ADVERTISEMENT

ಮಹದೇಶ್ವರ ಬೆಟ್ಟ: ನೀಗಲಿದೆಯೇ ಕಷ್ಟ?

26, 27ಕ್ಕೆ ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ, ಕೆಡಿಪಿ ಸಭೆ

ಸೂರ್ಯನಾರಾಯಣ ವಿ.
Published 20 ಸೆಪ್ಟೆಂಬರ್ 2023, 6:19 IST
Last Updated 20 ಸೆಪ್ಟೆಂಬರ್ 2023, 6:19 IST
ಮಹದೇಶ್ವರ ಬೆಟ್ಟದ ಅರಣ್ಯದಲ್ಲಿರುವ ಗ್ರಾಮಗಳ ನಿವಾಸಿಗಳು ಗಂಭೀರ ಅನಾರೋಗ್ಯಕ್ಕೆ ತುತ್ತಾದರೆ ಡೋಲಿ ಮೂಲಕ ಸಾಗಿಸಬೇಕಾದ ಪರಿಸ್ಥಿತಿ ಈಗಲೂ ಇದೆ (ಸಂಗ್ರಹ ಚಿತ್ರ)
ಮಹದೇಶ್ವರ ಬೆಟ್ಟದ ಅರಣ್ಯದಲ್ಲಿರುವ ಗ್ರಾಮಗಳ ನಿವಾಸಿಗಳು ಗಂಭೀರ ಅನಾರೋಗ್ಯಕ್ಕೆ ತುತ್ತಾದರೆ ಡೋಲಿ ಮೂಲಕ ಸಾಗಿಸಬೇಕಾದ ಪರಿಸ್ಥಿತಿ ಈಗಲೂ ಇದೆ (ಸಂಗ್ರಹ ಚಿತ್ರ)   

ಚಾಮರಾಜನಗರ: ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಜಿಲ್ಲೆಗೆ ಇದೇ 26, 27ರಂದು ಭೇಟಿ ನೀಡಲಿದ್ದು, ಜಿಲ್ಲಾಡಳಿತ ಸಿದ್ಧತೆಯಲ್ಲಿ ತೊಡಗಿದೆ. 

ಈ ಹಿಂದಿನ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗ 13 ಬಾರಿ ಜಿಲ್ಲೆಗೆ ಭೇಟಿ ನೀಡಿದ್ದ ಸಿದ್ದರಾಮಯ್ಯ, ಜಿಲ್ಲಾ ಕೇಂದ್ರ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದ್ದರು. ಈಗ ಮತ್ತೆ ಅವರೇ ಮುಖ್ಯಮಂತ್ರಿಯಾಗಿರುವುದರಿಂದ ಜಿಲ್ಲೆಯ ಜನರು ಅವರ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. 

26ರಂದು ಮೈಸೂರಿನಿಂದ ರಸ್ತೆ ಮಾರ್ಗದ ಮೂಲಕ ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟಕ್ಕೆ ಬರಲಿರುವ ಸಿದ್ದರಾಮಯ್ಯ, ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆಸಲಿದ್ದಾರೆ. ಮರುದಿನ ಬೆಟ್ಟದಲ್ಲಿ ನಡೆಯಲಿರುವ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಜಿಲ್ಲಾ ಕೇಂದ್ರಕ್ಕೆ ಬಂದು ಕೆಡಿಪಿ ಸಭೆ ನಡೆಸಲಿದ್ದಾರೆ. 

