ADVERTISEMENT

ಗುಂಡ್ಲುಪೇಟೆ: ಟಿಪ್ಪರ್‌ಗಳ ಅಬ್ಬರ, ಸವಾರರಲ್ಲಿ ಆತಂಕ

ಅತಿ ವೇಗದ ಚಾಲನೆ, ಮೌನ ವಹಿಸಿರುವ ಪೊಲೀಸರು, ಆರ್‌ಟಿಒ ಅಧಿಕಾರಿಗಳು–ಆರೋಪ

ಮಲ್ಲೇಶ ಎಂ.
Published 3 ಡಿಸೆಂಬರ್ 2021, 15:53 IST
Last Updated 3 ಡಿಸೆಂಬರ್ 2021, 15:53 IST
ಗುಂಡ್ಲುಪೇಟೆಯಲ್ಲಿ ಶುಕ್ರವಾರ ವೇಗವಾಗಿ ಸಾಗುತ್ತಿದ್ದ ಟಿಪ್ಪರ್‌ ತಗುಲಿ ಗಾಯಗೊಂಡ ಬೈಕ್‌ ಸವಾರ
ಗುಂಡ್ಲುಪೇಟೆಯಲ್ಲಿ ಶುಕ್ರವಾರ ವೇಗವಾಗಿ ಸಾಗುತ್ತಿದ್ದ ಟಿಪ್ಪರ್‌ ತಗುಲಿ ಗಾಯಗೊಂಡ ಬೈಕ್‌ ಸವಾರ   

ಗುಂಡ್ಲುಪೇಟೆ: ತಾಲ್ಲೂಕಿನ ಬೇಗೂರು ಹೋಬಳಿ ಸೇರಿದಂತೆ ಪಟ್ಟಣದಲ್ಲಿ ಟಿಪ್ಪರ್ ಲಾರಿಗಳ ಅಬ್ಬರ ಹೆಚ್ಚಾಗಿದ್ದು ರಸ್ತೆಯಲ್ಲಿ ಸಾರ್ವಜನಿಕರು ವಾಹನ ಚಾಲನೆ ಮಾಡಲು ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಬೇಗೂರು ಹೋಬಳಿಯ ಹಿರಿಕಾಟಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗಣಿಗಾರಿಕೆ ನಡೆಯುತ್ತಿದ್ದು ಹಲವು ಕ್ರಷರ್‌ಗಳಿವೆ.‌ಗಣಿಗಾರಿಕೆ ನಡೆಯುವ ಸ್ಥಳಗಳಿಂದ ಕ್ರಷರ್‌ಗಳಿಗೆ ಕಲ್ಲುಗಳನ್ನು ಸಾಗಣಿಕೆ ಮಾಡುವ ಟಿಪ್ಪರ್ ಲಾರಿಗಳು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅತಿವೇಗವಾಗಿ ಚಾಲನೆ ಮಾಡುವುದರಿಂದ ಪ್ರತಿ ದಿನ ಒಂದಿಲ್ಲೊಂದು ರೀತಿಯಲ್ಲಿ ಅಪಘಾತ ಆಗುತ್ತಲೇ ಇದೆ.

ಅಧಿಕಾರಿಗಳಿಗೆ ಮತ್ತು ಪೊಲೀಸರಿಗೆ ಇದು ಗೊತ್ತಿದ್ದರೂ ಮೌನ ವಹಿಸಿದ್ದಾರೆ ಎಂಬುದು ಸಾರ್ವಜನಿಕರ ಆರೋಪ.

