ADVERTISEMENT

‘ಚಿಗುರು’ ಮಕ್ಕಳ ಹಬ್ಬ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2021, 14:38 IST
Last Updated 3 ಜನವರಿ 2021, 14:38 IST
ಕಾರ್ಯಕ್ರಮವನ್ನು ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಉದ್ಘಾಟಿಸಿದರು
ಕಾರ್ಯಕ್ರಮವನ್ನು ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಉದ್ಘಾಟಿಸಿದರು   

ಚಾಮರಾಜನಗರ: ‘ಮಕ್ಕಳಲ್ಲಿ ಇರುವಂತಹ ಸುಪ್ತ ಪ್ರತಿಭೆಯನ್ನು ಪತ್ತೆ ಹಚ್ಚಿ ಪ್ರೊತ್ಸಾಹಿಸುವ ಕೆಲಸವನ್ನು ಚಿಗುರು ಕಾರ್ಯಕ್ರಮ ಮಾಡುತ್ತಿದೆ’ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಭಾನುವಾರ ತಿಳಿಸಿದರು.

ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಮತ್ತು ಕನ್ನಡ ಸಂಸ್ಕೃತಿ ಇಲಾಖೆಗಳು ಆಯೋಜಿಸಿದ್ದ ಚಿಗುರು–2020 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸರ್ಕಾರದಿಂದ ಮಾಡುವಂತಹ ಚಿಗುರು ಮತ್ತು ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ಮಕ್ಕಳ ಪ್ರತಿಭೆಯನ್ನು ಗುರುತಿಸುವಂತಹ ಕಾರ್ಯಕ್ರಮವಾಗಿದ್ದು, ಇವುಗಳಲ್ಲಿ ಹೆಚ್ಚಿನ ಮಕ್ಕಳು ಭಾಗವಹಿಸಬೇಕು. ಕೋವಿಡ್‌ ಕಾರಣದಿಂದ ಕಡಿಮೆ ಮಕ್ಕಳು ಭಾಗವಹಿಸಿದ್ದಾರೆ’ ಎಂದರು.

‘ನಗರದಲ್ಲಿರುವ ರಂಗಮಂದಿರದ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ₹4.30 ಕೋಟಿ ಬೇಕಾಗಿದ್ದು, ಐದಾರು ತಿಂಗಳಲ್ಲಿ ಪೂರ್ಣಗೊಂಡರೆ ಮುಂದಿನ ದಿನಗಳಲ್ಲಿ ಇಂತಹ ಅನೇಕ ಕಾರ್ಯಕ್ರಮಗಳನ್ನು ಮಾಡಬಹುದು‌’ ಎಂದು ತಿಳಿಸಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಶಿಕಲಾ ಅವರು ಮಾತನಾಡಿ, ‘ಮಕ್ಕಳಲ್ಲಿ ಅನೇಕ ತರಹದ ಪ್ರತಿಭೆಗಳು ಇದ್ದು ಅವುಗಳನ್ನು ಗುರುತಿಸಿ, ಅವರು ಬೆಳೆಯಲು ಪ್ರೋತ್ಸಾಹಿಸುವಂತಾಗಬೇಕು. ಮಕ್ಕಳಲ್ಲಿ ತಾರತಮ್ಯ ಮಾಡದೆ ಅವರನ್ನೇ ನಮ್ಮ ಆಸ್ತಿ ಮಾಡಬೇಕಾಗಿದೆ. ಆಗ ಮಾತ್ರ ಮಕ್ಕಳು ಮುಂದೆ ಬರಲು ಸಾಧ್ಯ’ ಎಂದರು.

ನಗರಾಭಿವೃದ್ದಿ ಪ್ರಾಧಿಕಾರದ ಆಧ್ಯಕ್ಷ ಶಾಂತಮೂರ್ತಿ ಕುಲಗಾಣ ಮಾತನಾಡಿ, ‘ಮಕ್ಕಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಗಮನಹರಿಸಬೇಕು, ಮಕ್ಕಳ ಪ್ರತಿಭೆಯನ್ನು ಪೋಷಕರು ಮತ್ತು ಶಿಕ್ಷಕರು ಗುರುತಿಸಿ ಅವರನ್ನು ಬೆಳೆಸುವಂತಹ ಕಾರ್ಯಗಳು ಆದಾಗ ಮಾತ್ರ ಮಕ್ಕಳ ಸರ್ವತೋಮುಖ ಬೆಳವಣಿಗೆ ಆಗಲು ಸಾಧ್ಯ’ ಎಂದು ತಿಳಿಸಿದರು.

‌ನಗರಸಭೆ ಅಧ್ಯಕ್ಷೆ ಸಿ.ಎಂ.ಆಶಾ, ಸದಸ್ಯರಾದ ಭಾಗ್ಯಮ್ಮ, ರಾಘವೇಂದ್ರ, ನಗರಾಭಿವೃದ್ದಿ ಕೋಶದ ಜಿಲ್ಲಾ ಯೋಜನಾಧಿಕಾರಿ ಸುರೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಕೆ.ಗಿರೀಶ್, ಹಿರಿಯ ರಂಗಕರ್ಮಿ ಕೆ.ವೆಂಕಟರಾಜು, ಜಾನಪದ ಅಕಾಡೆಮಿ ಸದಸ್ಯ ಸಿ.ಎಂ.ನರಸಿಂಹ ಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.