ADVERTISEMENT

ಚಾಮರಾಜನಗರ | 'ವೈಜ್ಞಾನಿಕ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿ'

ತೆಂಗಿನಲ್ಲಿ ಕಪ್ಪು ತಲೆ ಹುಳು ಬಾಧೆ ನಿಯಂತ್ರಿಸಿ: ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸೂಚನೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 5:20 IST
Last Updated 30 ಆಗಸ್ಟ್ 2025, 5:20 IST
ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ತೆಂಗಿನ ಕಪ್ಪು ತಲೆ ಹುಳು ಬಾಧೆ ಕುರಿತು ಜಿಲ್ಲಾಧಿಕಾರಿ ಶಿಲ್ಪಾನಾಗ್ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಸಮಿತಿ ಸಭೆ ನಡೆಯಿತು
ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ತೆಂಗಿನ ಕಪ್ಪು ತಲೆ ಹುಳು ಬಾಧೆ ಕುರಿತು ಜಿಲ್ಲಾಧಿಕಾರಿ ಶಿಲ್ಪಾನಾಗ್ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಸಮಿತಿ ಸಭೆ ನಡೆಯಿತು   

ಚಾಮರಾಜನಗರ: ತೆಂಗು ಬೆಳೆಯಲ್ಲಿ ಕಂಡು ಬಂದಿರುವ ಕಪ್ಪು ತಲೆ ಹುಳುವಿನ ಬಾಧೆಯ ಕುರಿತು ವೈಜ್ಞಾನಿಕವಾಗಿ ಪರೀಕ್ಷೆ ನಡೆಸಿ ತೆಗೆದುಕೊಳ್ಳಬೇಕಾದ ಸಂರಕ್ಷಣಾ ಕ್ರಮಗಳ ಕುರಿತು ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ತೆಂಗಿನ ಕಪ್ಪು ತಲೆ ಹುಳು ಬಾಧೆ ಕುರಿತು ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತೆಂಗು ಬೆಳೆಯಲ್ಲಿ ಕಪ್ಪು ತಲೆ ಹುಳು ಹಾಗೂ ಬಿಳಿ ನೊಣ ಬಾಧಿತ ಪ್ರದೇಶಗಳ ಸಮೀಕ್ಷಾ ಕಾರ್ಯ ನಿಗದಿತ ಅವಧಿಯೊಳಗೆ ಪೂರ್ಣಗೊಳ್ಳಬೇಕು, ಸಮೀಕ್ಷೆಗಾಗಿ ತಂತ್ರಾಂಶದ ಜ್ಞಾನ ಹೊಂದಿರುವ ತಜ್ಞರನ್ನು ಆಯ್ಕೆ ಮಾಡಿಕೊಳ್ಳಬೇಕು, ಬೆಳೆ ಸಮೀಕ್ಷೆ ಮಾದರಿಯಲ್ಲಿ ಇ ಗವರ್ನೆನ್ಸ್‌ ಇಲಾಖೆ ಅಭಿವೃದ್ದಿ ಪಡಿಸಿರುವ ಆ್ಯಪ್ ಮೂಲಕ ಸಮೀಕ್ಷೆ ನಡೆಯಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಮನ್ವಯದೊಂದಿಗೆ ಅತ್ಯಂತ ಸ್ಪಷ್ಟ ಹಾಗೂ ನಿಖರವಾಗಿ ಸಮೀಕ್ಷಾ ಕಾರ್ಯ ನಡೆಸಬೇಕು. ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಸಮೀಕ್ಷೆಯ ಮೇಲ್ವಿಚಾರಣೆ ಮಾಡಿ ಸಮೀಕ್ಷಾ ವರದಿಯನ್ನು ಜಿಲ್ಲಾಮಟ್ಟದ ಸಮಿತಿಯಲ್ಲಿ ಮಂಡಿಸಿ ದೃಢೀಕೃತ ವರದಿಯನ್ನು ಅಭಿಪ್ರಾಯ ಹಾಗೂ ಶಿಫಾರಸಿನೊಂದಿಗೆ ತೋಟಗಾರಿಕೆ ಇಲಾಖೆಯ ನಿರ್ದೇಶನಾಲಯಕ್ಕೆ ಸಲ್ಲಿಸಬೇಕು ಎಂದರು.