ADVERTISEMENT

ಟಿಪ್ಪರ್‌ನವರು ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಭಾರ ಹಾಕಿಕೊಂಡು ಹೋಗುವುದು, ಕಲ್ಲು, ಜೆಲ್ಲಿ ಮತ್ತು ಎಂ.ಸ್ಯಾಂಡ್ ಗಳನ್ನು ತುಂಬಿಕೊಂಡು ಹೋಗುವಾಗ ನಿಯಮಗಳನ್ನು ಪಾಲನೆ ಮಾಡುವುದಿಲ್ಲ, ವಾಹನದ ಮೇಲೆ ಟಾರ್ಪಲೀನ್‌ ಅಥವಾ ಯಾವುದೇ ರೀತಿಯ ಪ್ಲಾಸ್ಟಿಕ್ ಹೊದಿಸದೆ ಇರುವುದರಿಂದ ಟಿಪ್ಪರ್ ಲಾರಿಗಳ ಹಿಂಬದಿಯಲ್ಲಿ ಬರುವ ವಾಹನ ಸವಾರರಿಗೂ ತೊಂದರೆಯಾಗುತ್ತಿದೆ.

ಗುರುವಾರ ಬೆಳಿಗ್ಗೆ ಎರಡು ಟಿಪ್ಪರ್ ಲಾರಿಗಳು ಬೇಗೂರಿನ ಕಡೆಯಿಂದ ಗುಂಡ್ಲುಪೇಟೆ ಪಟ್ಟಣದ ಹೊರ ವಲಯದಲ್ಲಿ ಇರುವ ಗಣಿಗಾರಿಕೆ ನಡೆಯುವ ಗುಡ್ಡಕ್ಕೆ ಬರುವ ರಭಸದಲ್ಲಿ ರಾಜ್ಯ ಸಾರಿಗೆ ಬಸ್ ಗುದ್ದಿದ ಪರಿಣಾಮ ಏಳು ಜನರಿಗೆ ಗಾಯವಾಗಿತ್ತು. ಕಳೆದ ತಿಂಗಳು ಪಟ್ಟಣದ ಆರ್‌ಟಿಒ ವೃತ್ತದ ಬಳಿ ಲಾರಿಯನ್ನು ತಿರುವಿನಲ್ಲಿ ತಿರುಗಿಸುವಾಗ ಚರಂಡಿಗೆ ಬಿಟ್ಟಿದ್ದರು. ಬೇಗೂರಿನಲ್ಲಿ ಲಾರಿಯಿಂದ ಕಾರಿನ ಗಾಜಿನ ಮೇಲೆ ಕಲ್ಲು ಬಿದ್ದಿತ್ತು. ಶುಕ್ರವಾರ ಬೆಳಿಗ್ಗೆ ಲಾರಿ ರಭಸವಾಗಿ ಹೋಗುವ ಭರದಲ್ಲಿ ಬೈಕ್ ಸವಾರನಿಗೆ ಲಾರಿ ಹಿಂಬದಿ ತಗುಲಿದ್ದರಿಂದ ಸವಾರ ಗಾಯಗೊಂಡಿದ್ದಾರೆ. ಇಂತಹ ಅನಾಹುತಗಳು ನಿರಂತರವಾಗಿ ನಡೆಯುತ್ತಲೇ ಇದೆ. ಆದರೂ ಆರ್‌ಟಿಒ ಅಧಿಕಾರಿಗಳು, ಪೊಲೀಸರು ಈ ಬಗ್ಗೆ ಗಮನ ನೀಡುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

‘ಬೇಗೂರಿನ ಭಾಗದಲ್ಲಿ ಹೆಚ್ಚು ಗಣಿಗಾರಿಕೆ ಮತ್ತು ಕ್ರಷರ್‌ಗಳು ಇರುವುದರಿಂದ ಪ್ರತಿನಿತ್ಯ ನೂರಾರು ಲಾರಿಗಳು ಕಲ್ಲು, ಜಲ್ಲಿ, ಎಂ.ಸ್ಯಾಂಡ್ ತುಂಬಿಕೊಂಡು ವೇಗವಾಗಿ ಚಲಿಸುವುದರಿಂದ ರಸ್ತೆಯ ಬದಿಯಲ್ಲಿ ಶಾಲೆ ಕಾಲೇಜು ವಿದ್ಯಾರ್ಥಿಗಳಿಗೆ ಸಂಚಾರ ಮಾಡಲು ತೊಂದರೆಯಾಗುತ್ತಿದೆ. ಗ್ರಾಮೀಣ ಭಾಗದ ರಸ್ತೆಯಲ್ಲಿ ಅಧಿಕ ಭಾರ ತುಂಬಿಕೊಂಡು ಸಾಗಿಸುವುದರಿಂದ ರಸ್ತೆಗಳೆಲ್ಲ ಕಿತ್ತು ಬರುತ್ತಿದೆ’ ಎಂದು ಕೂತನೂರು ಗ್ರಾಮದ ಗೋಪಾಲ್ ಅವರು ದೂರಿದರು.

