ಚಾಮರಾಜನಗರ: ಜಿಲ್ಲೆಯಾದ್ಯಂತ ಗಣೇಶೋತ್ಸವ ಆಚರಣೆಗೆ ಸಿದ್ಧತೆಗಳು ನಡೆಯುತ್ತಿದ್ದು ಕಲಾವಿದರ ಗಣಪನ ಮೂರ್ತಿಗಳಿಗೆ ಅಂತಿಮ ಹಂತದ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ. ವಿವಿಧ ಆಕಾರಗಳ, ಮಾದರಿಯ, ಗಾತ್ರದ ವಿಘ್ನ ನಿವಾರಕನ ಮೂರ್ತಿಗಳು ತಯಾರಾಗುತ್ತಿದ್ದು ಪ್ರತಿಷ್ಠಾಪನೆಗೆ ಸಜ್ಜಾಗಿ ನಿಂತಿವೆ.
ಚಾಮರಾಜನಗರದ ಜಿಲ್ಲಾ ಕಾರಾಗೃಹ ಹಿಂಭಾಗದ ಬಡಾವಣೆಯಲ್ಲಿರುವ ಕಲಾವಿದ ಸಿದ್ದಪ್ಪಾಜಿ ಅವರ ನಿವಾಸದಲ್ಲಿ ಆಕರ್ಷಕ ಮಣ್ಣಿನ ಗಣಪತಿಯ ಮೂರ್ತಿಗಳನ್ನು ತಯಾರಿಸಲಾಗಿದ್ದು ಗಮನ ಸೆಳೆಯುತ್ತಿವೆ. ಸುಮಾರು 40 ವರ್ಷಗಳಿಂದ ಮೂರ್ತಿಗಳ ತಯಾರಿಸುವ ಕಾಯಕವನ್ನು ಜತನದಿಂದ ಮುಂದುವರಿಸಿಕೊಂಡು ಬಂದಿದೆ ಕಲಾವಿದ ಸಿದ್ದಪ್ಪಾಜಿ ಕುಟುಂಬ.
ಸಿದ್ದಪ್ಪಾಜಿ ಅವರ ಗಣಪನ ಮೂರ್ತಿ ತಯಾರಿಸುವ ಕಾರ್ಯಕ್ಕೆ ಪತ್ನಿ ಗೌರಮ್ಮ, ಇಬ್ಬರು ಪುತ್ರರು ಸಹಿತ ಸಂಬಂಧಿಗಳು ಕೈಜೋಡಿಸಿದ್ದು 500ಕ್ಕೂ ಹೆಚ್ಚು ಗಜಮುಖನ ಮೂರ್ತಿಗಳು ತಯಾರಾಗಿವೆ. ಸಿಂಹ, ಹಂಸ, ಗಜ, ಬಸವ ವಾಹನರೂಢನಾಗಿ ಗಣಪತಿ ಶೋಭಿಸುತ್ತಿದ್ದಾನೆ. ಒಂದು ಅಡಿಯಿಂದ 5 ಅಡಿಯವರೆಗೆಗಿನ ಮೂರ್ತಿಗಳು ಇಲ್ಲಿ ತಯಾರಾಗಿದ್ದು ಒಂದಕ್ಕಿಂತ ಒಂದು ಭಿನ್ನವಾಗಿ ಗಮನ ಸೆಳೆಯುತ್ತಿವೆ.
ಹೆಚ್ಚು ಶ್ರಮ ಬೇಡದ, ಪರಿಸರಕ್ಕೆ ಹಾನಿಯುಂಟು ಮಾಡುವ ಪಿಒಪಿ ಗಣಪನ ಮೂರ್ತಿಗಳ ಭರಾಟೆಯ ಮಧ್ಯೆಯೂ ಸಾಂಪ್ರದಾಯಿಕ ಹಾಗೂ ಪರಿಸರ ಸ್ನೇಹಿಯಾಗಿ ಜೇಡಿಮಣ್ಣಿನಿಂದ ಗಣಪತಿ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ ಸಿದ್ದಪ್ಪಾಜಿ.
