ADVERTISEMENT

ಧ್ರುವಗೆ ಕಾರ್ಯಾಧ್ಯಕ್ಷ ಹುದ್ದೆ: ಕಾಂಗ್ರೆಸ್‌ ಕಾರ್ಯಕರ್ತರು, ಮುಖಂಡರ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 21 ಜನವರಿ 2021, 14:35 IST
Last Updated 21 ಜನವರಿ 2021, 14:35 IST
ಆರ್.ಧ್ರುವನಾರಾಯಣ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ನೇಮಕ ಮಾಡಿರುವುದಕ್ಕೆ ಜಿಲ್ಲಾ ಕಾಂಗ್ರೆಸ್‌ ಮುಖಂಡರು ಸಿಹಿ ಹಂಚಿ ಸಂಭ್ರಮಿಸಿದರು
ಆರ್.ಧ್ರುವನಾರಾಯಣ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ನೇಮಕ ಮಾಡಿರುವುದಕ್ಕೆ ಜಿಲ್ಲಾ ಕಾಂಗ್ರೆಸ್‌ ಮುಖಂಡರು ಸಿಹಿ ಹಂಚಿ ಸಂಭ್ರಮಿಸಿದರು   

ಚಾಮರಾಜನಗರ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಕಾರ್ಯಾಧ್ಯಕ್ಷರಾಗಿ ಮಾಜಿ ಸಂಸದ ಆರ್. ಧ್ರುವನಾರಾಯಣ ಅವರನ್ನು ನೇಮಕ ಮಾಡಿರುವುದಕ್ಕೆ ಜಿಲ್ಲೆಯ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದ್ದು, ಗುರುವಾರ ಪಕ್ಷದ ಕಚೇರಿಯಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ನಗರದ ಸತ್ಯಮಂಗಲ ರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿ ಮುಂದೆ ಮುಖಂಡರು ಹಾಗು ಕಾರ್ಯಕರ್ತರು ಧ್ರುವನಾರಾಯಣ ಅವರ ಭಾವಚಿತ್ರ ಹಾಗೂ ಕಾಂಗ್ರೆಸ್ ಪಕ್ಷದ ಬಾವುಟ ಹಿಡಿದು ಜೈಕಾರ ಕೂಗಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್ ಅವರು ಮಾತನಾಡಿ, ‘ಸಂಸದರಾಗಿ, ಶಾಸಕರಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಣೆ ಮಾಡಿರುವ ಹಾಗೂ ದೇಶದಲ್ಲಿಯೇ ನಂಬರ್ ಒನ್ ಸಂಸದರು ಎಂಬ ಹೆಗ್ಗಳಿಕೆ ಪ‍ಡೆದಿದ್ದ ಆರ್. ಧ್ರುವನಾರಾಯಣ ಅವರನ್ನು ಗುರುತಿಸಿ ವರಿಷ್ಠರು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ನೇಮಕ ಮಾಡಿದ್ದಾರೆ’ ಎಂದರು.

ADVERTISEMENT

‘ಹಳೆ ಮೈಸೂರು ಭಾಗದಲ್ಲಿ ಪಕ್ಷವನ್ನು ಪ್ರಬಲವಾಗಿ ಸಂಘಟನೆ ಮಾಡುವ ಉದ್ದೇಶದಿಂದ ವರಿಷ್ಠರು ಈ ಜವಾಬ್ದಾರಿ ನೀಡಿದ್ದಾರೆ. ಇದುವರೆಗೆ ಚಾಮರಾಜನಗರ ಜಿಲ್ಲೆಗೆ ಕಾರ್ಯಾಧ್ಯಕ್ಷ ಸ್ಥಾನ ದೊರತಿರಲಿಲ್ಲ’ ಎಂದರು.

‘ಈ ಹಿಂದೆಯೂ ಜಿಲ್ಲೆಯಲ್ಲಿ ಕಾಂಗ್ರೆಸ್ ಸೋತಿದ್ದಾಗ ಧ್ರುವನಾರಾಯಣ ಅವರು ಸಂತೇಮರಹಳ್ಳಿ ಕ್ಷೇತ್ರದಲ್ಲಿ ಒಂದು ಮತದಿಂದ ಗೆದ್ದು ಏಕೈಕ ಶಾಸಕರಾಗಿ, ಜಿಲ್ಲೆಯಲ್ಲಿ ಪಕ್ಷವನ್ನು ಪ್ರಬಲವಾಗಿ ಸಂಘಟನೆ ಮಾಡಿ, ಕಾಂಗ್ರೆಸ್ ಭದ್ರಕೋಟೆಯನ್ನಾಗಿ ಮಾಡಿದ್ದರು. ಇವರು ಕಾರ್ಯಾಧ್ಯಕ್ಷರಾಗಿ ನೇಮಕವಾಗಿರುವುದು ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಪಕ್ಷ ಇನ್ನಷ್ಟು ಪ್ರಬಲವಾಗಲು ಸಹಕಾರಿಯಾಗಿದೆ’ ಎಂದು ರವಿಕುಮಾರ್‌ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವ್, ಬ್ಲಾಕ್ ಅಧ್ಯಕ್ಷರಾದ ಎ.ಎಸ್.ಗುರುಸ್ವಾಮಿ, ಮಹಮದ್ ಅಸ್ಗರ್, ಜಿಲ್ಲಾ ಪಂಚಾಯಿತಿ ಸದಸ್ಯ ರಮೇಶ್, ಎಸ್.ರಾಜು, ಕೆಪಿಸಿಸಿ ಸದಸ್ಯ ಸೈಯದ್ ರಫಿ, ಕಾಗಲವಾಡಿ ಚಂದ್ರು, ನಗರಸಭಾ ಸದಸ್ಯರಾದ ನೀಲಮ್ಮ, ಭಾಗ್ಯಮ್ಮ, ಚಿನ್ನಮ್ಮ, ಕಲಾವತಿ, ಅರಕಲವಾಡಿ ಸೋಮನಾಯಕ, ಕಾಗಲವಾಡಿ ಶಿವಸ್ವಾಮಿ, ಸುಹೇಲ್ ಆಲಿ ಖಾನ್, ಅಯುಬ್ ಖಾನ್, ಅಬ್ಬಾಸ್, ಶ್ರೀಕಾಂತ್, ಪುಟ್ಟಸ್ವಾಮಿ, ದೊಡ್ಡಮೋಳೆ ಪುಟ್ಟಸ್ವಾಮಿ, ನಾಗವಳ್ಳಿ ನಾಗಯ್ಯ, ಸಿ.ಕೆ. ರವಿಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.