
ಚಾಮರಾಜನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ನೂತನ ಪದಾಧಿಕಾರಿಗಳ ಪದ ಗ್ರಹಣ ಸಮಾರಂಭದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿಯ ಸಂಯೋಜಕ ಎಸ್. ನಾರಾಯಣ್ ನೇಮಕಾತಿ ಪತ್ರ ವಿತರಿಸಿದರು.
ಚಾಮರಾಜನಗರ: ಕಾಂಗ್ರೆಸ್ ಪಕ್ಷವನ್ನು ಗ್ರಾಮ ಪಂಚಾಯಿತಿ ಮಟ್ಟದಿಂದ ಸದೃಢಗೊಳಿಸಲು ಪ್ರಚಾರ ಸಮಿತಿ ಪದಾಧಿಕಾರಿಗಳು ಶ್ರಮಿಸಬೇಕು ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ಸಂಯೋಜಕ ಹಾಗೂ ಜಿಲ್ಲೆಯ ಉಸ್ತುವಾರಿ ಎಸ್.ನಾರಾಯಣ್ ಕರೆ ನೀಡಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನೇಮಕಾತಿ ಪತ್ರಗಳನ್ನು ವಿತರಿಸಿ ಮಾತನಾಡಿದ ಅವರು, ಪ್ರಚಾರ ಸಮಿತಿ ಚುನಾವಣೆಯ ಉದ್ದೇಶದಿಂದ ರಚನೆ ಮಾಡಿದ್ದಲ್ಲ. ಪಕ್ಷದ ಸಾಧನೆ, ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತು ಪ್ರಚಾರ ಮಾಡುವುದರ ಜೊತೆಗೆ ಬಿಜೆಪಿಯ ವೈಫಲ್ಯಗಳನ್ನು ಜನರಿಗೆ ತಿಳಿಸಲು, ಪಕ್ಷವನ್ನು ಬಲಗೊಳಿಸುವ ಜವಾಬ್ದಾರಿ ಇದೆ.
ಪ್ರಚಾರ ಸಮಿತಿಯ ಕಾರ್ಯವೈಖರಿ ಬದಲಾಗಿದ್ದು ವರ್ಷ ಪೂರ್ತಿ ಸಕ್ರಿಯವಾಗಿ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಗ್ರಾಮ ಮಟ್ಟದಲ್ಲಿ ಹಳ್ಳಿಗಳಿಗೆ ತೆರಳಿ ಸರ್ಕಾರದ ಕಾರ್ಯಕ್ರಮಗಳನ್ನು ಮನ ಮುಟ್ಟುವಂತೆ ತಿಳಿಸಬೇಕು. ಪಕ್ಷದ ಬಗ್ಗೆ ಜನಾಭಿಪ್ರಾಯ ರೂಪಿಸಬೇಕು, ಸ್ಥಳೀಯ ಶಾಸಕರು, ಸಂಸದರು, ಜಿಲ್ಲಾಧ್ಯಕ್ಷರು, ಬ್ಲಾಕ್ ಅಧ್ಯಕ್ಷರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಕ್ರಮ ರೂಪಿಸಬೇಕು. ಪಕ್ಷದ ಕಾರ್ಯಕ್ರಮಗಳಿಗೂ ಹಾಜರಾಗಬೇಕು ಎಂದು ಕರೆ ನೀಡಿದರು.
ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಹೆಸರನ್ನು ವಿಕಸಿತ ಭಾರತ ಜೀ ರಾಮ್ ಜೀ ಯೋಜನೆಯಾಗಿ ಬದಲಾಯಿಸಿದ್ದು ಗ್ರಾಮೀಣ ಜನರ ಕೂಲಿ ಹಾಗೂ ಅಭಿವೃದ್ದಿ ಕುಂಠಿತವಾಗಲಿದೆ. ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧಿಗೆ ಅಪಮಾನ ಮಾಡಿದೆ. ಈ ಬಗ್ಗೆ ಜನಜಾಗೃತಿ ಮೂಡಿಸಿ ಹೋರಾಟ ಮಾಡಬೇಕಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ದಿ.ಎಚ್.ಎಸ್.ಮಹದೇವಪ್ರಸಾದ್, ದಿ.ಆರ್.ಧ್ರುವನಾರಾಯಣ್ ಅವರ ಸಂಘಟನೆ ಮತ್ತು ರಚನಾತ್ಮಕ ಕಾರ್ಯಕ್ರಮಗಳ ಫಲವಾಗಿ ಪಕ್ಷ ಸದೃಢವಾಗಿದೆ. ಅವರ ಮಾದರಿಯಲ್ಲಿ ಶಾಸಕರು, ಸಂಸದರು, ಮಾಜಿ ಶಾಸಕರು ಪಕ್ಷ ಸಂಘಟನೆ ಮಾಡಬೇಕು ಎಂದರು.
ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ಹೊಸಹಳ್ಳಿ ಮಧುಸೂಧನ್ ಮಾತನಾಡಿದರು. ಶಾಸಕ ಎಚ್.ಎಂ. ಗಣೇಶ್ ಪ್ರಸಾದ್, ಮಾಜಿ ಶಾಸಕ ಆರ್.ನರೇಂದ್ರ, ಜಿ.ಎನ್.ನಂಜುಂಡಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್ ಪ್ರಧಾನ ಕಾರ್ಯದರ್ಶಿಗಳಾದ ಆರ್. ಮಹದೇವ್, ಚಿಕ್ಕಮಹದೇವ್, ಜಿಲ್ಲಾ ವಕ್ತಾರ ಕೆರೆಹಳ್ಳಿ ನವೀನ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕೆಂಗಾಕಿ ನಾಗರತ್ನ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಮಹಮದ್ ಅಸ್ಗರ್, ಹೊಂಗನೂರು ಚಂದ್ರು, ರಾಜಶೇಖರ್, ಈಶ್ವರ್, ಮುಖಂಡರಾದ ಮಹೇಶ್, ಗೂಳಿಪುರ ನಾಗೇಂದ್ರ, ಸೈಯದ್ ರಫಿ, ಎಎಚ್‌ಎನ್.ಖಾನ್, ಕಾವೇರಿ ಶಿವಕುಮಾರ್, ಚಿನ್ನಮ್ಮ, ಕಲಾವತಿ, ರವಿ ದೊಡ್ಡರಾಯಪೇಟೆ, ಬಿಸಲವಾಡಿ ರವಿ, ಕೆಂಪರಾಜು, ಕೆರಹಳ್ಳಿ ರಾಜಕುಮಾರ್, ಸಿದ್ದರಾಜ ನಾಯಕ, ಉಲ್ಲಾಸ್, ಶಂಕರ್, ಮಾದೇಶ್, ಸೈಯದ್ ನಸ್ರುಲ್ ಇದ್ದರು.
‘ಪಕ್ಷದ ಪರ ಪ್ರಚಾರ ಚುರುಕುಗೊಳಿಸಿ’
ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡುತ್ತಿದ್ದು ಐದು ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದಿಂದ ಬಡವರಿಗೆ ಅನುಕೂಲವಾಗಿದೆ. ಕ್ಷೇತ್ರದ ಅಭಿವೃದ್ದಿಗೂ ಅನುದಾನ ದೊರೆಯುತ್ತಿದೆ. ಜನಪರ ಆಡಳಿತವನ್ನು ಜನರಿಗೆ ಪ್ರಚಾರ ಮಾಡಬೇಕಾದ ಹೊಣೆಗಾರಿಕೆ ಪ್ರಚಾರ ಸಮಿತಿ ಮೇಲಿದೆ. ಮುಂಬರುವ ಜಿಲ್ಲಾ ಪಂಚಾಯಿತಿ ತಾಲ್ಲೂಕು ಪಂಚಾಯಿತಿ ಹಾಗೂ ನಗರಸಭೆ ಪುರಸಭೆ ಪಟ್ಟಣ ಪಂಚಾಯಿತಿ ಚುನಾವಣೆಗಳಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲು ಪೂರಕವಾಗಿ ಕೆಲಸ ಮಾಡಬೇಕು ಎಂದು ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.