
ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಸುತ್ತಮುತ್ತ ಪ್ರದೇಶಗಳಲ್ಲಿ ಕಾಫಿ ಕೊಯ್ಲು ಬಿರುಸು ಪಡೆದುಕೊಂಡಿದ್ದು ಇದೇ ವೇಳೆ ಬೀಸುತ್ತಿರುವ ಶೀತಗಾಳಿ, ಮಂಜು ಹಾಗೂ ಮೋಡ ಮುಸುಕಿದ ವಾತಾವರಣದಿಂದ ಕೊಯ್ಲು ಕಾರ್ಯಕ್ಕೆ ಅಡ್ಡಿಯುಂಟು ಮಾಡಿದೆ.
ಅತಿಯಾದ ಶೀತಗಾಳಿಗೆ ಹಣ್ಣಾದ ಕಾಫಿ ಬೀಜಗಳು ಉದುರುತ್ತಿದ್ದು, ಬೆಳೆಗಾರರಿಗೆ ಕಾಫಿ ಬೀಜಗಳನ್ನು ಹೆಕ್ಕುವ, ಸಂಗ್ರಹ ಮಾಡುವ ಸಮಸ್ಯೆ ಕಾಡುತ್ತಿದೆ. ದಿತ್ವಾ ಚಂಡಮಾರುತದ ಪರಿಣಾಮ ಬಿಳಿಗಿರಿರಂಗನಬೆಟ್ಟದಲ್ಲಿ ಉಷ್ಣಾಂಶದಲ್ಲಿ ಕುಸಿತವಾಗಿದೆ.
ಭಾನುವಾರ ಪೂರ್ತಿ ತುಂತುರು ಮಳೆ ಹನಿದರೆ, ಸೋಮವಾರ ದಟ್ಟ ಮಂಜಿನ ವಾತಾವರಣ ಕಂಡುಬಂತು. ಬೆಟ್ಟದಲ್ಲಿರುವ 10ಕ್ಕೂ ಹೆಚ್ಚಿನ ಪೋಡುನಲ್ಲಿ ಅರೆಬಿಕಾ ತಳಿಯ ಕಾಫಿ ಗಿಡಗಳನ್ನು ಬೆಳೆಯಲಾಗಿದ್ದು ಕಾಫಿ ಬೀಜಗಳ ಕಟಾವು ನಡೆಯುತ್ತಿದೆ. ಹವಾಮಾನ ವೈಪರೀತ್ಯದ ನಡುವೆಯೂ 500ಕ್ಕೂ ಹೆಚ್ಚಿನ ಕುಟುಂಬಗಳು ಕಾಫಿ ಹಣ್ಣು ಸಂಸ್ಕರಣೆಯಲ್ಲಿ ತೊಡಗಿದ್ದಾರೆ.
ಶೀತಗಾಳಿಯ ನಡುವೆ ಕಾಫಿ ಹಣ್ಣುಗಳನ್ನು ಸಂಗ್ರಹಿಸಿ ಪಲ್ಪಿಂಗ್ ಯಂತ್ರದಿಂದ ಸಿಪ್ಪೆ ತೆಗೆಯಬೇಕು. ನಂತರ ಕಣದಲ್ಲಿ ಹರಡಿ ಒಣಗಿಸಬೇಕು. ಕಳೆದ ಒಂದು ವಾರದಿಂದ ಬಿಸಿಲಿನ ತಾಪ ಕುಸಿದಿರುವುದರಿಂದ ಕಾಫಿ ಬೀಜಗಳನ್ನು ಒಣಗುವುದು ಕಷ್ಟವಾಗಿದೆ ಎನ್ನುತ್ತಾರೆ ಕಾಫಿ ಬೆಳೆಗಾರ ಕಾರನ ಕೇತೇಗೌಡ.
ಕೊಯ್ಲಿನಿಂದ ಇಡಿದು ಒಣಗಿಸುವ ತನಕ ಮಹಿಳಾ ಕೂಲಿ ಕಾರ್ಮಿಕರೇ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಾರೆ. ದಿನಕ್ಕೆ ₹ 360 ಕೂಲಿ ನೀಡಲಾಗುತ್ತಿದ್ದು ಹಾಡಿಗಳ ಮಂದಿಯೇ ಪಲ್ಪಿಂಗ್ ಯಂತ್ರಗಳ ನಿರ್ವಹಣೆ ಮಾಡುತ್ತಿದ್ದಾರೆ. ಗಿಡದಿಂದ ಕಾಫಿಬೀಜಗಳನ್ನು ಹೆಕ್ಕಿ, ಕಾಳಿನ ದೃಢತೆ ಪರಿಶೀಲಿಸಿ ಸುಲಿದು ನೆಲಕ್ಕೆ ಹರಡುವವರೆಗೂ ಮಹಿಳೆಯರ ಶ್ರಮವೇ ಹೆಚ್ಚಿದೆ. ಚಂದ್ರಗಿರಿ, ಸೆಲೆಕ್ಷನ್-9 ಮತ್ತು ರೋಬಸ್ಟಾ ತಳಿಗಳ ಗಿಡಗಳಲ್ಲಿ ಕೆಲವೆಡೆ ರೋಗ ತಗುಲಿದ್ದು, ಇಳಿವರಿ ಸಾಮಾನ್ಯವಾಗಿ ಬಂದಿದೆ ಎನ್ನುತ್ತಾರೆ ಬೆಳೆಗಾರರು.
