ADVERTISEMENT

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಖಂಡನೆ

ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಜಾರಿ– ಕಾಂಗ್ರೆಸ್‌ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 20 ಜೂನ್ 2020, 16:37 IST
Last Updated 20 ಜೂನ್ 2020, 16:37 IST
ಚಾಮರಾಜನಗರದಲ್ಲಿ ಪ್ರತಿಭಟನನಿರತರನ್ನು ಉದ್ದೇಶಿಸಿ ಆರ್‌.ಧ್ರುವನಾರಾಯಣ ಅವರು ಮಾತನಾಡಿದರು
ಚಾಮರಾಜನಗರದಲ್ಲಿ ಪ್ರತಿಭಟನನಿರತರನ್ನು ಉದ್ದೇಶಿಸಿ ಆರ್‌.ಧ್ರುವನಾರಾಯಣ ಅವರು ಮಾತನಾಡಿದರು   

ಚಾಮರಾಜನಗರ:ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್‌ನ ಮುಖಂಡರು ಹಾಗೂ ಕಾರ್ಯಕರ್ತರು ನಗರದ ಜಿಲ್ಲಾಡಳಿತ ಭವನದ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಎಪಿಎಂಸಿ ತಿದ್ದುಪಡಿ ಕಾಯ್ದೆ ಹಾಗೂ ಸುಗ್ರೀವಾಜ್ಞೆ ಮೂಲಕ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಜಾರಿಗೆ ತರುತ್ತಿರುವುದಕ್ಕೂ ಆಕ್ರೋಶ ವ್ಯಕ್ತಪಡಿಸಿದ ಮುಖಂಡರು, ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ ವಿರುದ್ಧ ಹರಿಹಾಯ್ದರು.

ಜಿಲ್ಲಾಡಳಿತ ಭವನದ ಎದುರಿನ ಹುಲ್ಲುಹಾಸಿನಲ್ಲಿ ಸಮಾವೇಶಗೊಂಡ ಪ್ರತಿಭಟನಕಾರರುಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಜಿಲ್ಲಾಧಿಕಾರಿ ಎಂ.ಆರ್.ರವಿ ಅವರ ಮೂಲಕ ರಾಷ್ಟ್ರಪತಿಗೆ ಮನವಿಯನ್ನೂ ಸಲ್ಲಿಸಿದರು.

ADVERTISEMENT

ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರ ಆರ್‌.ಧ್ರುವನಾರಾಯಣ ಅವರು, ‘ಇಡೀ ವಿಶ್ವವೇ ಕೋವಿಡ್ -19 ನಿಂದ ತತ್ತರಿಸಿದೆ. ಭಾರತ ಕೂಡ ಎರಡು ತಿಂಗಳುಗಳ ಕಾಲ ಕಠಿಣ ಲಾಕ್‌ಡೌನ್‌ನಿಂದ ತತ್ತರಿಸಿದ್ದು, ಆರ್ಥಿಕತೆ ತೀವ್ರವಾಗಿ ಕುಸಿದಿದೆ. ಇಂತಹ ಸಂದರ್ಭದಲ್ಲಿ ದೇಶದಲ್ಲಿ ಹಲವು ಕಾರ್ಖಾನೆಗಳು ತೆರೆದಿಲ್ಲ. ವಾಹನಗಳು ಓಡಾಡಿಲ್ಲ. ಹೀಗಾಗಿ ಪೆಟ್ರೋಲ್, ಡೀಸೆಲ್ ಬಳಕೆ ಕಡಿಮೆಯಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲಕ್ಕೆ ಬೇಡಿಕೆ ಇಲ್ಲದೆ ಪ್ರತಿ ಬ್ಯಾರಲ್‌ನ ಬೆಲೆ 16.78 ಡಾಲರ್‌ಗಿಂತಲೂ ಕಡಿಮೆ ಇದೆ. ಹಾಗಿದ್ದರೂ, ಭಾರತದಲ್ಲಿ ಇಂದಿಗೂ ಪ್ರತಿ ಲೀಟರ್ ಪೆಟ್ರೋಲ್‌ಗೆ ₹75–₹80 ಡೀಸೆಲ್‌ಗೆ ₹70 ಪಾಗತಿಸಬೇಕಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಡವರ ಭೂಮಿಗಾಗಿ ಹೋರಾಟ ಮಾಡಿದ್ದಾರೆ. ಆದರೆ ರೈತ ವಿರೋಧಿ ಕಾನೂನುಗಳನ್ನು ಸುಗ್ರೀವಾಜ್ಞೆ ಮೂಲಕ ಮಾಡಲು ಮುಂದಾಗುತ್ತಿದ್ದಾರೆ. ಇದನ್ನು ತಕ್ಷಣ ನಿಲ್ಲಿಸಬೇಕು.ಭೂ ಸುಧಾರಣಾ ಕಾಯ್ದೆ ಸೆಕ್ಷನ್ 79ಎ, 80 ರದ್ದು ಮಾಡಬೇಕು. ಭಾರತದಲ್ಲಿ ಸಣ್ಣ, ಅತಿ ಸಣ್ಣ ರೈತರು ಇದ್ದು, ಶ್ರಮಪಟ್ಟು ಬೆಳೆದು ಆಹಾರ ಉತ್ಪಾದನೆ ಮಾಡಿದ್ದಾರೆ. ಇದರಿಂದ ದೇಶದಲ್ಲಿ ಆಹಾರ ಸಮಸ್ಯೆ ಇಲ್ಲ. ಇಂತಹ ಸಂದರ್ಭದಲ್ಲೂ ರೈತರ ವಿರೋಧಿ ನಿಲುವು ತೆಗೆದುಕೊಂಡಿರುವುದು ಅಕ್ಷಮ್ಯ’ ಎಂದು ಅವರು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಪಿ.ಧರ್ಮಸೇನಾ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿದರು.