ADVERTISEMENT

ಮಹದೇಶ್ವರ ಬೆಟ್ಟದ ವ್ಯಾಪ್ತಿಯ ಅರಣ್ಯದ ಒಳಗಡೆ ಮತ್ತು ಕಾಡಂಚಿನ ಕುಗ್ರಾಮಗಳಿಗೆ ಕನಿಷ್ಠ ಮೂಲಸೌಕರ್ಯ ಕಲ್ಪಿಸಬೇಕು ಎಂಬ ಕೂಗು ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ಸ್ಥಳೀಯ ನಿವಾಸಿಗಳು, ರೈತ ಸಂಘಗಳ ಮುಖಂಡರು ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ. ಈ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಟ್ಟಕ್ಕೆ ಭೇಟಿ ನೀಡಿದ್ದಾಗಲೂ ಸ್ಥಳೀಯ ಗ್ರಾಮಸ್ಥರು, ಮುಖಂಡರು ಭೇಟಿ ನೀಡಿ ಮನವಿ ಮಾಡಿದ್ದರು. ಆದರೆ, ಪ್ರಯೋಜನವಾಗಿಲ್ಲ. 

26ರಂದು ಭೇಟಿ ನೀಡಲಿರುವ ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರ ಮುಂದೆಯೂ ತಮ್ಮ ಬೇಡಿಕೆಗಳನ್ನು ಇಡಲು ರೈತ ಮುಖಂಡರು, ಸ್ಥಳೀಯ ಗ್ರಾಮಸ್ಥರು ಸಿದ್ಧತೆ ನಡೆಸಿದ್ದಾರೆ. 

ಜಿಲ್ಲಾಡಳಿತದ ಯೋಜನೆ: ಈ ಮಧ್ಯೆ, ಜಿಲ್ಲಾಡಳಿತ ಕೂಡ ಮಹದೇಶ್ವರ ಬೆಟ್ಟದ ವ್ಯಾಪ್ತಿಯಲ್ಲಿರುವ ಪೋಡುಗಳು ಹಾಗೂ ಕಾಡಂಚಿನ ಗ್ರಾಮಗಳಿಗೆ ರಸ್ತೆ, ವಿದ್ಯುತ್‌, ಕುಡಿಯುವ ನೀರು ಸೇರಿದಂತೆ ಕನಿಷ್ಠ ಸೌಕರ್ಯಗಳನ್ನು ಕಲ್ಪಿಸುವುದಕ್ಕಾಗಿ ಯೋಜನೆ ರೂಪಿಸುತ್ತಿದೆ. 

ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾ ನಾಗ್‌ ಅವರು ಬೆಟ್ಟ ವ್ಯಾಪ್ತಿಯ ಕುಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಖುದ್ದಾಗಿ ವೀಕ್ಷಿಸಿದ್ದಾರೆ. ಗ್ರಾಮಸ್ಥರೊಂದಿಗೆ ಮಾತನಾಡಿ ಅವರ ಅಭಿಪ್ರಾಯಗಳನ್ನು ಪಡೆದಿದ್ದಾರೆ. ಈ ಗ್ರಾಮಗಳಿಗೆ ಮೂಲಸೌಕರ್ಯ ಕಲ್ಪಿಸುವ ಸಂಬಂಧ ಅಧಿಕಾರಿಗಳು, ರೈತಮುಖಂಡರೊಂದಿಗೆ ಹಲವು ಬಾರಿ ಸಭೆಗಳನ್ನೂ ನಡೆಸಿದ್ದಾರೆ. ಜನರ ಕಷ್ಟ ನೀಗಿಸಲು ಆಗ ಬೇಕಾದ ಕ್ರಮಗಳ ಬಗ್ಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಎಲ್ಲ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಯೋಜನೆಯೊಂದನ್ನು ರೂಪಿಸಿದ್ದಾರೆ. 