ಡಿಸೆಂಬರ್-ಜನವರಿ ನಡುವೆ ಕಾಫಿ ಬೀಜಗಳ ಕೊಯ್ಲು ಹೆಚ್ಚಾಗಿ ನಡೆಯುತ್ತದೆ. ಒಂದೆರಡು ದಿನ ಮಳೆ ಸುರಿದರೆ ಬೆಳೆಗೆ ಸಮಸ್ಯೆಯಾಗುವುದಿಲ್ಲ. ಆದರೆ, ವಾರಗಟ್ಟಲೆ ತುಂತುರು ಮಳೆ ಬಂದರೆ ಹಣ್ಣಿನ ಗುಣಮಟ್ಟ ಕಾಪಾಡಿಕೊಳ್ಳುವ ಸಮಸ್ಯೆ ಎದುರಾಗುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕಾಫಿ ಉತ್ಪಾದನೆ ಚೆನ್ನಾಗಿದ್ದು ಉತ್ತಮ ಧಾರಣೆ ನಿರೀಕ್ಷೆಯೂ ಇದೆ. ಉಷ್ಣಾಂಶ ಕುಸಿದರೆ ಕೆಲವು ದಿನಗಳ ಕಾಲ ಕೊಯ್ಲು ಮುಂದೂಡಬೇಕು ಎನ್ನುತ್ತಾರೆ ಬಿಳಿಗಿರಿ ಸೋಲಿಗ ಉತ್ಪಾದಕರ ಕಂಪನಿ ಸದಸ್ಯೆ ಭಂಗಿ ಸಿದ್ದಮ್ಮ.
‘ಕಳೆದ ವರ್ಷ ಕಾಫಿ ಕೆಜಿಗೆ ₹ 550 ದರದಲ್ಲಿ ಮಾರಾಟವಾಗಿತ್ತು. ಈ ವರ್ಷ ಧಾರಣೆ ಏರಿಕೆ ಕಂಡಿಲ್ಲ. ಸಕಲೇಶಪುರ ಹಾಗೂ ಸಿದ್ದಾಪುರ ಮಾರುಕಟ್ಟೆ ಬೆಲೆ ಆಧರಿಸಿ ಮಧ್ಯವರ್ತಿಗಳು ಬೆಲೆ ನಿರ್ಣಯಿಸುತ್ತಾರೆ. ಸ್ಥಳೀಯರು ತಮ್ಮದೇ ಮಾರಾಟ ಕೇಂದ್ರಗಳಿಗೆ ಕಾಫಿ ಪೂರೈಸುತ್ತಾರೆ. ಸೋಲಿಗರ ಅಡವಿ ಸಂಸ್ಕರಣ ಟ್ರಸ್ಟ್ ಈ ದಿಸೆಯಲ್ಲಿ ಬೆಳೆಗಾರರ ಹಿತರಕ್ಷಣೆಯಲ್ಲಿ ತೊಡಗಿದೆ’ ಎಂದು ಬುಡಕಟ್ಟು ಸಂಘದ ಜಿಲ್ಲಾ ಕಾರ್ಯದರ್ಶಿ ಸಿ.ಮಾದೇಗೌಡ ಹೇಳುತ್ತಾರೆ.
ಬೆಳೆಗಾರರಿಗೆ ಮಳೆಯ ಋತುವಿನಲ್ಲಿ ಕಾಫಿಬೀಜ ಒಣಗಿಸಲು ಡ್ರೈಯರ್ ಅವಶ್ಯಕತೆ ಇದ್ದು ಉತ್ತಮವಾಗಿ ಸಂಸ್ಕರಿಸಿದರೆ ಬೆಲೆ ಮತ್ತು ಬೇಡಿಕೆ ಹೆಚ್ಚಾಗಲಿದೆ. ಈಚಿನ ದಿನಗಳಲ್ಲಿ ಕಾಫಿ ಸಸಿಗಳಿಗೆ ರೋಗ ತಗುಲಿದ್ದು ಬೆಳೆಗಾರರು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಕಾಫಿ ಕೃಷಿಕ ಅಚ್ಚುಗೇಗೌಡ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.