ADVERTISEMENT

ಮಕ್ಕಳ ಮೇಲೆ ನಿಗಾ ಇರಲಿ

ಪೋಷಕ-ಶಿಕ್ಷಕರ ಮಹಾಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್ ಸಲಹೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 4:47 IST
Last Updated 15 ನವೆಂಬರ್ 2025, 4:47 IST
ಚಾಮರಾಜನಗರ ತಾಲ್ಲೂಕಿನ ಚಂದಕವಾಡಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಪೋಷಕ-ಶಿಕ್ಷಕರ ಮಹಾಸಭೆಯಲ್ಲಿ  ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ನೆಹರೂ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಚಾಮರಾಜನಗರ ತಾಲ್ಲೂಕಿನ ಚಂದಕವಾಡಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಪೋಷಕ-ಶಿಕ್ಷಕರ ಮಹಾಸಭೆಯಲ್ಲಿ  ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ನೆಹರೂ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.   

ಚಾಮರಾಜನಗರ: ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ, ಪೋಷಕರೇ ಗುರುಗಳು. ಹುಟ್ಟಿನಿಂದಲೇ ಅವರು ಕಲಿಕೆ ಆರಂಭಿಸುವುದರಿಂದ ಪೋಷಕರು ಹೆಚ್ಚು ನಿಗಾ ಇರಿಸಬೇಕು.  ಅವರ ಆದ್ಯತೆಗಳನ್ನು  ಅರಿತು, ಭವಿಷ್ಯದ ಕನಸುಗಳಿಗೆ ಬಾಲ್ಯದಲ್ಲಿಯೇ ಪೂರಕ ವಾತಾವರಣ ನಿರ್ಮಿಸಿಕೊಡಬೇಕು ಎಂದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮೋನಾ ರೋತ್ ಸಲಹೆ ನೀಡಿದರು.

ತಾಲ್ಲೂಕಿನ ಚಂದಕವಾಡಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ಚಂದಕವಾಡಿ ಕರ್ನಾಟಕ ಪಬ್ಲಿಕ್ ಶಾಲೆ  ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಪೋಷಕ-ಶಿಕ್ಷಕರ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಪೋಷಕರು ತಿದ್ದಿ ಬುದ್ಧಿ ಹೇಳಿದರೆ, ಶಾಲಾ ಹಂತದಲ್ಲಿ ಶಿಕ್ಷಕರು ಸರಿದಾರಿಯಲ್ಲಿ ಮುನ್ನಡೆಸುತ್ತಾರೆ.  ಸೃಜನಶೀಲ ಕಲಿಕೆ, ಉತ್ತಮ ಶಿಕ್ಷಣ ದೊರೆತರೆ ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಾರೆ. ಪೋಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಕಿವಿಮಾತು ಹೇಳಿದರು.

ADVERTISEMENT

ಪೋಷಕ ಮತ್ತು ಶಿಕ್ಷಕರ ಸಭೆಯಲ್ಲಿ ಪೋಷಕರು ಭಾಗವಹಿಸಿ ಮಕ್ಕಳ ಕಲಿಕಾ ಸಾಮರ್ಥ್ಯದ ಬಗ್ಗೆ ಮಾಹಿತಿ ಪಡೆಯಬೇಕು. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿನ ಲೋಪದೋಷಗಳ ಬಗ್ಗೆ ಮಾಹಿತಿ ಸಿಗಲಿದ್ದು ತಪ್ಪುಗಳನ್ನು ಸರಿಪಡಿಸಿಕೊಳ್ಳಬಹುದು. ಮಕ್ಕಳನ್ನು ಶಾಲೆಗೆ ಕಳುಹಿಸುವುದರಿಂದಷ್ಟೇ ಪೋಷಕರ ಜವಾಬ್ದಾರಿ ಮುಗಿಯುವುದಿಲ್ಲ. ಅವರ ಪ್ರತಿ ಚಟುವಟಿಕೆಗಳ ಮೇಲೆ ನಿಗಾ ಇರಿಸಬೇಕು.   ಅಡ್ಡದಾರಿ ಹಿಡಿದು, ವ್ಯಸನಿಗಳಾಗುವ ಅಪಾಯವೂ ಇರುತ್ತದೆ. ಮಕ್ಕಳು ಸರಿದಾರಿಯಲ್ಲಿ ಬದುಕಲು ಪೋಷಕರು ಹಾಗೂ ಶಿಕ್ಷಕರ ಸಭೆ ಹೆಚ್ಚು ಸಹಕಾರಿಯಾಗಿದೆ ಎಂದರು.

 ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಚಂದ್ರ ಪಾಟೀಲ್ ಮಾತನಾಡಿ, ‘ದೇಶದ ಮೊದಲ ಪ್ರಧಾನಿ ನೆಹರೂ ಅವರ ಜಯಂತಿ ಅಂಗವಾಗಿ ಮಕ್ಕಳ ದಿನವನ್ನು ಆಚರಿಸಲಾಗುತ್ತಿದೆ.  ರಾಜ್ಯ ಸರ್ಕಾರ ಪ್ರತಿ ಶಾಲೆಯಲ್ಲಿ ಶಿಕ್ಷಕ-ಪೋಷಕರ ಮಹಾಸಭೆ ಆಯೋಜಿಸಿ ಮಕ್ಕಳ ಓದಿನ ಗುಣಮಟ್ಟವನ್ನು ಪೋಷಕರು ತಿಳಿದುಕೊಳ್ಳಲು ವೇದಿಕೆ ಒದಗಿಸಿದೆ  ಎಂದರು.

ಶಾಲಾ ಎಸ್.ಡಿ.ಎಂ.ಸಿ ಸದಸ್ಯೆ ವಿಜಯಕುಮಾರಿ ಮಾತನಾಡಿದರು.  ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಸಂಜನಾ ಮತ್ತು ಸ್ನೇಹಾ ಅವರಿಗೆ ನಗದು ಬಹುಮಾನ ವಿತರಿಸಲಾಯಿತು. ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಲಾಯಿತು.

ಡಯಟ್ ಪ್ರಾಂಶುಪಾಲ ಕಾಶಿನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶೆಟ್ಟಿ, ಬಿಸಿಯೂಟ ಯೋಜನೆ ಶಿಕ್ಷಣಾಧಿಕಾರಿ ರೇವಣ್ಣ, ಶಾಲೆಯ ಪ್ರಾಂಶುಪಾಲ ಸ್ವಾಮಿ, ಉಪಪ್ರಾಂಶುಪಾಲ ಚಂದ್ರಶೇಖರ್. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ  ಉಪಸ್ಥಿತರಿದ್ದರು.

ಪೋಷಕ-ಶಿಕ್ಷಕರ ಮಹಾಸಭೆಯಲ್ಲಿ ಭಾಗವಹಿಸಿದ್ದ ಪೋಷಕರು

‘ಕೌಶಲಯುತ ಶಿಕ್ಷಣ ನೀಡಿ’

ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳು ಕೌಶಲಯುತ ಕಲಿಕೆಗೆ ಒತ್ತು ನೀಡಬೇಕು  ಈ ನಿಟ್ಟಿನಲ್ಲಿ ಶಾಲಾ ಹಂತದಲ್ಲಿ ಕೌಶಲ ತರಬೇತಿ ಪಡೆಯಬೇಕು. ಮುಂದಿನ ವರ್ಷದಿಂದ ಆರನೇ ತರಗತಿಗೆ ಕೌಶಲಯುತ ಪಾಠ ಪ್ರವಚನಗಳನ್ನು ಬೋಧಿಸಲಾಗುವುದು. 9ನೇ ತರಗತಿಯಿಂದ ಮಾದರಿ ವಿಜ್ಞಾನ ಅಳವಡಿಸಲಾಗುವುದು. ಕಲಿಕೆಯ ಜೊತೆಗೆ ಜೀವನಕ್ಕೆ ಬೇಕಾದ ಕೌಶಲಗಳನ್ನು ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ಕಲಿಸಲಾಗುವುದು. ತಿಂಗಳಲ್ಲಿ ಕನಿಷ್ಠ ಒಂದು ದಿನ ಮಕ್ಕಳ ಕಲಿಕಾ ಬೆಳವಣಿಗೆಯ ಬಗ್ಗೆ ತಿಳಿದುಕೊಳ್ಳಲು ಪೋಷಕರು ಶಾಲೆಗಳಿಗೆ ಭೇಟಿ ನೀಡಬೇಕು ಎಂದು ಡಿಡಿಪಿಐ ಚಂದ್ರಪಾಟೀಲ್ ಹೇಳಿದರು.