ADVERTISEMENT

ಮಾರ್ಟಳ್ಳಿ: ಅನೈರ್ಮಲ್ಯ ವಾತಾವರಣ, ರೋಗ ಭೀತಿ

ಕೇಂದ್ರಸ್ಥಾನದಲ್ಲಿ ಅಶುಚಿತ್ವ, ಕಟ್ಟಿಕೊಳ್ಳುವ ಚರಂಡಿ, ರೈತರ ಜಮೀನುಗಳಿಗೆ ಕೊಳಚೆ ನೀರು

ಬಿ.ಬಸವರಾಜು
Published 8 ಆಗಸ್ಟ್ 2021, 15:09 IST
Last Updated 8 ಆಗಸ್ಟ್ 2021, 15:09 IST
ರಸ್ತೆ ಬದಿಯಲ್ಲಿ ರಾಶಿ ಬಿದ್ದಿರುವ ಕಸ
ರಸ್ತೆ ಬದಿಯಲ್ಲಿ ರಾಶಿ ಬಿದ್ದಿರುವ ಕಸ   

ಹನೂರು: ತಾಲ್ಲೂಕಿನ ಮಾರ್ಟಳ್ಳಿ ಗ್ರಾಮಪಂಚಾಯಿತಿ ಕೇಂದ್ರಸ್ಥಾನದಲ್ಲಿ ಅಶುಚಿತ್ವ ಹೆಚ್ಚುತ್ತಿದ್ದು, ರಸ್ತೆ ಬದಿಯಲ್ಲಿಯೇ ಕಲುಷಿತ ನೀರು ಹರಿಯುತ್ತಿರುವುದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.

ಗ್ರಾಮದ ಹಾಲಿನ ಡೇರಿ ಸಮೀಪದಲ್ಲಿ ಕೊಳಚೆ ನೀರು ಮಡುಗಟ್ಟಿ ನಿಂತಿದೆ. ಇದು ರಸ್ತೆ ಬದಿಯಲ್ಲಿಯೇ ಇರುವುದರಿಂದ ಪ್ರತಿನಿತ್ಯ ಸಂಚರಿಸುವ ಜನರು ಮೂಗು ಮುಚ್ಚಿಕೊಂಡು ಹೋಗಬೇಕಾಗಿದೆ. ಈ ಬಗ್ಗೆ ಸಾರ್ವಜನಿಕರು ವ್ಯಾಪಕ ಆಕ್ರೋಶ ಹೊರಹಾಕುತ್ತಿದ್ದರೂ, ಇದಕ್ಕೂ ನಮಗೂ ಸಂಬಂಧವಿಲ್ಲವೆಂಬಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ವರ್ತಿಸುತ್ತಿದ್ದಾರೆ ಎಂಬುದು ಗ್ರಾಮಸ್ಥರ ಆರೋಪ.

‘ಪಾಲಿಮೇಡು, ಮಾರ್ಟಳ್ಳಿ ಗ್ರಾಮದಿಂದ ಚರಂಡಿ ವ್ಯವಸ್ಥೆ ಮಾಡಲಾಗಿದೆ. ಮೇಲಿಂದ ಬರುವ ಕೊಳಚೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಿಲ್ಲ. ಎಲ್ಲ ಚರಂಡಿಗಳ ನೀರು ಒಂದೇ ಕಡೆ ಬಂದು ನಿಲ್ಲುತ್ತದೆ. ಗ್ರಾಮದ ಸ್ವಚ್ಛತೆಗೆಂದು ಲಕ್ಷಾಂತರ ಹಣ ಖರ್ಚು ಮಾಡುತ್ತಾರೆ. ಆದರೆ, ಕಲುಷಿತ ನೀರು ಬಿಡುವುದು ಮಾತ್ರ ರೈತರ ಜಮೀನುಗಳಿಗೆ’ ಎಂದು ಆರೋಪಿಸುತ್ತಾರೆ ಗ್ರಾಮದ ಸಮೀಪವಿರುವ ಜಮೀನು ಮಾಲೀಕರು.

ADVERTISEMENT

‘ಹಳೇ ಮಾರ್ಟಳ್ಳಿಯಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಹೊಂದಿಕೊಂಡಂತೆ ಇರುವ ಜಮೀನಿಗೆ ಗ್ರಾಮದಲ್ಲಿರುವ ಚರಂಡಿ ನೀರು ಹರಿದು ಬರುತ್ತಿದೆ. ಈ ಬಗ್ಗೆ, ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸುತ್ತಲೇ ಬಂದಿದ್ದೇನೆ. ಆದರೆ ಇದುವರೆಗೆ ಅಧಿಕಾರಿಗಳು ಮಾತ್ರ ಇತ್ತ ತಿರುಗಿಯೂ ನೋಡುವುದಿಲ್ಲ’ ಎಂದು ಆರೋಪಿಸುತ್ತಾರೆ ಜಮೀನು ಮಾಲೀಕ ರವಿ.