ಶಾಸಕ ಆರ್‌.ನರೇಂದ್ರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎಂ.ಅಶ್ವಿನಿ, ಹಂಗಾಮಿ ಉಪಾಧ್ಯಕ್ಷ ಕೆ.ಎಸ್‌.ಮಹೇಶ್‌, ಮುಖಂಡರಾದ ಎಸ್.ಜಯಣ್ಣ, ಎಸ್.ಬಾಲರಾಜ್, ಎಂ.ಶಿವಣ್ಣ, ಗಣೇಶ್‌ಪ್ರಸಾದ್ ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಿವಮ್ಮ, ಕೆ.ಪಿ.ಸದಾಶಿವಮೂರ್ತಿ, ಕೆರೆಹಳ್ಳಿನವೀನ್, ಚಾಮುಲ್ ಅಧ್ಯಕ್ಷ ನಂಜುಂಡಪ್ರಸಾದ್, ಜಿಲ್ಲಾ ಕಾಂಗ್ರೆಸ್‌ ಸಮಿತಿ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಮಾಧ್ಯಮ ಕಾರ್ಯದರ್ಶಿ, ವಕೀಲ ಅರುಣ್ ‌ಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಆರ್.ಮಹದೇವು, ಚಿಕ್ಕಮಹದೇವು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಚ್.ವಿ.ಚಂದ್ರು, ಮಹಮ್ಮದ್‌ಅಸ್ಗರ್, ತೋಟೇಶ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚೇತನ್ ‌ದೊರೈರಾಜು ಇತರರು ಇದ್ದರು.

ರೈತರಿಗೆ ಮರಣ ಶಾಸನ

‘ಎಪಿಎಂಪಿ, ಹಾಪ್‌ಕಾಮ್ಸ್ ರೈತರು ಬೆಳೆದ ಪದಾರ್ಧಗಳಿಗೆ ಸರ್ಕಾರವೇ ಸೂಕ್ತ ವ್ಯವಸ್ಥೆ ಕಲ್ಪಿಸಿದೆ. ಇದನ್ನು ಖಾಸಗೀಕರಣ ಮಾಡಬಾರದು ಹಾಗೂ ರೈತರಿಗೆ ಮರಣ ಶಾಸನವಾಗಿರುವ ಭೂ ಸುಧಾರಣೆ ಕಾಯ್ದೆಗೆ ಸುಗ್ರೀವಾಜ್ಞೆ ಯಾವುದೇ ಕಾರಣಕ್ಕೂ ತರಬಾರದು’ ಎಂದು ಆರ್‌.ಧ್ರುವನಾರಾಯಣ ಅವರು ಹೇಳಿದರು.

ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ‘ಬಿಜೆಪಿ ಸರ್ಕಾರ ಕೋವಿಡ್‌–19 ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ರೈತರು ಬೆಳೆದ ಪದಾರ್ಥಗಳ ಮಾರಾಟಕ್ಕಿರುವ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರೈತ ವಿರೋಧ ಕಾಯ್ದೆಗಳನ್ನು ತರುವುದು ಸರಿಯಲ್ಲ. ಭೂ ಸುಧಾರಣೆ ಕಾಯ್ದೆ ರೈತರಿಗೆ ಮರಣ ಶಾಸನವಾಗಲಿದೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.