ADVERTISEMENT

ಚಾಮರಾಜನಗರ| ಯೂತ್‌ ಫಾರ್‌ ಸೇವಾ: ‘ಚಿಗುರು’ ಜಾನಪದ ವೈಭವ

ಸೇವಾ ಭಾರತಿ ಕಾಲೇಜು ಆವರಣದಲ್ಲಿ ಆಯೋಜನೆ, ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2023, 5:55 IST
Last Updated 13 ಫೆಬ್ರುವರಿ 2023, 5:55 IST
ಚಾಮರಾಜನಗರದ ಸೇವಾ ಭಾರತಿ ಕಾಲೇಜಿನಲ್ಲಿ ಭಾನುವಾರ ನಡೆದ ಚಿಗುರು–ಜಾನಪದ ವೈಭವ ಕಾರ್ಯಕ್ರಮವನ್ನು ಸಮಾಜ ಸೇವಕ ಅಶ್ವಥ್‌ ನಾರಾಯಣ ಉದ್ಘಾಟಿಸಿದರು. ಕಾಲೇಜು ಆಡಳಿತ ಮಂಡಳಿಯ ರಮೇಶ್‌, ಸುರೇಶ್‌ ಋಗ್ವೇದಿ, ಕೆ.ವಿ.ರಾಜಣ್ಣ, ಯೂತ್‌ ಫಾರ್‌ ಸೇವಾ ಸಂಸ್ಥೆಯ ರಾಘವೇಂದ್ರ ಇತರರು ಇದ್ದರು
ಚಾಮರಾಜನಗರದ ಸೇವಾ ಭಾರತಿ ಕಾಲೇಜಿನಲ್ಲಿ ಭಾನುವಾರ ನಡೆದ ಚಿಗುರು–ಜಾನಪದ ವೈಭವ ಕಾರ್ಯಕ್ರಮವನ್ನು ಸಮಾಜ ಸೇವಕ ಅಶ್ವಥ್‌ ನಾರಾಯಣ ಉದ್ಘಾಟಿಸಿದರು. ಕಾಲೇಜು ಆಡಳಿತ ಮಂಡಳಿಯ ರಮೇಶ್‌, ಸುರೇಶ್‌ ಋಗ್ವೇದಿ, ಕೆ.ವಿ.ರಾಜಣ್ಣ, ಯೂತ್‌ ಫಾರ್‌ ಸೇವಾ ಸಂಸ್ಥೆಯ ರಾಘವೇಂದ್ರ ಇತರರು ಇದ್ದರು   

ಚಾಮರಾಜನಗರ: ಯೂತ್‌ಫಾರ್‌ ಸೇವಾ ಸಂಸ್ಥೆಯು ನಗರದ ಸೇವಾ ಭಾರತಿ ಕಾಲೇಜಿನಲ್ಲಿ ಭಾನುವಾರ ‘ಚಿಗುರು– ಜಾನಪದ ವೈಭವ–2023’ ಕಾರ್ಯಕ್ರಮ ಆಯೋಜಿಸಿ ತಾಲ್ಲೂಕಿನ 17 ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿತು.

600ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಂಗೋಲಿ, ಜಾನಪದ ನೃತ್ಯ, ಜಾನಪದ ಗಾಯನ, ಕಸದಿಂದ ರಸ, ಚಿತ್ರಕಲೆ, ಶ್ಲೋಕ ಪಠಣ, ಚೀಟಿ ಎತ್ತಿ ಭಾಷಣ, ವೇಷಭೂಷಣ, ಮಣ್ಣಿನ ಮಾದರಿ, ಯೋಗ, ಬೆಂಕಿ ಇಲ್ಲದ ಅಡಿಗೆ, ಕಬಡ್ಡಿ, ಗೋಣಿಚೀಲದ ಓಟ, ರಿಲೆ, ಚೋಟಾ ವಿಜ್ಞಾನಿ ಸೇರಿದಂತೆ ವಿವಿಧ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ಗಮನಸೆಳೆದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಮಾಜ ಸೇವಕರಾದ ಜಿ.ಆರ್.ಅಶ್ವಥ್ ನಾರಾಯಣ್, ‘ಮಕ್ಕಳು ದೇವರ ಸಮಾನ. ಮಕ್ಕಳಲ್ಲಿರುವ ಎಲ್ಲ ಪ್ರತಿಭೆಗಳನ್ನು ಹೊರತರುವ ಜವಾಬ್ದಾರಿ ನಮ್ಮ ಮೇಲಿದೆ. ಸಾಂಸ್ಕೃತಿಕ ಮತ್ತು ಬೌದ್ಧಿಕ ಶಕ್ತಿಯ ಅನಾವರಣಕ್ಕೆ ಚಿಗುರು ಎಂಬ ಕಾರ್ಯಕ್ರಮವನ್ನು ಯೂತ್ ಫಾರ್ ಸೇವಾ ಸಂಸ್ಥೆ ಹಮ್ಮಿಕೊಂಡಿರುವುದು ಅಭಿನಂದನೀಯ’ ಎಂದರು.

