ADVERTISEMENT

‘ಭಾರತದ ಸಂವಿಧಾನ ಸುಭದ್ರ’

ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಗಣೇಶಪ್ರಸಾದ್

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 2:59 IST
Last Updated 27 ನವೆಂಬರ್ 2025, 2:59 IST
ಗುಂಡ್ಲುಪೇಟೆ ಪಟ್ಟಣದ ಗುರು ಭವನದಲ್ಲಿ ಬುಧವಾರ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಎಚ್.ಎಂ.ಗಣೇಶಪ್ರಸಾದ್ ಸಂವಿಧಾನ ಪೀಠಿಕೆ ಬೋಧಿಸಿದರು
ಗುಂಡ್ಲುಪೇಟೆ ಪಟ್ಟಣದ ಗುರು ಭವನದಲ್ಲಿ ಬುಧವಾರ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಎಚ್.ಎಂ.ಗಣೇಶಪ್ರಸಾದ್ ಸಂವಿಧಾನ ಪೀಠಿಕೆ ಬೋಧಿಸಿದರು   

ಗುಂಡ್ಲುಪೇಟೆ: ‘ಭಾರತದ ಸಂವಿಧಾನವನ್ನು ಬದಲಾವಣೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಶಾಸಕ ಎಚ್.ಎಂ.ಗಣೇಶಪ್ರಸಾದ್ ಅಭಿಪ್ರಾಯಪಟ್ಟರು.

ಪಟ್ಟಣದ ಗುರು ಭವನದಲ್ಲಿ ತಾಲ್ಲೂಕು ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ದೇಶದಲ್ಲಿ ಏನೇ ಬದಲಾದರೂ ಸಂವಿಧಾನ ಸುಭದ್ರವಾಗಿರಲಿದೆ. ಅದರಿಂದ ಬೇಡದ ವಿಚಾರಗಳ ಚರ್ಚೆಗೂ ಕಡಿವಾಣ ಹಾಕಬಹುದು’ ಎಂದರು.

‘ಸಂವಿಧಾನದಲ್ಲಿರುವ ಕಾನೂನುಗಳನ್ನು ದುರುಪಯೋಗ ಪಡಿಸಿಕೊಳ್ಳಬಾರದು. ದೀನ–ದಲಿತರು, ಹಿಂದುಳಿದ ವರ್ಗದವರಿಗೆ ಉತ್ತಮ ಸಮಾಜ ನಿರ್ಮಿಸಲು ಸಾಕಷ್ಟು ಕಾರ್ಯಕ್ರಮ ರೂಪಿಸಲಾಗಿದೆ. ಅಂಬೇಡ್ಕರ್ ಜೀವನ ಚರಿತ್ರೆಯನ್ನು ಎಲ್ಲರೂ ನೆನಪಿಸಿಕೊಳ್ಳಬೇಕು’ ಎಂದರು.

ADVERTISEMENT

ಪ್ರೊ.ಶ್ರೀನಿವಾಸ್ ಮಾತನಾಡಿ, ‘‌ಬ್ರಿಟಿಷ್ ಕಾನೂನುಗಳು ಧಮನಕಾರಿ ನೀತಿ ಅನುಸರಿಸುತ್ತಿದ್ದವು. ಭಾರತೀಯರಿಂದಲೇ ಸಂವಿಧಾನ ರಚನೆಯಾಗಿ ದೇಶದ ಆಡಳಿತ ನಡೆಸಬೇಕು ಎಂಬ ಉದ್ದೇಶದಿಂದ ಸಂವಿಧಾನ ಕರಡು ಸಮಿತಿ ರಚಿಸಲಾಯಿತು. ಸಂವಿಧಾನ ಸಾಮಾಜಿಕ ಬದಲಾವಣೆಯ ಕನ್ನಡಿಯಾಗಿದೆ. ಮಹಿಳೆಯರಿಗೆ ಸಮಾನತೆ, ಎಲ್ಲಾ ಧರ್ಮ, ಜಾತಿಗಳಿಗೆ ಸಾಮಾಜಿಕ ನ್ಯಾಯ ಒದಗಿಸಿಕೊಟ್ಟಿದೆ’ ಎಂದು ಶ್ಲಾಘಿಸಿದರು.

ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಂಬಂಧ ಪೋಸ್ಟರ್ ಬಿಡುಗಡೆ ಮಾಡಲಾಯಿತು. ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ಗೆಲುವು ಸಾಧಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ಶರವಣ, ತಾಲ್ಲೂಕು ಆರೋಗ್ಯಾಧಿಕಾರಿ ಅಲೀಂ ಪಾಷಾ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮೋಹನ್ ಕುಮಾರ್, ಸೆಸ್ಕ್‌ ಎಇಇ ಸಿದ್ದಲಿಂಸ್ವಾಮಿ, ಪುರಸಭೆ ಮಾಜಿ ಅಧ್ಯಕ್ಷ ಶಶಿಧರ್ ಪಿ.ದೀಪು, ಮಾಜಿ ಉಪಾಧ್ಯಕ್ಷ ಅಣ್ಣಯ್ಯಸ್ವಾಮಿ, ಎನ್.ಕುಮಾರ್, ತಾ.ಪಂ.ಮಾಜಿ ಅಧ್ಯಕ್ಷ ಬಸವರಾಜು, ಬಂಗಾರನಾಯಕ, ಆರ್.ಸೋಮಣ್ಣ, ಸುಭಾಷ್ ಮಾಡ್ರಹಳ್ಳಿ, ನಮ್ಮ ಕರ್ನಾಟಕ ಸೇನೆ ಜಿಲ್ಲಾಧ್ಯಕ್ಷ ಸುರೇಶ್ ನಾಯಕ, ಶ್ರೀನಿವಾಸನಾಯಕ, ರತ್ನಮ್ಮ, ಶಂಕರ್, ಬಸವಣ್ಣ, ನಾಗಮಲ್ಲು, ರವಿ ಸೋಮಹಳ್ಳಿ, ಅಪ್ಸರ್ ಪಾಷಾ, ಶಿವರಾಮ್, ರಾಜೇಶ್, ಸಿದ್ದಯ್ಯ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.