ಕಡತ
(ಸಾಂದರ್ಭಿಕ ಚಿತ್ರ)
ಚಾಮರಾಜನಗರ: ಜಿಲ್ಲೆಯ ಯಳಂದೂರು ವನ್ಯಜೀವಿ ಉಪವಿಭಾಗದ 122 ಗುತ್ತಿಗೆ ಸಿಬ್ಬಂದಿಗೆ ಸಕಾಲದಲ್ಲಿ ವೇತನ, ಭವಿಷ್ಯನಿಧಿ, ಇಎಸ್‌ಐ ಪಾವತಿಸದ ಆರೋಪದಲ್ಲಿ, ಮೈಸೂರಿನ ಆರ್.ಸಿ ಬಿಸಿನೆಸ್ ಸಲ್ಯೂಷನ್ ಕಂಪೆನಿಯನ್ನು ಎರಡು ವರ್ಷಗಳ ಅವಧಿಗೆ ಕಪ್ಪುಪಟ್ಟಿಗೆ ಸೇರಿಸಿ ಬಿರ್‌ಟಿ ಉಪ ಸಂರಕ್ಷಣಾಧಿಕಾರಿ ಶ್ರೀಪತಿ ಆದೇಶಿಸಿದ್ದಾರೆ.
ಸೆಪ್ಟೆಂಬರ್ 2024ರಿಂದ ಮಾರ್ಚ್ 2025ರವರೆಗೂ ಇಪಿಎಫ್, ಇಎಸ್‌ಐ ಪಾವತಿಸಿಲ್ಲವೆಂದು ಆರೋಪಿಸಿ ನೌಕರರು ಸಲ್ಲಿಸಿದ್ದ ದೂರನ್ನು ಪರಿಶೀಲಿಸಿದ ಅಧಿಕಾರಿಗಳು ಕಂಪನಿಗೆ ನೋಟಿಸ್ ಜಾರಿಗೊಳಿಸಿ, ಪಾವತಿ ರಶೀದಿ ಸಲ್ಲಿಸುವಂತೆ ಸೂಚಿಸಿದ್ದರು. ಕಂಪನಿಯು ದಾಖಲೆಗಳನ್ನು ಸಲ್ಲಿಸಿತ್ತು. ಬಳಿಕ ಆ ಬಗ್ಗೆ ದಾಖಲೆ ನೀಡುವಂತೆ ಅಧಿಕಾರಿಗಳು ಭವಿಷ್ಯನಿಧಿ ಕಚೇರಿಗೆ ಪತ್ರ ಬರೆದಿದ್ದರು. ಪರಿಶೀಲನೆ ವೇಳೆ, ಪಿಎಫ್ ಪಾವತಿಸಲು ಚಲನ್ ಮಾತ್ರ ತುಂಬಿದ್ದ ಕಂಪನಿಯು ಹಣ ಪಾವತಿಸದಿರುವುದು ಕಂಡುಬಂತು. ಯಳಂದೂರು ಎಸಿಎಫ್ ನೇತೃತ್ವದಲ್ಲಿ ಸಮಿತಿ ರಚಿಸಿ, ತನಿಖೆ ನಡೆಸಿದಾಗ ಲೋಪ ಖಚಿತಪಟ್ಟಿತ್ತು.
‘ಟೆಂಡರ್ ಸಮಯದಲ್ಲಿ ಕಂಪನಿಯಿಂದ ಪಡೆದಿದ್ದ ಭದ್ರತಾ ಠೇವಣಿಯನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ’ ಎಂದುಡಿಸಿಎಫ್ ಶ್ರೀಪತಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸಿಬ್ಬಂದಿಗೆ ಇಪಿಎಫ್, ಇಎಸ್‌ಐ ವಂತಿಗೆ ಪಾವತಿಸದಿರುವುದು ದುರದೃಷ್ಟಕರ. ಸರ್ಕಾರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ ಕುಲಕರ್ಣಿ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.