ADVERTISEMENT

ಆಡಳಿತಾತ್ಮಕ ಉದ್ದೇಶಕ್ಕೆ ಸಿ.ಎಂ. ದೆಹಲಿಗೆ: ಕೋಟ ಶ್ರೀನಿವಾಸ ಪೂಜಾರಿ

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 14:33 IST
Last Updated 16 ಜುಲೈ 2021, 14:33 IST
ಚಾಮರಾಜನಗರದ ಚಾಮರಾಜೇಶ್ವರ ದೇವಾಲಯಕ್ಕೆ ಶುಕ್ರವಾರ ಭೇಟಿ ನೀಡಿದ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಅರ್ಚಕರು ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು
ಚಾಮರಾಜನಗರದ ಚಾಮರಾಜೇಶ್ವರ ದೇವಾಲಯಕ್ಕೆ ಶುಕ್ರವಾರ ಭೇಟಿ ನೀಡಿದ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಅರ್ಚಕರು ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು   

ಚಾಮರಾಜನಗರ: ‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಆಡಳಿತಾತ್ಮಕ ಕಾರಣಗಳಿಗಾಗಿ ದೆಹಲಿಗೆ ಹೋಗಿದ್ದಾರೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಶುಕ್ರವಾರ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕರ್ನಾಟಕದ ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪ ಅವರು ದೆಹಲಿಗೆ ಹೋಗುವುದು, ಬೆಂಗಳೂರಿಗೆ ಬರುವುದು ಆಡಳಿತಾತ್ಮಕ ಸಂಪ್ರದಾಯದ ಅಂಗ. ಹಾಗಾಗಿ ದೆಹಲಿಗೆ ಹೋಗುತ್ತಾರೆ. ಮುಖಂಡರನ್ನು ಭೇಟಿ ಮಾಡುತ್ತಾರೆ. ರಾಜ್ಯದ ಅಭಿವೃದ್ಧಿ ವಿಷಯಗಳನ್ನು ಚರ್ಚಿಸುತ್ತಾರೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ’ ಎಂದು ಹೇಳಿದರು.

ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ, ‘ಸಂಪುಟ ವಿಸ್ತರಣೆ ಮಾಡುವುದು ಮುಖ್ಯಮಂತ್ರಿಯವರ ಅಧಿಕಾರ. ಅದನ್ನು ಅವರು ನಿರ್ವಹಿಸುತ್ತಾರೆ. ಪಕ್ಷದ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷರ ಜವಾಬ್ದಾರಿ. ಅದನ್ನು ಅವರು ನಿರ್ವಹಿಸುತ್ತಾರೆ. ಮುಜರಾಯಿ ಸಚಿವನಾಗಿ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವನಾಗಿ ಅತ್ಯಂತ ಜವಾಬ್ದಾರಿಯಾಗಿ ಕರ್ತವ್ಯ ನಿರ್ವಹಿಸುವುದು ನನ್ನ ಹೊಣೆ. ನಾನು ಅದನ್ನು ನಿಭಾಯಿಸುತ್ತಿದ್ದೇನೆ’ ಎಂದು ಉತ್ತರಿಸಿದರು.

ತಮಿಳುನಾಡಿನಲ್ಲಿ ದೇವಾಲಯಗಳಿಗೆ ದಲಿತ ಅರ್ಚಕರನ್ನು ನೇಮಕ ಮಾಡಿರುವುದಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಅರ್ಚಕರ ನೇಮಕಾತಿಗೆ ಸಂಬಂಧಿಸಿದಂತೆ ನಮ್ಮಲ್ಲಿರುವ ಪರಂಪರೆ ಹಾಗೂ ಇತಿಹಾಸ ಮುಂದುವರಿಯುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.