ADVERTISEMENT

ಕೊಳ್ಳೆಗಾಲ: ಬ್ಯಾಂಡ್‌ ಸ್ವರ, ಕೊಳಲಿನ ನಾದಕ್ಕೆ ಲಯಬದ್ಧ ಹೆಜ್ಜೆ

ಗಮನ ಸೆಳೆಯುತ್ತಿದೆ ಭವನ್ಸ್‌ ಗೀತಾ ಶಾಲೆಯ ಮಕ್ಕಳ ಬ್ಯಾಂಡ್‌ ನೃತ್ಯ

ಅವಿನ್ ಪ್ರಕಾಶ್
Published 14 ಫೆಬ್ರುವರಿ 2020, 19:45 IST
Last Updated 14 ಫೆಬ್ರುವರಿ 2020, 19:45 IST
ಮಕ್ಕಳು ಬ್ಯಾಂಡ್‍ನೊಂದಿಗೆ ಕೊಳಲು ಊದುತ್ತಾ ಲಯಬದ್ದವಾಗಿ ನೃತ್ಯ ಮಾಡುತ್ತಿರುವುದು
ಮಕ್ಕಳು ಬ್ಯಾಂಡ್‍ನೊಂದಿಗೆ ಕೊಳಲು ಊದುತ್ತಾ ಲಯಬದ್ದವಾಗಿ ನೃತ್ಯ ಮಾಡುತ್ತಿರುವುದು   

ಕೊಳ್ಳೆಗಾಲ: ಈ ಶಾಲೆಯ ಮಕ್ಕಳು ಬ್ಯಾಂಡ್‍ನ ಲಯಬದ್ಧ ಸ್ವರಕ್ಕೆ ಕೊಳಲು ಊದುತ್ತಾ ಹೆಜ್ಜೆ ಹಾಕುತ್ತಿದ್ದರೆ ನೋಡುಗರ ಎರಡು ಕೈಗಳು ತನ್ನಿಂತಾನೆ ಕರತಾಡನದಲ್ಲಿ ತೊಡಗುತ್ತದೆ. ಇತ್ತೀಚೆಗೆ ನಡೆದ ರಾಜ್ಯಮಟ್ಟದ ಬ್ಯಾಂಡ್‌ ನುಡಿಸುವ ಸ್ಪರ್ಧೆಯಲ್ಲಿ ಈ ಶಾಲಾ ತಂಡ ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ನಗರದ ಭವನ್ಸ್‌ ಗೀತಾ ಇಂಗ್ಲಿಷ್‌ ಮಾಧ್ಯಮ ಶಾಲೆ ತನ್ನ ಬ್ಯಾಂಡ್‌ ಸೆಟ್‌ ತಂಡದಿಂದ ರಾಜ್ಯದ ಗಮನ ಸೆಳೆಯುತ್ತಿದೆ. ಗೀತ ಶಿಶುವಿಹಾರ ಎಂಬ ಹೆಸರಿನಲ್ಲಿ 1954ರಲ್ಲಿ ಸ್ಥಾಪನೆಗೊಂದ ಶಿಕ್ಷಣ ಸಂಸ್ಥೆಯು 2009ರಲ್ಲಿ ಭವನ್ಸ್‌ ಗೀತಾ ಎಂದು ಮರುನಾಮಕರಣಗೊಂಡು ಕಾರ್ಯನಿರ್ವಹಿಸುತ್ತಿದೆ.

ಬ್ಯಾಂಡ್‌ನೊಂದಿಗೆ ನೃತ್ಯ:ಮಕ್ಕಳಿಗೆ ಇಲ್ಲಿ ಬ್ಯಾಂಡ್‌, ಕೊಳಲು ನುಡಿಸಲು ವಿಶೇಷ ಆದ್ಯತೆ ನೀಡುತ್ತಾರೆ. ವಿಶೇಷ ತರಬೇತಿಯನ್ನೂ ನೀಡಲಾಗುತ್ತದೆ. ಇಲ್ಲಿನ ಬಹುತೇಕ ಮಕ್ಕಳು ಒಂದಲ್ಲ ಒಂದು ಬಾರಿ ಬ್ಯಾಂಡ್‌ ಬಾರಿಸಿದವರೇ. ಕೊಳಲನ್ನೂ ನುಡಿಸಿದವರೇ.