ವೇಗಕ್ಕೆ ಕಡಿವಾಣ ಹಾಕಲು ಆಗ್ರಹ

‘ಎಂ.ಸ್ಯಾಂಡ್ ಮತ್ತು ಮರಳುಗಳನ್ನು ತುಂಬಿಕೊಂಡು ಬರುವ ಲಾರಿ, ಟಿಪ್ಪರ್‌ಗಳು, ಮೇಲ್ಭಾಗಕ್ಕೆ ಹೊದಿಕೆ ಹಾಕುವುದಿಲ್ಲ. ಲಾರಿಗಳು ವೇಗವಾಗಿ ಚಾಲನೆ ಮಾಡುವುದರಿಂದ ಮರಳು ಗಾಳಿಗೆ ತೂರುತ್ತದೆ. ಇದರಿಂದಾಗಿ ಹಿಂಬದಿಯಲ್ಲಿ ಚಾಲನೆ ಮಾಡುವ ದ್ವಿಚಕ್ರ ವಾಹನ ಸವಾರರಿಗೆ ಹೆಚ್ಚು ತೊಂದರೆಯಾಗುತ್ತದೆ. ಬೆಳಿಗ್ಗೆ ಸಂಜೆ ಸಮಯದಲ್ಲಿ ಮಕ್ಕಳನ್ನು ಶಾಲೆ ಬಿಡಲು ಮತ್ತು ಕರೆದುಕೊಂಡು ಬರಲು ಭಯವಾಗುತ್ತದೆ. ಹೆಚ್ಚು ವೇಗವಾಗಿ ವಾಹನ ಚಾಲನೆ ಮಾಡುತ್ತಾರೆ. ಈ ಬಗ್ಗೆ ಅಧಿಕಾರಿಗಳು ಎಚ್ಚೆತ್ತುಕೊಂಡು ಇವರಿಗೆ ಕಡಿವಾಣ ಹಾಕಬೇಕು’ ಎಂದು ಗುಂಡ್ಲುಪೇಟೆ ಪಟ್ಟಣದ ಕುಮಾರ್ ಅವರು ಆಗ್ರಹಿಸಿದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಬ್‌ ಇನ್‌ಸ್ಪೆಕ್ಟರ್‌ ರಾಜೇಂದ್ರ ಅವರು, ‘ಟಿಪ್ಪರ್, ಲಾರಿಗಳ ವೇಗದ ಚಾಲನೆ ಬಗ್ಗೆ ಅನೇಕ ದೂರುಗಳು ಬಂದಿದೆ. ಗುರುವಾರ ನಡೆದ ಘಟನೆಯನ್ನು ಸಿಸಿಟಿವಿ ಕ್ಯಾಮರಾದಲ್ಲಿ ನೋಡಿದ್ದೇನೆ. ವೇಗದ ಚಾಲನೆ ಬಗ್ಗೆ ಕ್ರಮ ಕೈಗೊಳ್ಳಲಾಗುಗುವುದು. ಆರ್‌ಟಿಒ ಅಧಿಕಾರಿಗಳು ಕೂಡ ಈ ನಿಟ್ಟಿನಲ್ಲಿ ಪೊಲೀಸರಿಗೆ ಸಹಕರಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.