‘ಇರುವ ಅಲ್ಪ ಜಮೀನಿಗೆ ಗ್ರಾಮದ ಕೊಳಚೆ ನೀರು ಬಂದು ಸೇರುತ್ತಿದೆ. ನಾವು ಕೃಷಿ ಮಾಡುವುದಾದರೂ ಹೇಗೆ? ಅಂತೋಣಿಯಾರ್ ಕೋಯಿಲ್ ಗ್ರಾಮಸ್ಥರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಈ ಮಾರ್ಗವಾಗಿಯೇ ಓಡಾಡುತ್ತಾರೆ. ಚರಂಡಿ ನೀರನ್ನು ಬೇರೆ ಕಡೆ ಬಿಡುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿದ್ದೇನೆ. ಆದರೆ ಅಧಿಕಾರಿಗಳು ಮಾತ್ರ ಕ್ರಮ ಕೈಗೊಳ್ಳುತ್ತಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತೇನೆ’ ಎಂದು ಅವರು ಹೇಳಿದರು.

‘ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲೇ ಈ ಸ್ಥಿತಿಯಾದರೆ ಇನ್ನು ಇದರ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಕುಡಿಯುವ ನೀರು, ರಸ್ತೆ, ಚರಂಡಿ ಮುಂತಾದ ಸಮಸ್ಯೆಗಳು ಮೇಲಿಂದ ಮೇಲೆ ಗ್ರಾಮಸ್ಥರನ್ನು ಕಾಡುತ್ತಲೇ ಇವೆ. ಆದರೆ, ಇದಾವುದಕ್ಕೂ ತಲೆಕೆಡಿಸಿಕೊಳ್ಳದ ಅಧಿಕಾರಿಗಳು ಮತ್ತು ಕೆಲ ಜನಪ್ರತಿನಿಧಿಗಳು ನರೇಗಾ ಕೆಲಸದಲ್ಲಿಯೇ ನಿರತರಾಗಿದ್ದಾರೆ’ ಎಂದು ಆರೋಪಿಸುತ್ತಾರೆ ಗ್ರಾಮಪಂಚಾಯಿತಿ ಕೆಲವು ಸದಸ್ಯರು.

ಈ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಂಗಾಧರ್ ಅವರಿಗೆ ಕರೆ ಮಾಡಿದರೂ ಸಂಪರ್ಕಕ್ಕೆ ಸಿಗಲಿಲ್ಲ.

‘ಕೋತಿಗಳ ಕಾಟ ತಪ್ಪಿಸಿ’

ಗ್ರಾಮದಲ್ಲಿ ಮೂಲಸೌಕರ್ಯಗಳ ಕೊರತೆ ಒಂದೆಡೆಯಾದರೆ ಪ್ರತಿನಿತ್ಯ ಕಾಡುವ ಕೋತಿಗಳ ಕಾಟ ಗ್ರಾಮಸ್ಥರನ್ನು ಮತ್ತಷ್ಟು ಹೈರಾಣಾಗಿಸಿದೆ.

ಪ್ರತಿದಿನ ಮನೆಗಳಿಗೆ ನುಗ್ಗುವ ಕೋತಿಗಳು ಕೈಗೆ ಸಿಕ್ಕಿದ್ದನ್ನು ಚೆಲ್ಲಾಡಿ ಮನೆಯಲ್ಲೆಲ್ಲಾ ಮಲಮೂತ್ರ ವಿಸರ್ಜಿಸಿ ಹೋಗುತ್ತಿವೆ. ಅಡುಗೆ ಕೊಠಡಿಗೆ ನುಗ್ಗಿ ಕೈಗೆ ಸಿಕ್ಕಿದ್ದನ್ನು ಎತ್ತಿಕೊಂಡು ಅವುಗಳನ್ನು ಎಲ್ಲೆಂದರಲ್ಲಿ ಬಿಸಾಡಿ ಹೋಗುತ್ತಿವೆ. ನಿವಾಸಿಗಳು ಕೆಲಸಗಳಿಗೆ ತೆರಳಿದ ಮೇಲೆ ಇದು ಪ್ರತಿನಿತ್ಯ ನಡೆಯುತ್ತಲೇ ಇದೆ ಎಂದು ಆರೋಪಿಸುತ್ತಾರೆ ಗ್ರಾಮಸ್ಥರು.

‘ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹೇಳಿದರೆ ಕೋತಿಗಳನ್ನು ಹಿಡಿಯುವುದಕ್ಕಾಗಿಯೇ ನುರಿತವರಿದ್ದಾರೆ. ಅವರಿಗೆ ತಗುಲುವ ವೆಚ್ಚವನ್ನು ಗ್ರಾಮಪಂಚಾಯಿತಿ ವತಿಯಿಂದ ಭರಿಸಿದರೆ ನಾವು ಅವರನ್ನು ಕರೆಸಿ ಕೋತಿಗಳನ್ನು ಹಿಡಿಸಿ ಬೇರೆ ಕಡೆ ಬಿಡುತ್ತೇವೆ ಎನ್ನುತ್ತಾರೆ. ಈ ಬಗ್ಗೆ ಪಂಚಾಯಿತಿಯಲ್ಲಿ ಕೇಳಿದರೆ, ಹಣವಿಲ್ಲ ಎಂದು ಹೇಳಿ ಸುಮ್ಮನಾಗುತ್ತಾರೆ. ಹಾಗಾದರೆ ನಮ್ಮ ಸಮಸ್ಯೆಯನ್ನು ಯಾರ ಬಳಿ ಹೇಳಿಕೊಳ್ಳುವುದು’ ಎಂಬುದು ಗ್ರಾಮಸ್ಥರ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.