ADVERTISEMENT

ಎಸ್‌ಸಿ, ಎಸ್‌ಟಿಗೆ ಕಾಂಗ್ರೆಸ್‌ ಅನ್ಯಾಯ: ಛಲವಾದಿ ನಾರಾಯಣಸ್ವಾಮಿ ಟೀಕೆ

ವಿಧಾನ ಪರಿಷತ್ ವಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 2:34 IST
Last Updated 8 ಆಗಸ್ಟ್ 2025, 2:34 IST
<div class="paragraphs"><p>ಎಸ್‌ಸಿ ಎಸ್‌ಟಿ ಅನುದಾನ ದುರ್ಬಳಕೆ ಖಂಡಿಸಿ ಬಿಜೆಪಿ ಎಸ್‌ಸಿ ಹಾಗೂ ಎಸ್‌ಟಿ ಮೋರ್ಚಾ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಯಿತು</p></div>

ಎಸ್‌ಸಿ ಎಸ್‌ಟಿ ಅನುದಾನ ದುರ್ಬಳಕೆ ಖಂಡಿಸಿ ಬಿಜೆಪಿ ಎಸ್‌ಸಿ ಹಾಗೂ ಎಸ್‌ಟಿ ಮೋರ್ಚಾ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಯಿತು

   

ಚಾಮರಾಜನಗರ: ಪರಿಶಿಷ್ಟ ಜಾತಿ ಹಾಗೂ ವರ್ಗಗಳ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನವನ್ನು ಅನ್ಯ ಉದ್ದೇಶಗಳಿಗೆ ಬಳಕೆ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ದಲಿತರಿಗೆ ವಂಚನೆ ಎಸಗಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.

ನಗರದ ಚಾಮರಾಜೇಶ್ವರ ಉದ್ಯಾನದ ಎದುರು ಬಿಜೆಪಿ ಎಸ್‌ಸಿ ಹಾಗೂ ಎಸ್‌ಟಿ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ, ವರ್ಗಗಳ ಯುವ ಜನತೆಗೆ ಉದ್ಯೋಗ ಸೃಷ್ಟಿಸಲು, ಉದ್ಯಮ ಸ್ಥಾಪಿಸಲು, ಭೂಮಿ ಖರೀದಿಗೆ, ಶಿಕ್ಷಣ ಸೇರಿ ಸರ್ವಾಂಗೀಣ ಅಭಿವೃದ್ಧಿಗೆ ಬಳಕೆ ಮಾಡಬೇಕಿತ್ತು. ಆದರೆ, ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ದುರ್ಬಳಕೆ ಮಾಡಿ ಕೊಳ್ಳುತ್ತಿದೆ ಎಂದು ಆರೋಪಿಸಿದರು.

ADVERTISEMENT

ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳಿಗೆ ಬಿಡಿಗಾಸು ಅನುದಾನ ನೀಡಿಲ್ಲ, ಅಭಿವೃದ್ಧಿ ಕಾರ್ಯಗಳು ನಡೆ ಯುತ್ತಿಲ್ಲ. ಇಷ್ಟಾದರೂ ದಲಿತ ಸಂಘಟನೆ ಗಳು ಕಾಂಗ್ರೆಸ್ ಸರ್ಕಾರದ ವಿರುದ್ಧ ಬೀದಿಗಿಳಿಯದಿರುವುದು ವಿಪರ್ಯಾಸ. ಕಾಂಗ್ರೆಸ್‌ನ ದಲಿತ ವಿರೋಧಿ ನೀತಿಗಳ ವಿರುದ್ಧ ಬಿಜೆಪಿ ರಾಜ್ಯದಾದ್ಯಂತ ಪ್ರತಿಭಟಿಸಲಿದೆ ಎಂದರು.

