ಚಾಮರಾಜನಗರ: ಬಿಹಾರ, ಮಹಾರಾಷ್ಟ್ರದಲ್ಲಿ ನಡೆದಿರುವಂತೆ ಕರ್ನಾಟಕದಲ್ಲೂ ಮತಗಳವು ನಡೆದಿದೆ ಎಂದು ಕಾಂಗ್ರೆಸ್ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ವಿನಯ ಕುಮಾರ್ ಸೊರಕೆ ಆರೋಪಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್‌ನ ಮಹದೇವಪುರ ಕ್ಷೇತ್ರವೊಂದರಲ್ಲೇ 80,000 ಹೆಚ್ಚುವರಿ ಮತಗಳು ಚಲಾವಣೆಗೊಂಡಿವೆ. ಬಿಹಾರದಲ್ಲಿ 65 ಲಕ್ಷ ಮತದಾರರರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಮತಗಳ್ಳತನ, ಮತದಾರರ ಹೆಚ್ಚುವರಿ ಸೇರ್ಪಡೆಯಂತಹ ಪ್ರಜಾಪ್ರಭುತ್ವ ವಿರೋಧಿ ಕೃತ್ಯಗಳಿಂದ ಕಾಂಗ್ರೆಸ್ ಅಭ್ಯರ್ಥಿಗಳು ಚುನಾವಣೆಯಲ್ಲಿ ಸೋಲನುಭವಿಸಬೇಕಾಯಿತು ಎಂದು ದೂರಿದರು.
ಚುನಾವಣಾ ತಂತ್ರಗಾರಿಕೆಯಲ್ಲಿ ಕಾಂಗ್ರೆಸ್ ಹಿಂದೆ ಬಿದ್ದಿದ್ದ ಪರಿಣಾಮ ಬಿಜೆಪಿ ರಾಜಕೀಯ ಲಾಭ ಪಡೆದುಕೊಂಡಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ವಿರುದ್ಧವೂ ಜನಾಭಿಪ್ರಾಯ ರೂಪಿಸುವ ಕುತಂತ್ರದಲ್ಲಿ ತೊಡಗಿಸಿಕೊಂಡಿದೆ. ಬಿಜೆಪಿಯ ಎಲ್ಲ ಅಪಪ್ರಚಾರಗಳಿಗೆ ಉತ್ತರವಾಗಿ ಕಾಂಗ್ರೆಸ್ ಪ್ರಚಾರ ಸಮಿತಿಗಳನ್ನು ಬಲಗೊಳಿಸಿ ಜನರಿಗೆ ಸತ್ಯ ತಿಳಿಸುವ ಕಾರ್ಯ ಮಾಡುತ್ತಿದೆ ಎಂದು ಸೊರಕೆ ಹೇಳಿದರು.
ರಾಜ್ಯ, ವಿಭಾಗೀಯ ಹಾಗೂ ಜಿಲ್ಲಾ ಮಟ್ಟದಲ್ಲಿ ತರಬೇತಿ ಶಿಬಿರಗಳನ್ನು ಆಯೋಜಿಸಿ ಸಿದ್ಧಾಂತ ಹಾಗೂ ವಿಚಾರಧಾರೆಗಳ ಮೇಲೆ ಪಕ್ಷವನ್ನು ಕಟ್ಟುವ ಹಾಗೂ ಸಂಘಟಿಸುವ ಕಾರ್ಯಕ್ಕೆ ಎಐಸಿಸಿ ಒತ್ತು ನೀಡಿದೆ. ರಾಜ್ಯದಾದ್ಯಂತ ಪ್ರಚಾರ ಸಮಿತಿಗಳನ್ನು ಬಲಗೊಳಿಸಿ ಸಮರ್ಥರನ್ನು ನೇಮಕಾತಿ ಮಾಡಿದೆ.
ರಾಜ್ಯ ಪ್ರಚಾರ ಸಮಿತಿಗೆ 10 ಉಪಾಧ್ಯಕ್ಷರು, 12 ಮುಖ್ಯ ಸಂಯೋಜಕರು, 14 ಮಂದಿ ಸಂಯೋಜಕರು, ಸಾಮಾಜಿಕ ಜಾಲತಾಣಗಳ ನಿರ್ವಹಣೆಗೆ ಒತ್ತು ನೀಡಲಾಗಿದೆ. ಜಿಲ್ಲಾ, ಬ್ಲಾಕ್ ಹಾಗೂ ಗ್ರಾಮೀಣ ಮಟ್ಟದಲ್ಲೂ ಸಮಿತಿಗಳನ್ನು ರಚನೆ ಮಾಡಲಾಗುತ್ತಿದ್ದು, 58,000 ಬೂತ್‌ಗೆ ತಲಾ ಇಬ್ಬರು ಡಿಜಿಟಲ್ ಮುಖ್ಯಸ್ಥರನ್ನು ನೇಮಕಾತಿ ಮಾಡಲಾಗುತ್ತಿದೆ ಎಂದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಮರಿಸ್ವಾಮಿ, ಪ್ರಚಾರ ಸಮಿತಿ ಉಪಾಧ್ಯಕ್ಷರಾದ ಕೋಟೆ ಶಿವಣ್ಣ, ಎಸ್.ನಾರಾಯಣ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸವರಾಜು, ಮುಖಂಡರಾದ ಮುನಿ, ನಟರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವ್, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಮಧುಸೂದನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನ ಸುದ್ದಿಗೋಷ್ಠಿಯಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.