ADVERTISEMENT

ಇಲ್ಲಿನ ಬ್ಯಾಂಡ್‌ ತಂಡದಲ್ಲಿ 59 ವಿದ್ಯಾರ್ಥಿಗಳಿದ್ದಾರೆ. 15 ಮಂದಿ ಬಾಲಕರು ಲಯಬದ್ಧವಾಗಿ ಬ್ಯಾಂಡ್‌ ಬಾರಿಸಿದರೆ, 44 ಮಕ್ಕಳು ಕೊಳಲು ನುಡಿಸುತ್ತಾರೆ.‌ಬ್ಯಾಂಡ್‌, ಕೊಳಲು ನುಡಿಸುವುದರೊಂದಿಗೆ ನೃತ್ಯಮಾಡುವುದು ಇಲ್ಲಿನ ತಂಡದ ವೈಶಿಷ್ಠ್ಯ.

‘ಬ್ಯಾಂಡ್‌, ಕೊಳಲಿನ ಸ್ವರಗಳೊಂದಿಗೆಮಾರಿ ಕುಣಿತ, ಡೊಳ್ಳು ಕುಣಿತ, ಇಟಾಲಿಯನ್‌ ನೃತ್ಯ ಸೇರಿದಂತೆ 10ಕ್ಕೂ ಹೆಚ್ಚು ನೃತ್ಯಗಳನ್ನು ಪ್ರದರ್ಶಿಸುತ್ತಾರೆ.ಅನೇಕ ಜಿಲ್ಲೆಗಳಲ್ಲಿ ಪ್ರದರ್ಶನ ನೀಡಿ ಗಮನಸೆಳೆದಿದ್ದಾರೆ’ ಎಂದು ಶಾಲೆಯ ಕ್ರೀಡಾ ಶಿಕ್ಷಕ ಸುನಿಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಶಾಲೆಯಲ್ಲಿ 1ರಿಂದ 10 ನೇ ತರಗತಿಯವರೆಗೆ 770 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಗ್ರಾಮೀಣ ಪ್ರದೇಶದ ಬಡ ಮಕ್ಕಳೇ ಇಲ್ಲಿ ಹೆಚ್ಚು ವ್ಯಾಸಂಗ ಮಾಡುತ್ತಿದ್ದಾರೆ. 22 ಮಂದಿ ನುರಿತ ಶಿಕ್ಷಕರು ಇಲ್ಲಿದ್ದಾರೆ. ಕಂಪ್ಯೂಟರ್ ಲ್ಯಾಬ್, ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ, ಕ್ರೀಡಾ ಕೊಠಡಿ, ಆಟದ ಮೈದಾನ, ಶುದ್ಧ ಕುಡಿಯುವ ನೀರಿನ ಘಟಕ ಸೇರಿದಂತೆ ಅಗತ್ಯ ಸೌಕರ್ಯಗಳು ಇಲ್ಲಿವೆ.

ಕೈತೋಟ: ಉತ್ತಮವಾದ ಕೈತೋಟವನ್ನು ಶಾಲೆಯ ಮಕ್ಕಳು ಹಾಗೂ ಶಿಕ್ಷಕರು ಮಾಡಿದ್ದಾರೆ. ಗುಲಾಬಿ ಹೂ, ಚೆಂಡು ಹೂ, ದಾಸವಾಳ ಹೂ, ಸೀಬೆ ಗಿಡ, ಮಾವಿನ ಗಿಡ, ವಂಗೆ ಗಿಡ, ಗಸಗಸೆ ಗಿಡ, ಅಲಂಕಾರಿಕ ಗಿಡಗಳನ್ನು ಹಾಕಿದ್ದಾರೆ. ಜೊತೆಗೆ ಗಿಡಮೂಲಿಕೆಗಳು, ಟೊಮೆಟೊ, ಬದನೆಕಾಯಿ, ಕುಂಬಳಕಾಯಿ ಸೇರಿದಂತೆ ಹಲವು ತರಕಾರಿ ಗಿಡಗಳನ್ನೂ ಬೆಳೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.