ಯಳಂದೂರು: ತಾಲ್ಲೂಕಿನ ತೆಂಗು ಮತ್ತು ಎಳೆನೀರಿಗೆ ಬಹು ಬೇಡಿಕೆ ಹಾಗೂ ಬೆಲೆ ಸಿಗುತ್ತಿದ್ದು ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಆದರೆ, ತೆಂಗು ಬೆಳೆಗೆ ಕಪ್ಪುತಲೆ ಹುಳದ ಬಾಧೆ, ಬೆಂಕಿರೋಗ, ಹರಳು ನಾಶ, ಬಿಳಿನೊಣದ ಕಾಟ ಇಳುವರಿ ಕುಸಿತಕ್ಕೆ ಕಾರಣವಾಗಿದ್ದು ನೋವು ತಂದಿದೆ. ರೈತರ ಕೈಗೆ ಬಂದ ಕಲ್ಪವೃಕ್ಷ ಬೆಳೆ ಕೀಟ ರೋಗಗಳ ಹಾವಳಿಗೆ ತುತ್ತಾಗಿದೆ.
ಅಗರ ಮತ್ತು ಕಸಬಾ ಹೋಬಳಿಗಳಲ್ಲಿ 2,600ಕ್ಕೂ ಹೆಚ್ಚಿನ ತೆಂಗಿನ ತಾಕುಗಳಿವೆ. ಕೋಟ್ಯಂತರ ರೂಪಾಯಿ ವಹಿವಾಟಿ ನಡೆಯುವ ತೆಂಗಿಗೆ ಹವಾಮಾನ ವೈಪರಿತ್ಯ, ಮಳೆಯ ವ್ಯತ್ಯಯ ಹಾಗೂ ಕೀಟ ಕಾಟದಿಂದ ರೋಗ ಕಾಣುತ್ತಿದೆ. ಪರಿಣಾಮ ಆದಾಯದಲ್ಲಿ ಖೋತಾ ಆಗುತ್ತಿದೆ.
ಈ ವರ್ಷ ಮುಂಗಾರಿಗೂ ಮೊದಲು ಬೇಸಿಗೆಯ ಅವಧಿ ಹೆಚ್ಚಾಗಿದ್ದ ಪರಿಣಾಮ ತೆಂಗಿನ ಉತ್ಪಾದನೆ ಕುಸಿಯಿತು. ಈ ನಡುವೆ ಎಳೆನೀರು ಮತ್ತು ತೆಂಗಿನ ಧಾರಣೆ ಗಗನ ಮುಖಿಯಾಗಿ ಬೆಳೆಗಾರರ ಸಂತಸಕ್ಕೆ ಕಾರಣವಾಯಿತು. ಸಾಲುಸಾಲು ಹಬ್ಬಗಳು ಬಂದಿದ್ದರಿಂದ ತೆಂಗು ಮತ್ತು ಎಳೆನೀರಿಗೆ ಬೇಡಿಕೆ ತಗ್ಗದೆ ಉತ್ತಮ ಬೆಲೆಯೂ ದೊರೆಯುತ್ತಿತ್ತು.
ಇದರ ನಡುವೆ ತೆಂಗಿನ ತೋಟಗಳಲ್ಲಿ ಕಪ್ಪುತಲೆ ಹುಳ ಹಾಗೂ ಬಿಳಿನೊಣದ ಭಾದೆ ಹೆಚ್ಚಾಗಿದ್ದು ಗಿಡಗಳ ಸೊರಗುತ್ತಿವೆ. ತೆಂಗಿನ ಕಾಯಿಯ ರಸ ಹೀರುವ ಕೀಟಗಳ ಹಾವಳಿ ಮಿತಿಮೀರಿದ್ದು ಅರಳುಗಳು ಉದುರುತ್ತಿದೆ. ತಾಕುಗಳಿಗೆ ಕೀಟಬಾಧೆ ಕಾಣಿಸಿಕೊಂಡಿದ್ದು, ಏಕಕಾಲದಲ್ಲಿ ರೋಗ ನಿಯಂತ್ರಿಸುವುದು ಕಷ್ಟ ಎನ್ನುತ್ತಾರೆ ದುಗ್ಗಹಟ್ಟಿ ಕೃಷಿಕ ರಾಜೇಶ್.