ಗಣಪತಿ ಮೂರ್ತಿಗಳ ತಯಾರಿಕೆ ಪ್ರಕ್ರಿಯೆ ಬಹಳ ಸಂಕೀರ್ಣ ಹಾಗೂ ಸವಾಲಿನಿಂದ ಕೂಡಿರುತ್ತದೆ. ಮೂರ್ತಿಗಳ ತಯಾರಿಕೆಗೆ ಮಣ್ಣಿನ ಆಯ್ಕೆ ಬಹಳ ಮುಖ್ಯವಾಗಿದ್ದು ಜಾಗರೂಕತೆಯಿಂದ ಮಣ್ಣು ಆರಿಸಬೇಕು. ಗಣೇಶ ಹಬ್ಬ 6 ತಿಂಗಳು ಇರುವಾಗಲೇ ಮೂರ್ತಿಗಳ ತಯಾರಿಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು.
ಈ ಬಾರಿಯೂ ಶಿವರಾತ್ರಿ ಕಳೆದ ನಂತರ ಮೂರ್ತಿ ತಯಾರಿಕೆ ಪ್ರಕ್ರಿಯೆ ಶುರುಮಾಡಿ ಕಿರುಗಾವಲಿನ ಕೆಆರ್‌ಎಸ್ ಜಲಾಶಯ ಪಾತ್ರದಿಂದ 2 ಲೋಡ್ ಗುಣಮಟ್ಟದ ಜೇಡಿ ಮಣ್ಣು ತರಿಸಲಾಗಿದೆ. 10 ಮಂದಿಯ ತಂಡದ ಗಣಪತಿ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದೆ ಎಂದು ಮಾಹಿತಿ ನೀಡಿದರು ಸಿದ್ದಪ್ಪಾಜಿ.
ಪರಿಸರಸ್ನೇಹಿ ಜೇಡಿ ಮಣ್ಣು ಹಾಗೂ ತೆಂಗಿನ ನಾರನ್ನಷ್ಟೆ ಬಳಸಿ ಮೂರ್ತಿಗಳನ್ನು ಅಚ್ಚುಕಟ್ಟಾಗಿ ತಯಾರಿಸಲಾಗಿದೆ. ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ವಿವಿಧ ಗಾತ್ರ, ಬಣ್ಣ ಹಾಗೂ ಮಾದರಿಯ ಮೂರ್ತಿಗಳನ್ನು ಮಾಡಲಾಗಿದೆ. ಆದರೆ, ಪಿಒಪಿ ಗಣಪತಿ ಮೂರ್ತಿಗಳ ಹಾವಳಿಯಿಂದ ಮಣ್ಣಿನ ಗಣಪತಿ ಮೂರ್ತಿಗಳಿಗೆ ಬೇಡಿಕೆ ಕುಸಿದಿದೆ ಎಂದು ಬೇಸರ ವ್ಯಕ್ತಪಡಿಸಿದರು ಸಿದ್ದಪ್ಪಾಜಿ.
ಸರ್ಕಾರ ಪಿಒಪಿ ಗಣಪತಿಯ ಮೂರ್ತಿಗಳ ತಯಾರಿಕೆಯನ್ನು ನಿರ್ಬಂಧಿಸಿದರೂ ಮಾರಾಟ ಮಾತ್ರ ನಿಂತಿಲ್ಲ. ಗುಂಡ್ಲುಪೇಟೆಯಲ್ಲಿ ನಿಯಮಬಾಹಿರವಾಗಿ ನೂರಾರು ಪಿಒಪಿ ಮೂರ್ತಿಗಳ ತಯಾರಿಕೆ ನಡೆಯುತ್ತಿದ್ದರೂ ತಡೆಯುವ, ದಂಡ ವಿಧಿಸಲು ಅಧಿಕಾರಿಗಳು ಮುಂದಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನೋಡಲು ಆಕರ್ಷಕ, ನುಣುಪು ಹಾಗೂ ದೊಡ್ಡ ಗಾತ್ರದ ಮೂರ್ತಿಗಳು ಎಂಬ ಕಾರಣಕ್ಕೆ ಆಯೋಜಕರು ಸಾರ್ವಜನಿಕ ಉತ್ಸವಗಳಿಗೆ ಒಪಿಒ ಗಣಪತಿ ಮೂರ್ತಿಗಳನ್ನು ಖರೀದಿಸಲು ಆಸಕ್ತಿ ತೋರುತ್ತಿದ್ದಾರೆ. ಸಂಪ್ರದಾಯದಲ್ಲಿ ಮಣ್ಣಿನ ಗಣಪತಿಯ ಪ್ರತಿಷ್ಠಾಪನೆ, ಆರಾಧನೆಗೆ ಹೆಚ್ಚು ಮಹತ್ವ ಇದೆ. ಸಾರ್ವಜನಿಕರು ಪಿಒಪಿ ಬದಲಾಗಿ ಮಣ್ಣಿನ ಗಣಪತಿ ಮೂರ್ತಿಗಳನ್ನು ಖರೀದಿಸಬೇಕು ಎಂದು ಮನವಿ ಮಾಡಿದರು.
ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಸಂಘ ಸಂಸ್ಥೆಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದು ಪ್ರತಿಷ್ಠಾಪನೆಗೆ ಆಕರ್ಷಕ ಪೆಂಡಾಲ್‌ಗಳನ್ನು ನಿರ್ಮಿಸುತ್ತಿದ್ದಾರೆ. ಚಾಮರಾಜೇಜೇಶ್ವರ ದೇವಸ್ಥಾನದ ಸುತ್ತಮುತ್ತ ಗಣಪತಿ ಮೂರ್ತಿಗಳ ಮಾರಾಟ ನಡೆಯಲಿದೆ. ಜಿಲ್ಲೆಯ ಹಲವು ಭಾಗಗಳಿಂದ ಗಣಪತಿ ಮೂರ್ತಿಗಳ ಖರೀದಿಗೆ ಆಯೋಜಕರು ಬರುತ್ತಿದ್ದು ಮುಂಗಡ ನೀಡಿ ಬುಕ್ಕಿಂಗ್ ಮಾಡುತ್ತಿದ್ದಾರೆ.
ಚಾಮರಾಜನಗರದ ರಥದ ಬೀದಿಯಲ್ಲಿ ಪ್ರತಿ ವರ್ಷದಂತೆ ಶ್ರೀವಿದ್ಯಾಗಣಪತಿ ಮಂಡಳಿಯಿಂದ ಅದ್ದೂರಿಯಾಗಿ ಗಣಪತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ನಗರದ ಬಹುತೇಕ ಬಡಾವಣೆಗಳಲ್ಲಿ ಗಣಪನ ಪ್ರತಿಷ್ಠಾಪನೆಗೆ ವೇದಿಕೆ ಸಿದ್ಧಗೊಳ್ಳುತ್ತಿದೆ.
‘ಪಿಒಪಿ ಮೂರ್ತಿಗಳ ಹಾವಳಿ’
ಮಾರುಕಟ್ಟೆಯಲ್ಲಿ ಪಿಒಪಿ ಗಣಪತಿ ಮೂರ್ತಿಗಳ ಹಾವಳಿ ಹೆಚ್ಚಾಗಿದ್ದು ಮಣ್ಣಿನ ಮೂರ್ತಿಗಳ ಖರೀದಿಗೆ ಆಯೋಜಕರು ಸಾರ್ವಜನಿಕರು ಆಸಕ್ತಿ ತೋರುತ್ತಿಲ್ಲ. ಇದುವರೆಗೂ ಬೆರಳೆಣಿಕೆ ಮೂರ್ತಿಗಳ ಖರೀದಿಗೆ ಮುಂಗಡ ಬುಕ್ಕಿಂಗ್ ಆಗಿದೆ. ನೂರಾರು ಮೂರ್ತಿಗಳು ಮಾರಾಟವಾಗಬೇಕಾಗಿದೆ. ತಂದೆ ನಾಗಶೆಟ್ಟಿ ಅವರಿಂದ ಕಲಿತ ಕಲೆಯನ್ನು ನಾಲ್ಕು ದಶಕಗಳಿಂದ ಮುನ್ನಡೆಸುತ್ತಿದ್ದು ಮಣ್ಣಿನ ಮೂರ್ತಿಗಳಿಗೆ ಬೇಡಿಕೆ ಕುಸಿದರೆ ವೃತ್ತಿಯಿಂದ ವಿಮುಖವಾಗಬೇಕಾಗುತ್ತದೆ. ಪಿಒಪಿ ಮೂರ್ತಿಗಳ ಮಾರಾಟ ಹಾಗೂ ತಯಾರಿಕೆಗೆ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಾರೆ ಕಲಾವಿದ ಸಿದ್ದಪ್ಪಾಜಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.