ADVERTISEMENT

ಚಾಮರಾಜನಗರದ ತೆಂಗು ಸಂಸ್ಕರಣ ಘಟಕ ಆರಂಭ ಶೀಘ್ರ

ತೆಂಗಿನಕಾಯಿ ಖರೀದಿ ಆರಂಭಿಸಿದ ತೆಂಗು ಬೆಳೆಗಾರರ ಸಂಸ್ಕರಣ, ಮಾರಾಟ ಸಹಕಾರ ಸಂಘ

ಸೂರ್ಯನಾರಾಯಣ ವಿ
Published 18 ಜೂನ್ 2020, 19:30 IST
Last Updated 18 ಜೂನ್ 2020, 19:30 IST
ತೆಂಗು ಸಂಸ್ಕರಣ ಘಟಕದ ಒಳನೋಟ
ತೆಂಗು ಸಂಸ್ಕರಣ ಘಟಕದ ಒಳನೋಟ   

ಚಾಮರಾಜನಗರ: ಚಾಮರಾಜನಗರ ತಾಲ್ಲೂಕು ತೆಂಗು ಬೆಳೆಗಾರರ ಸಂಸ್ಕರಣಮತ್ತು ಮಾರಾಟ ಸಹಕಾರ ಸಂಘವು ಕಾಳನಹುಂಡಿ ರಸ್ತೆಯ ಮುಣಚನಹಳ್ಳಿಯಲ್ಲಿ ಸ್ಥಾಪಿಸಿರುವ ಅತ್ಯಾಧುನಿಕ ತೆಂಗು ಸಂಸ್ಕರಣ ಘಟಕ ಶೀಘ್ರವಾಗಿ ಕಾರ್ಯರಂಭ ಮಾಡಲಿದೆ.

ರಾಜ್ಯ ಸರ್ಕಾರದ ನೆರವಿನಿಂದ ₹7.5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಘಟಕವು 2018ರ ವರ್ಷಾರಂಭದಲ್ಲೇ ಉದ್ಘಾಟನೆಗೆ ಸಿದ್ಧವಾಗಿತ್ತು. ತೆಂಗಿನಪುಡಿಯನ್ನು ತಯಾರಿಸಲಿರುವ ಈ ಘಟಕವು ಈಗಾಗಲೇ ಪ್ರಾಯೋಗಿಕವಾಗಿ ಕಾರ್ಯನಿರ್ವಹಿಸಿದೆ. ಹಿಂದಿನ ಸರ್ಕಾರಗಳಲ್ಲಿ ಮುಖ್ಯಮಂತ್ರಿಯಾಗಿದ್ದವರು (ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ) ಬಾರದೇ ಇದ್ದುದರಿಂದ ಉದ್ಘಾಟನೆ ಸಾಧ್ಯವಾಗಿರಲಿಲ್ಲ.

ಆದರೆ, ಇನ್ನೀಗ ಅಧಿಕೃತವಾಗಿ ಉದ್ಘಾಟನೆ ಮಾಡುವುದಕ್ಕೂ ಮೊದಲೇ, ಘಟಕವನ್ನು ಕಾರ್ಯಾರಂಭಗೊಳಿಸಲು ತೀರ್ಮಾನಿಸಿರುವ ಬೆಳೆಗಾರರ ಸಂಘ, ತೆಂಗಿನಕಾಯಿ ಖರೀದಿ ಮಾಡಲು ಆರಂಭಿಸಿದೆ. ಸಂಘಕ್ಕೆ ತೆಂಗಿನಕಾಯಿಗಳನ್ನು ಮಾರಾಟ ಮಾಡುವಂತೆ ಬೆಳೆಗಾರರಲ್ಲಿ ಅದು ಮನವಿಯನ್ನೂ ಮಾಡಿದೆ.

ADVERTISEMENT

ದಿನಕ್ಕೆ ಕನಿಷ್ಠ 50 ಸಾವಿರ ತೆಂಗಿನಕಾಯಿಗಳನ್ನು ಸಂಸ್ಕರಿಸಿ ಪುಡಿ ತಯಾರಿಸುವ ಸಾಮರ್ಥ್ಯ ಹೊಂದಿರುವ ಅತ್ಯಾಧುನಿಕ ಘಟಕವನ್ನು ಆರಂಭಿಸಲು ದೊಡ್ಡ ಮಟ್ಟದಲ್ಲಿ ತೆಂಗಿನಕಾಯಿಯನ್ನು ಸಂಗ್ರಹಿಸಬೇಕಾಗಿದೆ. ಹತ್ತು ದಿನಗಳಿಂದ ತೆಂಗಿನಕಾಯಿ ಖರೀದಿ ಮಾಡಲಾಗುತ್ತಿದೆ.ಸದ್ಯ ಸಂಘವು ಕೆಜಿಗೆ ₹26.50ರಂತೆ ಟನ್‌ಗೆ ₹26,500 ನೀಡುತ್ತಿದೆ.