ADVERTISEMENT

ತಾಲ್ಲೂಕು ಕಸಾಪ ಅಧ್ಯಕ್ಷ, ಉಪನ್ಯಾಸಕ ಸುರೇಶ್ ಎನ್‌.ಋಗ್ವೇದಿ ಮಾತನಾಡಿ, ‘ಭಾರತದ ಯುವಶಕ್ತಿ ಪ್ರಪಂಚದಲ್ಲಿ ಶ್ರೇಷ್ಠ ಶಕ್ತಿಯಾಗಿ ಬೆಳೆಯುತ್ತಿದೆ. ಭವಿಷ್ಯದಲ್ಲಿ ಹೊಸ ದೃಷ್ಟಿಕೋನದೊಂದಿಗೆ ಸಂಸ್ಕೃತಿ, ಪರಂಪರೆ, ರಾಷ್ಟ್ರೀಯತೆ, ವ್ಯಕ್ತಿತ್ವ ವಿಕಾಸ, ಬೌದ್ಧಿಕ ಶಕ್ತಿಯನ್ನು ದೇಶಕ್ಕಾಗಿ ಅರ್ಪಿಸುವ ಮಾನಸಿಕತೆಯನ್ನು ಯುವಕರಲ್ಲಿ ಮತ್ತು ಮಕ್ಕಳಲ್ಲಿ ರೂಪಿಸುತ್ತಿರುವ ಯೂತ್ ಫಾರ್ ಸೇವಾ ಸಂಸ್ಥೆ ಭಾರತದ ಶಕ್ತಿಶಾಲಿ ಸಂಸ್ಥೆಯಾಗಲಿದೆ’ ಎಂದರು.

‘ಸರ್ಕಾರಿ ಶಾಲೆಯ ಮಕ್ಕಳಲ್ಲಿ ಧೈರ್ಯ, ಸಾಹಸ, ಮನೋವಿಕಾಸ, ಪ್ರತಿಭೆ ಅಪಾರವಾಗಿದೆ. ವೇದಿಕೆಗಳ ಮೂಲಕ ಅವರೆಲ್ಲರ ಪ್ರತಿಭೆಯನ್ನು ಅನಾವರಣಗೊಳಿಸಿ ಉತ್ತಮ ವ್ಯಕ್ತಿಯಾಗಿ ರೂಪಿಸುವ ಹೊಣೆ ಹೊತ್ತಿರುವ ಯೂತ್‌ ಫಾರ್ ಸೇವಾ ಸಂಸ್ಥೆ ಚಾಮರಾಜನಗರ ಜಿಲ್ಲೆಯಲ್ಲಿ ಹೆಮ್ಮರವಾಗಿ ಬೆಳೆಯಲಿ’ ಎಂದು ಆಶಿಸಿದರು.

ಪ್ರಾಸ್ತಾವಿಕ ಮಾತನಾಡಿದ ಯೂತ್‌ ಫಾರ್ ಸೇವಾ ಸಂಸ್ಥೆಯ ದಕ್ಷಿಣ ಪ್ರಾಂತ್ಯದ ಮುಖ್ಯಸ್ಥ ರಾಘವೇಂದ್ರ, ‘ದೇಶಕ್ಕಾಗಿ ಸೇವೆಯನ್ನು ಸಲ್ಲಿಸುವ ಧ್ಯೇಯದೊಂದಿಗೆ ಯುವಕರಲ್ಲಿ ಸೇವಾಗುಣವನ್ನು ಬೆಳೆಸುವ ಜೊತೆಗೆ ಸಾಮಾಜಿಕ ಜವಾಬ್ದಾರಿಯನ್ನು ಬಲವಾಗಿ ಮೂಡಿಸುವ ದಿಕ್ಕಿನಲ್ಲಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಚಿಗುರು ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದರು.

ಸೇವಾ ಭಾರತಿ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ಎಸ್.ರಮೇಶ್, ಮಾನಸಿಕ ಆರೋಗ್ಯ ಪ್ರಾಧಿಕಾರದ ಸದಸ್ಯ ಕೆ.ವಿ.ರಾಜಣ್ಣ, ಬೆಂಗಳೂರಿನ ಹರೀಶ್ ಭಟ್, ಉಪನ್ಯಾಸಕಿ ಮೇಘಶ್ರೀ, ಶಿಕ್ಷಕರಾದ ರವಿಕುಮಾರ್, ಸೇವಾ ಸಂಸ್ಥೆಯ ವಿಷ್ಣು, ತೇಜು ನಾಯಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.