ADVERTISEMENT

22ರಂದು ಕಾಂಗ್ರೆಸ್‌ನಿಂದ ಸ್ವಾತಂತ್ರ್ಯ ನಡಿಗೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2022, 15:47 IST
Last Updated 18 ಆಗಸ್ಟ್ 2022, 15:47 IST
ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಶಾಸಕ ಪುಟ್ಟರಂಗಶೆಟ್ಟಿ ಮಾತನಾಡಿದರು. ಅಧ್ಯಕ್ಷ ಪಿ.ಮರಿಸ್ವಾಮಿ ಇತರರು ಇದ್ದರು
ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಶಾಸಕ ಪುಟ್ಟರಂಗಶೆಟ್ಟಿ ಮಾತನಾಡಿದರು. ಅಧ್ಯಕ್ಷ ಪಿ.ಮರಿಸ್ವಾಮಿ ಇತರರು ಇದ್ದರು   

ಚಾಮರಾಜನಗರ: ಜಿಲ್ಲಾ ಕಾಂಗ್ರೆಸ್‌ ಸಮಿತಿಯು ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಇದೇ 22ರಂದು ಜಿಲ್ಲಾಮಟ್ಟದಲ್ಲಿ ಬೃಹತ್ ಕಾಲ್ನಡಿಗೆ ಹಮ್ಮಿಕೊಂಡಿದೆ.

ಈ ಮೊದಲು ಆಗಸ್ಟ್‌ 10ರಂದು ಈ ಕಾರ್ಯಕ್ರಮ ನಿಗದಿಯಾಗಿತ್ತು. ಮಳೆಯ ಕಾರಣದಿಂದ ಕೊನೆ ಗಳಿಗೆಯಲ್ಲಿ ಕಾರ್ಯಕ್ರಮ ಮುಂದೂಡಲಾಗಿತ್ತು.

ಪಾದಯಾತ್ರೆ ಸಂಬಂಧ ಗುರುವಾರ ಕಾಂಗ್ರೆಸ್‌ ಕಚೇರಿಯಲ್ಲಿ ಮುಖಂಡರ ಪೂರ್ವ ಭಾವಿ ಸಭೆ ನಡೆಯಿತು.

ADVERTISEMENT

ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಆದೇಶದ ಮೇರೆಗೆ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಅಮೃತಮಹೋತ್ಸವ ಆಚರಣೆ ಕಾಲ್ನಡಿಗೆ ಹಮ್ಮಿಕೊಳ್ಳಲಾಗಿದೆ. ಚಾಮರಾಜನಗರ– ಗುಂಡ್ಲುಪೇಟೆ ಮುಖ್ಯರಸ್ತೆಯಲ್ಲಿರುವ ಬಣ್ಣಾರಿಅಮ್ಮನ್ ದೇವಾಲಯದ ಆವರಣದಲ್ಲಿ ಪಾದಯಾತ್ರೆಗೆ ಚಾಲನೆ ನೀಡಲಾಗುವುದು’ ಎಂದರು.

‘ಶಿವಪುರ, ಉತ್ತವಳ್ಳಿ, ಮೂಡ್ಲುಪುರ ಮೂಲಕ ಚಾಮರಾಜನಗರ ತಲುಪಿ,ಸಂತೇಮರಹಳ್ಳಿ ವೃತ್ತದಿಂದ ಮಸಗಾಪುರ, ಮಾದಾಪುರ, ಮಂಗಲ ಮೂಲಕ ಸಾಗಿ ಮಹಂತಾಳಪುರದಲ್ಲಿ ಪಾದಯಾತ್ರೆ ಮುಕ್ತಾಯ ಮಾಡಲಾಗುವುದ. ಇದರಲ್ಲಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಕಾರ್ಯಕರ್ತರಿಗೆ ಕುಡಿಯುವ ನೀರು, ತಿಂಡಿ ತಿನಿಸು, ಊಟದ ವ್ಯವಸ್ಥೆ ಮಾಡಲಾಗುವುದು’ ಎಂದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ‘ಪಕ್ಷ ಸಂಘಟನೆ ದೃಷ್ಟಿಯಿಂದ ಈಗಾಗಲೇ ಗುಂಡ್ಲುಪೇಟೆಯಲ್ಲಿ ನಡೆದ ಪಾದಯಾತ್ರೆ ಯಶಸ್ವಿಯಾಗಿದೆ. ಮಳೆಹೆಚ್ಚಾದ ಕಾರಣ ಆ.10 ರಂದು ನಡೆಯಬೇಕಿದ್ದ ಕಾಲ್ನಡಿಗೆಯನ್ನು ರದ್ದುಪಡಿಸಲಾಗಿತ್ತು’ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಹಮದ್ ಅಸ್ಗರ್ ಮುನ್ನಾ, ಎ.ಎಸ್.ಗುರುಸ್ವಾಮಿ, ಎಸ್‌ಟಿ ಮೋರ್ಚಾ ರಾಜ್ಯ ಪ್ರದಾನ ಕಾರ್ಯದರ್ಶಿ ಪು.ಶ್ರೀನಿವಾಸನಾಯಕ, ಮುಖಂಡರಾದ ರಮೇಶ್, ಕೆ.ಪಿ.ಸದಾಶಿವಮೂರ್ತಿ, ಕೆಪಿಸಿಸಿ ಒಬಿಸಿ ವಿಭಾಗದ ರಾಜ್ಯ ಪ್ರದಾನ ಕಾರ್ಯದರ್ಶಿ ಮಹದೇವಶೆಟ್ಟಿ, ಅಲ್ಪಸಂಖ್ಯಾತರ ವಿಭಾಗದ ಪ್ರದಾನಕಾರ್ಯದರ್ಶಿ ಅಬ್ಜಲ್ ಷರೀಪ್, ಕಾನೂನು ಸಲಹೆ ಗಾರ ಪೃಥ್ವಿ, ನಗರಸಭಾ ಸದಸ್ಯೆ ಭಾಗ್ಯಮ್ಮ, ಎಪಿಎಂಸಿ ನಿರ್ದೇಶಕ ಸೋಮೇಶ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.