ಎಸ್.ಟಿ ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ₹187 ಕೋಟಿ ಲೂಟಿ ಮಾಡಿ ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಖರ್ಚು ಮಾಡಲಾಗಿದೆ. ನಿಗಮದ ₹ 89 ಕೋಟಿ ದುರ್ಬಳಕೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಸದನದಲ್ಲಿ ಒಪ್ಪಿಕೊಂಡಿದ್ದಾರೆ. ತುಮಕೂರಿನಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ₹ 24 ಕೋಟಿಯನ್ನು ಅಧಿಕಾರಿಗಳು ನುಂಗಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ನಿರಂಜನ ಕುಮಾರ್ ಮಾತನಾಡಿ, ರಾಜ್ಯ ಸರ್ಕಾರದ ದಲಿತ ವಿರೋಧಿ ನೀತಿಗಳಿಂದ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಅನ್ಯಾಯ ವಾಗುತ್ತಿದೆ. ಕಾಂಗ್ರೆಸ್‌ ದಲಿತರನ್ನು ಉದ್ಧಾರ ಮಾಡುತ್ತದೆ ಎಂದು ಮತ ಹಾಕಿದವರಿಗೆ ಭ್ರಮನಿರಸನವಾಗಿದೆ ಎಂದು ಟೀಕಿಸಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್, ಮಾಜಿ ಶಾಸಕ  ಎಸ್.ಬಾಲರಾಜ್, ಕೇಂದ್ರ ಬರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ರಾಮಚಂದ್ರು, ನಗರಸಭಾ ಅಧ್ಯಕ್ಷ ಸುರೇಶ್,  ಎಸ್‌ಟಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಜಯ ಸುಂದರ್, ಮಾಜಿ ಜಿಲ್ಲಾಧ್ಯಕ್ಷ ಆರ್. ಸುಂದರ್, ಒಬಿಸಿ ಮೋರ್ಚಾ ರಾಷ್ಟ್ರೀಯ ಸದಸ್ಯ ನೂರೊಂದು ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊನ್ನೂರು ಮಹಾದೇವಸ್ವಾಮಿ, ಉಪಾಧ್ಯಕ್ಷರಾದ ಅರಕಲವಾಡಿ ನಾಗೇಂದ್ರ, ಮುಖಂಡರಾದ ಶಿವು ವಿರಾಟ್, ಕಪಿನಿ ನಾಯಕ, ಚಂದ್ರಶೇಖರ್, ಬುಲೆಟ್ ಚಂದ್ರು, ಮೂಡಹಳ್ಳಿ ಮೂರ್ತಿ, ಕಮಲಮ್ಮ, ಶಿವರಾಜು ಇದ್ದರು.

ಜಿಲ್ಲಾಡಳಿತ ಭವನಕ್ಕೆ ನುಗ್ಗಲು ಯತ್ನ

ಚಾಮರಾಜೇಶ್ವರ ಉದ್ಯಾನದ ಬಳಿ ಜಮಾಯಿಸಿದ ಪ್ರತಿಭಟನಕಾರರು ಅಲ್ಲಿಂದ ಮೆರವಣಿಗೆಯ ಮೂಲಕ ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆ ಮಾರ್ಗವಾಗಿ ಬಂದು, ಜಿಲ್ಲಾಡಳಿತ ಭವನಕ್ಕೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಯತ್ನವನ್ನು ವಿಫಲಗೊಳಿಸಿದರು. ಈ ಸಂದರ್ಭ ತಳ್ಳಾಟ ನೂಕಾಟ ನಡೆದು ಗೊಂದಲ ಸೃಷ್ಟಿಯಾಯಿತು. ಜಿಲ್ಲಾಧಿಕಾರಿ ಕಚೇರಿಯ ಮುಖ್ಯದ್ವಾರ ಬಂದ್‌ ಮಾಡಲಾಯಿತು. ಬಳಿಕ ಜಿಲ್ಲಾಧಿಕಾರಿ ಶಿಲ್ಪಾನಾಗ್ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಅವರಿಗೆ ಮನವಿ ಸಲ್ಲಿಸಲಾಯಿತು.

ಪರಿಶಿಷ್ಟ ಜಾತಿ, ವರ್ಗಗಳಿಗೆ ಕಾಂಗ್ರೆಸ್ ಸರ್ಕಾರ ಅನ್ಯಾಯ ಎಸಗಿದರೂ ಕೆಲವು ದಲಿತ ಸಂಘಟನೆಗಳು ಖಂಡಿಸುವ ಬದಲು  ಸಮರ್ಥನೆಗಿಳಿದಿವೆ, ಕೆಲವು ಸಂಘಟನೆಗಳು ಧನಿ ಎತ್ತುತ್ತಿಲ್ಲ
ಛಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.