‘ಬೆಟ್ಟ ವ್ಯಾಪ್ತಿಯ ಪೋಡುಗಳು, ಕಾಡಂಚಿನ ಗ್ರಾಮಗಳ ಜನರು ರಸ್ತೆ, ಸಾರಿಗೆ, ವಿದ್ಯುತ್‌ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರಿಗೆ ಮೂಲಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿದ್ದೇವೆ. ಮುಖ್ಯಮಂತ್ರಿಯವರು 26ರಂದು ಬೆಟ್ಟಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಮುಂದೆ ಯೋಜನೆಯನ್ನು ಪ್ರಸ್ತಾಪಿಸಲಾಗುವುದು. ಅದಕ್ಕೂ ಮೊದಲು ಜಿಲ್ಲಾ ಉಸ್ತುವಾರಿ ಸಚಿವರಿಗೂ ವಿವರಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

ಯೋಜನೆಗೆ ಮುಖ್ಯಮಂತ್ರಿಯವರ ಒಪ್ಪಿಗೆ ಪಡೆಯುವ ನಿರೀಕ್ಷೆಯಲ್ಲಿ ಜಿಲ್ಲಾಡಳಿತ ಇದೆ. 

ಇಂದು ಸಭೆ: ಮುಖ್ಯಮಂತ್ರಿಯರವ ಭೇಟಿ ಹಾಗೂ ಕಾಡಂಚಿನ ಗ್ರಾಮಗಳಿಗೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಮಹದೇಶ್ವರ ಬೆಟ್ಟದಲ್ಲಿ ಅಧಿಕಾರಿಗಳು ಹಾಗೂ ರೈತರೊಂದಿಗೆ ಜಿಲ್ಲಾಧಿಕಾರಿಯವರು ಪೂರ್ವಭಾವಿ ಸಭೆ ನಡೆಸಲಿದ್ದಾರೆ. 

ಶಿಲ್ಪಾ ನಾಗ್‌ 
ಹೊನ್ನೂರು ಪ್ರಕಾಶ್‌

ಮೂಲಸೌಕರ್ಯ ವಂಚಿತ ಗ್ರಾಮಗಳು ಆರೋಗ್ಯ ಸೇವೆ ಪಡೆಯಲು ಪಡಿಪಾಟಲು ಅರಣ್ಯ ರೋದನವಾದ ನಿವಾಸಿಗಳ ಕೂಗು

ಮುಖ್ಯಮಂತ್ರಿಯವರು ಜಿಲ್ಲೆಗೆ ಭೇಟಿ ನೀಡುವುದು ಖಚಿತವಾಗಿದೆ. ಪ್ರವಾಸದ ಅಧಿಕೃತ ವೇಳಾಪಟ್ಟಿ ಇನ್ನೂ ಬಂದಿಲ್ಲ. ಕೆಡಿಪಿ ಸಭೆಗೆ ಸಿದ್ಧತೆ ನಡೆಯುತ್ತಿದೆ
ಸಿ.ಟಿ.ಶಿಲ್ಪಾ ನಾಗ್‌ ಜಿಲ್ಲಾಧಿಕಾರಿ
ಕಾಡಂಚಿನ ಗ್ರಾಮಗಳಿಗೆ ಸೌಕರ್ಯ ಕಲ್ಪಿಸಬೇಕು ಎಂದು ಹೋರಾಟ ನಡೆಸುತ್ತಲೇ ಇದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿಯೂ ಇದನ್ನೇ ಆಗ್ರಹಿಸುತ್ತೇವೆ
ಹೊನ್ನೂರು ಪ್ರಕಾಶ್‌ ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ

ಕೆಡಿಪಿ ಸಭೆಗೆ ಸಿದ್ಧತೆ 27ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಲಿದ್ದು ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ.  ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗಲೂ ಅವರು ನಗರಕ್ಕೆ ಭೇಟಿ ನೀಡಿ ಶಾಸಕರು ಅಧಿಕಾರಿಗಳೊಂದಿಗೆ ಕೆಡಿಪಿ ಸಭೆ ನಡೆಸಿದ್ದರು.  ಜಿಲ್ಲಾ ಪೊಲೀಸ್‌ ಕವಾಯತು ಮೈದಾನದಲ್ಲಿ ಶಾಮಿಯಾನ ಹಾಕಿ ಕೆಡಿಪಿ ಸಭೆ ನಡೆಸಲಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.