ಸಾವಯವ ವಿಧಾನದ ತೆಂಗು ತಾಕಿನಲ್ಲಿ ರೋಗಭಾದೆ ಕಡಿಮೆ ಇದೆ. ಸಹಜ ಕೃಷಿಯಲ್ಲಿ ಎರೆಹುಳ ಮತ್ತು ಜೀವಾಣು ವೃದ್ಧಿಸುವುದರಿಂದ ರೋಗ ಕಡಿಮೆ. ಜೀವಾಮೃತ ಬಳಕೆ ಮಾಡಿ ರಸಾಯನಿಕ ಗೊಬ್ಬರ ಸೇರಿಸುವುದನ್ನು ಕಡಿಮೆ ಮಾಡಿದರೆ ಕಾಯಿಗಳ ಇಳುವರಿಯೂ ಹೆಚ್ಚಾಗಲಿದೆ ಎನ್ನುತ್ತಾರೆ ಹೊನ್ನೂರು ಸಾವಯವ ಕೃಷಿಕ ಪ್ರಸನ್ನ.
300 ಹಿಡುವಳಿ ಸಮೀಕ್ಷೆ ಮುಕ್ತಾಯ:
ಮರಗಳಿಗೆ ಕಪ್ಪುತಲೆ ಹುಳು ಕಾಣಿಸಿಕೊಂಡಾಗ ತಕ್ಷಣ ಹತೋಟಿ ಕ್ರಮ ತೆಗೆದುಕೊಳ್ಳಲು ವಿಳಂಬ ಮಾಡಿದರೆ, ಅಕ್ಕಪಕ್ಕದ ತೋಟಗಳಿಗೆ ಹಬ್ಬುವ ಆತಂಕ ಹೆಚ್ಚಾಗಿರುತ್ತದೆ. ತೋಟಗಾರಿಕಾ ಇಲಾಖೆ ಕೀಟದ ಹಾವಳಿ ತಡೆಯಲು ರೋಗಗಳ ಸಮಗ್ರ ನಿಯಂತ್ರಣ ಯೋಜನೆಯಡಿ ಪ್ರಯೋಗ ಶಾಲೆಗಳಲ್ಲಿ ಗೋನಿಯೋಜಸ್ ಪರೋಪಜೀವಿಗಳನ್ನು ಬೆಳೆಸಿ ಗಿಡಗಳಿಗೆ ಬಿಡುತ್ತಿದೆ. ರೈತರಿಗೆ ಸಾವಯವ ಗೊಬ್ಬರ ಹಾಗೂ ಐಸೇರಿಯಾ ಶಿಲೀಂದ್ರ ನಾಶಕ ಬಳಸಲು ಸೂಚಿಸಲಾಗಿದೆ.
ತಾಲ್ಲೂಕಿನಲ್ಲಿ 2,600 ತೆಂಗು ತಾಕು ಗುರುತಿಸಲಾಗಿದ್ದು ಅವುಗಳ ಪೈಕಿ 300 ಹಿಡುವಳಿಗಳಲ್ಲಿ ರೋಗಭಾದೆ ಸಮೀಕ್ಷೆ ಮುಗಿದಿದೆ. ತಜ್ಞರು ತೋಟಕ್ಕೆ ಬಂದಾಗ ರೈತರು ಸಹಕರಿಸಬೇಕು ಎಂದು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜಿ.ಎಸ್.ರಾಜು ಹೇಳಿದರು.
