.ಪ್ಯಾನ್‌–ಕಬ್ಬಿಣದ ಅಂಶ ಹೆಚ್ಚು) ಬಳಸಲಾಗುತ್ತದೆ. ಇದರಲ್ಲಿ ಕಬ್ಬಿನ ರಸ ಕಾಯಿಸುವಾಗ ಸಾಕಷ್ಟು ಪ್ರಮಾಣದಲ್ಲಿ ಕೊಪ್ಪರಿಗೆಯ ಪುಡಿ ಅದರಲ್ಲಿ ಸೇರುತ್ತದೆ. ಅದಲ್ಲದೇ, ಬೆಲ್ಲಕ್ಕೆ ಬಿಳಿ ಬಣ್ಣ ಬರುವಂತೆ ಮಾಡಲು ರಾಸಾಯನಿಕವನ್ನೂ ಬಳಸುತ್ತಾರೆ. ಕ್ಯಾನ್ಸರ್‌ ಕಾರಕ ಅಂಶಗಳು ಈ ರಾಸಾಯನಿಕದಲ್ಲಿವೆ. ಈ ವ್ಯವಸ್ಥೆ ಮೊದಲು ಬದಲಾಗಬೇಕು. ಉಕ್ಕಿನ (ಸ್ಟೈನ್‌ಲೆಸ್‌ ಸ್ಟೀಲ್‌) ಕೊಪ್ಪರಿಗೆಯನ್ನೇ ಬಳಸಬೇಕು. ಬೆಲ್ಲ ತಯಾರಿಸುವಾಗ ರಾಸಾಯಾನಿಕವನ್ನು ಬಳಸಲೇ ಬಾರದು. ಇದನ್ನು ಆಲೆಮನೆ ಮಾಲೀಕರಿಗೆ ಹಾಗೂ ರೈತರಿಗೆ ಪ್ರಾತ್ಯಕ್ಷಿಕೆ ಮೂಲಕ ತೋರಿಸುತ್ತಿದ್ದೇವೆ’ ಎಂದುಸಂಪನ್ಮೂಲ ವ್ಯಕ್ತಿ ಹಾಗೂ ಅಹಮದಾಬಾದ್‌ನ ಉದ್ಯಮಶೀಲತೆ ಅಭಿವೃದ್ಧಿ ಸಂಸ್ಥೆಯ ಮಾಜಿ ನಿರ್ದೇಶಕ ಎನ್‌.ರಮೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಯಳಂದೂರಿನ ಅಂಬಳೆಯಲ್ಲಿ ಶನಿವಾರ ಸಾವಯವ ಬೆಲ್ಲವನ್ನು ಆಧುನಿಕ ವಿಧಾನದಲ್ಲಿ ತಯಾರಿಸಲಾಗಿದೆ. ಎಲ್ಲ ರೈತರೂ ಅದನ್ನು ಇಷ್ಟ ಪಟ್ಟಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

‘ಸರ್ಕಾರದ ಉತ್ತೇಜನ ಬೇಕು’

‘ಆಲೆಮನೆಯನ್ನು ಈಗಿನ ಪರಿಸ್ಥಿತಿಯಲ್ಲಿ ನಿರ್ವಹಿಸುವುದು ಕಷ್ಟ. ವಿದ್ಯುತ್‌ ಸಂಪರ್ಕ ಸಿಗುತ್ತಿಲ್ಲ. ಅದಕ್ಕಾಗಿ ಭೂಮಿ ಪರಿವರ್ತನೆ ಮಾಡಬೇಕು ಎಂದು ಹೇಳುತ್ತಾರೆ. ಡೀಸೆಲ್‌ ಬಳಸಿ ಬೆಲ್ಲ ತಯಾರು ಮಾಡುವುದು ದುಬಾರಿ.ಗ್ರಾಮ ಪಂಚಾಯಿತಿಯಿಂದ ಯಾವುದೇ ನೆರವು ಸಿಗುವುದಿಲ್ಲ. ಸರ್ಕಾರದಿಂದ ಸೌಲಭ್ಯಗಳು ದೊರೆಯುವುದಿಲ್ಲ. ಹೀಗಿದ್ದಾಗ ತಯಾರಿಕೆ ಕಷ್ಟವಾಗುತ್ತದೆ. ಆಧುನಿಕ ವ್ಯವಸ್ಥೆ ಅಳವಡಿಸಿಕೊಳ್ಳಲು ನಾವು ಸಿದ್ಧರಿದ್ದೇವೆ. ಸರ್ಕಾರ ನಮಗೆ ನೆರವಾಗಬೇಕು. ತರಬೇತಿಯಲ್ಲಿ ಭಾಗವಹಿಸಿದ ಬಳಿಕ ನನ್ನ ಆಲೆಮನೆಯನ್ನು ಆಧುನಿಕರಣಗೊಳಿಸಿ, ಆರೋಗ್ಯಕರ ಬೆಲ್ಲ ತಯಾರಿಸಲು ತೀರ್ಮಾನಿಸಿದ್ದೇವೆ’ ಎಂದು ಸೋಮವಾರ ಪೇಟೆಯಲ್ಲಿ ಆಲೆಮನೆ ಹೊಂದಿರುವ ಕೃಷಿಕ ಮಂಜು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.