‘ಅಧಿಕೃತ ಉದ್ಘಾಟನೆಯನ್ನು ನಾವು ಆಮೇಲೆ ಮಾಡುತ್ತೇವೆ. ಈಗ ಘಟಕವನ್ನು ಕಾರ್ಯಾರಂಭ ಮಾಡಲು ತೀರ್ಮಾನಿಸಿದ್ದೇವೆ. ಅದಕ್ಕಾಗಿ ತೆಂಗಿನ ಕಾಯಿ ಖರೀದಿಸಲಾಗುತ್ತಿದೆ’ ಎಂದು ರೈತ ಮುಖಂಡ ಹಾಗೂ ತಾಲ್ಲೂಕು ತೆಂಗು ಬೆಳೆಗಾರರ ಸಂಸ್ಕರಣ ಮತ್ತು ಮಾರಾಟ ಸಹಕಾರ ಸಂಘದ ಅಧ್ಯಕ್ಷ ಮಹೇಶ್‌ ಪ್ರಭು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಘಟಕಕ್ಕೆ ಪೂರೈಸಬೇಕು: ‘ದಿನಕ್ಕೆ ಎಂಟು ಗಂಟೆ ಕೆಲಸ ಮಾಡಲು ನಮಗೆ 50 ಸಾವಿರ ತೆಂಗಿನಕಾಯಿಗಳು ಬೇಕು. ಸಾಕಷ್ಟು ಪ್ರಮಾಣದಲ್ಲಿ ತೆಂಗಿನಕಾಯಿ ಸಂಗ್ರಹವಾದರೆ ಮುಂದಿನವಾರವೇ ಘಟಕ ಆರಂಭಿಸುತ್ತೇವೆ. ಸದ್ಯ ಕೆಜಿಗೆ ₹26.50ರಂತೆ ನೀಡುತ್ತಿದ್ದೇವೆ. ಬೆಳೆಗಾರರೇ ನೇರವಾಗಿ ಸಂಸ್ಕರಣ ಘಟಕಕ್ಕೆ ಸುಲಿದ ಹಾಗೂ ಜುಟ್ಟು ಇರದ ತೆಂಗಿನಕಾಯಿಗಳನ್ನು ಪೂರೈಸಬೇಕು’ ಎಂದು ಸಂಘದ ಕಾರ್ಯದರ್ಶಿ ಶಾಂತಮಲ್ಲಪ್ಪ ಅವರು ಹೇಳಿದರು.

‘ತೆಂಗಿನ ದರದಲ್ಲಿ ವ್ಯತ್ಯಾಸ ಆದರೆ, ಸಂಘದ ಸದಸ್ಯರು ಹಾಗೂ ನಮಗೆ ತೆಂಗಿನಕಾಯಿ ಮಾರಾಟ ಮಾಡುವವರಿಗೆ ಎಸ್‌ಎಂಎಸ್‌ ಮೂಲಕ ಮಾಹಿತಿ ನೀಡುತ್ತೇವೆ’ ಎಂದು‌ ಹೇಳಿದರು.

‘ಸದ್ಯ ತೆಂಗಿನಕಾಯಿ ತಿರುಳಿನಿಂದ ಪುಡಿ ತಯಾರಿಸುವುದಕ್ಕೆ ಮಾತ್ರ ಗಮನ ನೀಡುತ್ತಿದ್ದೇವೆ. ಪುಡಿಯನ್ನು ಪ್ಯಾಕ್‌ ಮಾಡಿ ಮಾರಾಟ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ’ ಎಂದು ಶಾಂತಮಲ್ಲಪ್ಪ ಅವರು ಮಾಹಿತಿ ನೀಡಿದರು.

ಗುಣಮಟ್ಟದ ತೆಂಗಿನಕಾಯಿ ಬೇಕು

ತೆಂಗು ಬೆಳೆಗಾರರು ತೆಂಗಿನಕಾಯಿಯನ್ನು ನೇರವಾಗಿ ಘಟಕಕ್ಕೆ ಸರಬರಾಜು ಮಾಡಬೇಕು. ಖರೀದಿ ಮಾಡಿದ ಬಳಿಕ ಹಣವನ್ನು ಶೀಘ್ರವಾಗಿ ಬ್ಯಾಂಕ್‌ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುವುದು ಎಂದು ಸಂಘ ಹೇಳಿದೆ.

ತೆಂಗಿನಕಾಯಿಯನ್ನು ಖರೀದಿ ಮಾಡಬೇಕಾದರೆ, ಅದು ಕನಿಷ್ಠ 200 ಗ್ರಾಂ ತೂಕ ಇರಬೇಕು. ಬಲಿತಿರಬೇಕು. ಗುಣಮಟ್ಟದ್ದಾಗಿರಬೇಕು. ಕೊಳಕು, ಎಳಸು ತೆಂಗಿನಕಾಯಿ ಖರೀದಿಸುವುದಿಲ್ಲ, ತಿರಸ್ಕೃತ ಕಾಯಿಗಳನ್ನು ಬೆಳೆಗಾರರು ವಾಪಸ್‌ ತೆಗೆದುಕೊಂಡು ಹೋಗಬೇಕು. ಬೆಳಿಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ಖರೀದಿಸಲಾಗುತ್ತದೆ ಎಂದು ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.

ಸಂಘದ ಸದಸ್ಯಲ್ಲದವರು ₹500 ಪಾವತಿಸಿ, ನಾಮಮಾತ್ರ ಸದಸ್ಯತ್ವ ಪಡೆದು ತೆಂಗಿನಕಾಯಿ ಮಾರಾಟ ಮಾಡುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.

ಮಾಹಿತಿಗೆ: ಕಾರ್ಯದರ್ಶಿ 7337888372 ಮತ್ತು ಘಟಕದ ಎಂಜಿನಿಯರ್‌ 7337888373 ಅವರನ್ನು ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.