ADVERTISEMENT

ಆಮ್ಲಜನಕ ದುರಂತ: ಮೃತರ ಕುಟುಂಬಗಳಿಗೆ ₹20 ಲಕ್ಷ ಪರಿಹಾರಕ್ಕೆ ಆಗ್ರಹ

ಕಾರಣಕರ್ತರ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್‌ ಒತ್ತಾಯ

​ಪ್ರಜಾವಾಣಿ ವಾರ್ತೆ
Published 2 ಜೂನ್ 2021, 11:09 IST
Last Updated 2 ಜೂನ್ 2021, 11:09 IST
ಕೆರೆಹಳ್ಳಿ ನವೀನ್‌
ಕೆರೆಹಳ್ಳಿ ನವೀನ್‌   

ಚಾಮರಾಜನಗರ: ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಮೇ 2ರ ರಾತ್ರಿ ಸಂಭವಿಸಿದ ಆಮ್ಲಜನಕ ದುರಂತದಲ್ಲಿ ಮೃತಪಟ್ಟ 36 ಜನರ ಕುಟುಂಬಗಳಿಗೆ ರಾಜ್ಯ ಸರ್ಕಾರ ತಲಾ ₹20 ಲಕ್ಷ ಪರಿಹಾರ ಘೋಷಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್‌ ಸಮಿತಿ ವಕ್ತಾರ ಕೆರೆಹಳ್ಳಿ ನವೀನ್‌ ಅವರು ಬುಧವಾರ ಒತ್ತಾಯಿಸಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದುರಂತಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ನ್ಯಾಯಾಂಗ ತನಿಖೆ ನಡೆಸುತ್ತಿದ್ದು, ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ಸೂಚಿಸಿತ್ತು. ಸರ್ಕಾರ ಕೇವಲ 24 ಜನರ ಕುಟುಂಬಗಳಿಗೆ ತಲಾ ₹ 2 ಲಕ್ಷ ಪರಿಹಾರ ಘೋಷಣೆ ಮಾಡಿದೆ. ಘಟನೆಯಲ್ಲಿ 24 ಮಂದಿ ಅಲ್ಲ 36 ಜನರು ಮೃತಪಟ್ಟಿರುವ ಬಗ್ಗೆ ತನಿಖಾ ಸಮಿತಿ ಶಂಕೆ ವ್ಯಕ್ತಪಡಿಸಿದ್ದು, ಎಲ್ಲರ ಕುಟುಂಬಗಳಿಗೂ ಕನಿಷ್ಠ ₹20 ಲಕ್ಷ ಪರಿಹಾರ ಘೋಷಿಸಬೇಕು. ಅಲ್ಲದೇ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು’ ಎಂದು ಆಗ್ರಹಿಸಿದರು.

‘ಆಮ್ಲಜನಕ ಪೂರೈಕೆ‌ಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದೆ ಎಂದು ತನಿಖೆ ನಡೆಸಿರುವ ಸಮಿತಿ ಸ್ಪಷ್ಟವಾಗಿ ವರದಿ ನೀಡಿದ್ದರೂ, ಸರ್ಕಾರ ಇದುವರೆಗೆ ಘಟನೆಗೆ ಕಾರಣರದಾದವರ ವಿರುದ್ಧ ಕ್ರಮ ಕೈಗೊಂಡಿಲ್ಲ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಪರೀಕ್ಷೆ ರದ್ದುಪಡಿಸಿ: ‘ಕೋವಿಡ್‌ 2ನೇ ಅಲೆ ತೀವ್ರವಾಗಿ ವ್ಯಾಪಿಸುತ್ತಿದ್ದರೂ, ರಾಜ್ಯ ಸರ್ಕಾರ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯ ಬಗ್ಗೆ ಇನ್ನೂ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಇಂತಹ ಪರಿಸ್ಥಿತಿಯಲ್ಲೂ ಪರೀಕ್ಷೆ ನಡೆಸಲು ಮುಂದಾಗುತ್ತಿರುವುದು ದುರಂತ. ಕೇಂದ್ರ ಸರ್ಕಾರ ಸಿಬಿಎಸ್‌ಇ ಪರೀಕ್ಷೆ ರದ್ದುಗೊಳಿಸಿದಂತೆ ರಾಜ್ಯ ಸರ್ಕಾರವೂ ಪರೀಕ್ಷೆಗಳನ್ನು ರದ್ದುಪಡಿಸಬೇಕು. ಅಥವಾ ವಿದ್ಯಾರ್ಥಿಗಳಿಗೆ ಲಸಿಕೆ ನೀಡದೆ ಪರೀಕ್ಷೆ ನಡೆಸಲು ಮುಂದಾಗಬಾರದು’ ಎಂದು ನವೀನ್‌ ಹೇಳಿದರು.

‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದಿನ ಬಳಕೆಯ ವಸ್ತುಗಳ ಬೆಲೆಗಳನ್ನು ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ರಕ್ತ ಹೀರುವ ಕೆಲಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಇದೇ ರೀತಿಯ ಪರಿಸ್ಥಿತಿ ಮುಂದುವರಿದರೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ, ಮಾಧ್ಯಮ ಕಾರ್ಯದರ್ಶಿ ಅರುಣ್ ಕುಮಾರ್, ಮುಖಂಡರಾದ ನಸ್ರುಲ್ಲಾ, ಸೈಯದ್ ಮುಜಾಯಿದ್ ಇದ್ದರು.

‘ಹೆಚ್ಚು ಹಣ ಬಿಡುಗಡೆ ಮಾಡಿ’
‘ಗ್ರಾಮೀಣ ಭಾಗಗಳಲ್ಲಿ ಕೋವಿಡ್‌ ನಿಯಂತ್ರಣಕ್ಕಾಗಿ ಜಿಲ್ಲೆಯ 130 ಗ್ರಾಮ ಪಂಚಾಯಿತಿಗಳಲ್ಲೂ ಟಾಸ್ಕ್‌ ಫೋರ್ಸ್‌ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿ ಹೆಸರಿಗಷ್ಟೇ ಇದೆ. ಯಾವುದೇ ನಿರ್ಧಾರ ಕೈಗೊಳ್ಳುವ ಅಧಿಕಾರ ಇಲ್ಲ. ಸಮಿತಿಗೆ ಅಧಿಕಾರ ನೀಡಬೇಕು. ಜಿಲ್ಲೆಯ ಇನ್ನೂ 70ರಿಂದ 80 ಗ್ರಾಮ ಪಂಚಾಯಿತಿಗಳಲ್ಲಿ ಈ ಸಮಿತಿ ಇದುವರೆಗೆ ಒಮ್ಮೆಯೂ ಸಭೆ ಸೇರಿಲ್ಲ’ ಎಂದು ಕೆರೆಹಳ್ಳಿ ನವೀನ್‌ ದೂರಿದರು.

‘ಕೋವಿಡ್‌ ನಿಯಂತ್ರಣಕ್ಕಾಗಿ ಪ್ರತಿ ಗ್ರಾಮ ಪಂಚಾಯಿತಿಗೆ ಸರ್ಕಾರ ₹50 ಸಾವಿರ ಘೋಣೆ ಮಾಡಿದೆ. ಆದರೆ, ₹25 ಸಾವಿರ ಮಾತ್ರ ನೀಡಿದೆ. ಈ ಹಣ ಯಾವುದೇ ಕೆಲಸಕ್ಕೆ ಸಾಕಾಗುತ್ತಿಲ್ಲ. ಸರ್ಕಾರ ಹೆಚ್ಚು ಹಣ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.

ಲಸಿಕೆಯಲ್ಲಿ ರಾಜಕೀಯ: ಕೋವಿಡ್‌ ಬಂದು ವರ್ಷ ಕಳೆದರೂ ಕೋವಿಡ್‌ ವಾರಿಯರ್ಸ್‌ಗಳಿಗೆ ಪೂರ್ಣ ಪ್ರಮಾಣದಲ್ಲಿ ಲಸಿಕೆ ನೀಡುವ ಕಾರ್ಯ ಆಗಿಲ್ಲ. ಬಿಜೆಪಿ ಸರ್ಕಾರವು ಲಸಿಕೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ಆದ್ದರಿಂದ ಸರ್ಕಾರವು ಉಚಿತವಾಗಿ ಎಲ್ಲರಿಗೂ ಲಸಿಕೆ ನೀಡಲು ಕ್ರಮವಹಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.