ADVERTISEMENT

ಕೃಷಿ ವಿಜ್ಞಾನ ಕೇಂದ್ರದ ತಜ್ಞರ ಮೂಲಕ ರೈತರಿಗೆ ಕಪ್ಪು ತಲೆ ಹುಳುವಿನ ಬಾಧೆಯನ್ನು ತಡೆಯುವ ಹಾಗೂ ಹತೋಟಿಗೆ ತರುವ ಸಲಹಾ ಕ್ರಮಗಳನ್ನು ನೀಡಬೇಕು, ರೈತರಿಗೆ ಜಾಗೃತಿ ಮೂಡಿಸಲು ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಬೇಕು. ತಾಂತ್ರಿಕ ಸಿಬ್ಬಂದಿ ನೆರವಿನೊಂದಿಗೆ ಕಾರ್ಯಾಗಾರಗಳನ್ನು ಏರ್ಪಡಿಸಬೇಕು. ರೋಗ ಬರುವ ಮುನ್ನವೇ ವಹಿಸಬೇಕಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆಯೂ ರೈತರಿಗೆ ತಿಳಿವಳಿಕೆ ಮೂಡಿಸುವ ಕೆಲಸ ವ್ಯಾಪಕವಾಗಿ ನಡೆಯಬೇಕು.

ಕಪ್ಪು ತಲೆ ಹುಳುವಿನ ಬಾಧೆ ತೀವ್ರವಾಗಿರುವ ಪ್ರದೇಶಗಳ ಮೇಲೆ ವಿಶೇಷ ಗಮನಹರಿಸಿ ಹತೋಟಿಗೆ ತರಲು ಶ್ರಮಿಸಬೇಕು. ತಹಶೀಲ್ದಾರ್ ಸಮೀಕ್ಷಾ ಪ್ರಕ್ರಿಯೆಯನ್ನು ಮುತುವರ್ಜಿ ವಹಿಸಿ ನಿಖರ ಮಾಹಿತಿಯನ್ನು ತೋಟಗಾರಿಕೆ ಇಲಾಖೆಗೆ ನೀಡಬೇಕು. ಸಮೀಕ್ಷಾ ಕಾರ್ಯ ವ್ಯವಸ್ಥಿತವಾಗಿ ನಡೆಯಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸೂಚಿಸಿದರು.

ಇದೇ ವೇಳೆ ಸಮೀಕ್ಷೆಗೆ ಹೋಗುವ ತಜ್ಞರಿಗೆ ತೆಂಗು ಬೆಳೆಗಾರರು ಅಗತ್ಯ ಸಹಕಾರ ನೀಡುವಂತೆ ಮಾಹಿತಿ ನೀಡಿ ತಾಕುಗಳನ್ನು ಪರಿಶೀಲಿಸಲು ಸಹಕಾರ ನೀಡುವಂತೆ ತಿಳಿಸಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ತಿಳಿಸಿದರು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ನರೇಶ್ ಮಾತನಾಡಿ ಕಪ್ಪು ತಲೆ ಹುಳು ಮತ್ತು ಬಿಳಿ ನೊಣದ ಕುರಿತ ಕೀಟದ ಜೀವನ ಚಕ್ರ, ಹಾನಿಯ ಲಕ್ಷಣ ಮತ್ತು ನಿಯಂತ್ರಣದ ಕುರಿತು ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಪ್ರಗತಿಪರ ರೈತರು ಕಪ್ಪು ತಲೆ ಹುಳುವಿನ ತೊಂದರೆ ಹಾಗೂ ಸಮೀಕ್ಷೆ ಸಂಬಂಧ ಅಭಿಪ್ರಾಯ ಹಾಗೂ ಸಲಹೆಗಳನ್ನು ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಬಿ.ಎಲ್.ಶಿವಪ್ರಸಾದ್, ರೇಷ್ಮೆ ಇಲಾಖೆ ಉಪನಿರ್ದೇಶಕ ರೇಣುಕಾ ಪ್ರಸಾದ್, ತಹಶೀಲ್ದಾರ್‌ ಬಸವರಾಜು, ಗಿರಿಜಾ, ಜಯಪ್ರಕಾಶ್, ಚೈತ್ರಾ, ನಯನಾ, ತಾಲ್ಲೂಕು ತೋಟಗಾರಿಕೆ ಸಹಾಯಕ ನಿರ್ದೇಶಕರು, ಪ್ರಗತಿಪರ ರೈತರಾದ ಮಹೇಶ್, ಎಸ್.ಪಿ.ಸಂಗಮೇಶ್, ಸತೀಶ್, ಎಂ.ಎಸ್. ಅಶೋಕ್, ಅಧಿಕಾರಿಗಳು ಸಭೆಯಲ್ಲಿ ಇದ್ದರು.

‘ತೋಟಗಾರಿಕೆ ಇಲಾಖೆಯ ನಿರ್ದೇಶನಾಲಯಕ್ಕೆ ವರದಿ ಸಲ್ಲಿಸಿ’ ‘ಸಮೀಕ್ಷೆ ನಿಖರವಾಗಿರಲಿ; ವಸ್ತುನಿಷ್ಠವಾಗಿರಲಿ’ ‘ರೋಗ ಬಾಧೆ ನಿಯಂತ್ರಣಕ್ಕೆ ರೈತರಿಗೆ ಸಲಹೆ ನೀಡಿ’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.