ವಿಶ್ವ ತೆಂಗು ದಿನ:
ಸೆ.2ರಂದು ವಿಶ್ವ ತೆಂಗು ದಿನ ಆಚರಿಸಲಾಗುತ್ತದೆ. ತೆಂಗಿನ ಪ್ರಾಮುಖ್ಯತೆ, ಪೌಷ್ಠಿಕಾಂಶದ ಮೌಲ್ಯ, ಆರ್ಥಿಕ, ಸಾಮಾಜಿಕ ಹಾಗೂ ಆರೋಗ್ಯಕ್ಕೆ ಕೊಡುಗೆ, ವಿವಿಧ ಉದ್ಯಮಗಳಲ್ಲಿ ಬಹು ಬಳಕೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಈಚಿನ ವರ್ಷಗಳಲ್ಲಿ ಇಳುವರಿ ಕುಸಿತ ಮತ್ತು ಕೀಟಬಾಧೆಗಳ ಬಗ್ಗೆಯೂ ರೈತರಿಗೆ ಮಾಹಿತಿ ನೀಡಲಾಗುತ್ತಿದೆ. ಈ ದೆಸೆಯಲ್ಲಿ ಏಷ್ಯನ್ ಮತ್ತು ಪೆಸಿಫಿಕ್ ತೆಂಗು ಸಮುದಾಯ (ಎಪಿಸಿಸಿ) ನೆರವು ನೀಡುತ್ತ ಬಂದಿದೆ.
ತೆಂಗಿಗೆ ಉತ್ತಮ ಬೆಲೆ
ಮಾರುಕಟ್ಟೆಯಲ್ಲಿ ಗುಣಮಟ್ಟದ ತೆಂಗು 1 ಕೆಜಿಗೆ ಗರಿಷ್ಠ ₹ 70 ಮುಟ್ಟಿದೆ. ಕೊಬ್ಬರಿ ಮತ್ತು ಎಳೆನೀರಿಗೂ ಬೆಲೆ ಹೆಚ್ಚಳವಾಗಿದೆ. ಈ ನಡುವೆ ದಸರಾ ಹಬ್ಬದ ತನಕ ಧಾರಣೆ ಏರುವ ನಿರೀಕ್ಷೆ ಬೆಳೆಗಾರರಲ್ಲಿ ಮೂಡಿಸಿದೆ. ಈ ಬೆಳವಣಿಗೆ ತೆಂಗು ನಂಬಿದವರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಆದರೆ ಬೆಳೆ ರೋಗ ಮುಕ್ತವಾದರೆ ರೈತರ ವರಮಾನದಲ್ಲಿ ಸುಸ್ಥಿರತೆ ಕಾಣಲಿದೆ ಎಂದು ಪಟ್ಟಣದ ಬೆಳೆಗಾರ ಸೂರಿ ಹೇಳಿದರು.
ವಿಚಾರ ಸಂಕಿರಣ ನಾಳೆ
ತೋಟಗಾರಿಕಾ ಇಲಾಖೆ ತೆಂಗು ಬೆಳೆಗಾರರ ಸಂಸ್ಕರಣೆ ಮತ್ತು ಮಾರಾಟ ಸಹಕಾರ ಸಂಘ ತೋಟಗಾರಿಕಾ ವಿದ್ಯಾಲಯ ಮೈಸೂರು ಹಾಗೂ ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರ ವತಿಯಿಂದ ತೆಂಗು ಬೆಳೆಯನ್ನು ಕಾಡುವ ಕೀಟ ಹಾಗೂ ರೋಗದ ನಿರ್ವಹಣೆ ಕುರಿತ ವಿಚಾರ ಸಂಕಿರಣವನ್ನು ಸೆ.2ರಂದು ಬೆಳಿಗ್ಗೆ 11ಕ್ಕೆ ಜಿಲ್ಲಾಡಳಿತ ಭವನದ ಜಿ.ಎಸ್.ಪಟೇಲ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಭಾಗವಹಿಸುವ ತೆಂಗು ಬೆಳೆಗಾರರು 63624 00730 98863 76175 ಕರೆ ಮಾಡಿ ನೋಂದಾಯಿಸಿಕೊಳ್ಳಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.