ADVERTISEMENT

ಗುಂಡ್ಲುಪೇಟೆ: ಏ.14ರಂದು ಸಂವಿಧಾನ, ಮತದಾನ ಜಾಗೃತಿ ಜಾಥಾ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2024, 14:08 IST
Last Updated 13 ಏಪ್ರಿಲ್ 2024, 14:08 IST

ಗುಂಡ್ಲುಪೇಟೆ: ಸಂವಿಧಾನ ಉಳಿಸೋಣ, ಬಹುತ್ವ ಸಮಾಜ ಕಟ್ಟೋಣ ಎಂಬ ಧ್ಯೇಯವಾಕ್ಯದೊಂದಿಗೆ ಜನರಲ್ಲಿ ಸಂವಿಧಾನ ಮತ್ತು ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಪಟ್ಟಣದಲ್ಲಿ ಏ.14ರಂದು ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಸಮಾನ ಮನಸ್ಕರ ವೇದಿಕೆ ರಾಜ್ಯ ಸಂಚಾಲಕ ಜಗನ್ ಸಿ.ಕೆ. ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.11ರಂದು ಗಾಂಧಿ ನೆಲ ತಗಡೂರಿನಲ್ಲಿ ಜಾಥಾಗೆ ಚಾಲನೆ ನೀಡಲಾಗಿದ್ದು, ಏ.14 ರಂದು ಗುಂಡ್ಲುಪೇಟೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ಕಲಾ ತಂಡಗಳೊಡನೆ ಮೆರವಣಿಗೆ ನಡೆಯಲಿದೆ. ಇದರ ಪ್ರಮುಖ ಉದ್ದೇಶ ಬಸವಣ್ಣ, ಅಂಬೇಡ್ಕರ್, ಗಾಂಧಿ ಮತ್ತು ಕುವೆಂಪು ಅವರ ಆದರ್ಶಗಳನ್ನು ಜನ ಸಾಮಾನ್ಯರಿಗೆ ತಿಳಿಸುವುದಾಗಿದೆ ಎಂದು ಹೇಳಿದರು.

ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ಸಂವಿಧಾನವನ್ನು ಬದಲಾವಣೆ ಮಾಡುವ ಹೇಳಿಕೆ ನೀಡುತ್ತಿರುವುದು ಖಂಡನೀಯ. ಅನೇಕ ಸಂಸ್ಕೃತಿಗಳ ನೆಲೆಯಾದ ಬಹುತ್ವದ ಭಾರತದಲ್ಲಿ ಸಂವಿಧಾನವೇ ಶ್ರೇಷ್ಠ. ಹಾಗಾಗಿ ಸಂವಿಧಾನವನ್ನು ಉಳಿಸುವತ್ತ ಪ್ರತಿಯೊಬ್ಬರು ಮುಂದಾಗಬೇಕು ಎಂದು ತಿಳಿಸಿದರು.

ADVERTISEMENT

ಪ್ರಹ್ಲಾದ್ ಜೋಶಿ ವಿರುದ್ಧ ಆಕ್ರೋಶ: ಹುಬ್ಬಳ್ಳಿ-ಧಾರವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಕಚೇರಿಯಲ್ಲಿ ಬಸವಣ್ಣ, ಅಂಬೇಡ್ಕರ್ ಮತ್ತು ವಾಲ್ಮೀಕಿ ಭಾವಚಿತ್ರವನ್ನು ತೆರವುಗೊಳಿಸಿರುವುದು ಅತ್ಯಂತ ಖಂಡನೀಯ. ಬಿಜೆಪಿ ಪಕ್ಷ ಇವರಿಗೆ ನೀಡಿರುವ ಲೋಕಸಭಾ ಟಿಕೆಟ್ ರದ್ದು ಮಾಡಬೇಕು. ಜೊತೆಗೆ ಗೃಹಲಕ್ಷ್ಮೀ ಯೋಜನೆ ಹಣ ಪಡೆಯುತ್ತಿರುವ ಮಹಿಳೆಯರ ಬಗ್ಗೆ ಕೆಟ್ಟದಾಗಿ ಪದ ಬಳಸಿರುವ ಜೋಶಿ ಕೂಡಲೇ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ದಸಂಸ ಜಿಲ್ಲಾ ಸಂಚಾಲಕ ನಂಜುಂಡಸ್ವಾಮಿ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ ಮತ್ತು ಕುವೆಂಪು ಈ ನೆಲದ ಮೂಲ ಸಂಸ್ಕೃತಿ ಮತ್ತು ವಿಚಾರಧಾರೆಗಳನ್ನು ತಿಳಿಸಿದ್ದಾರೆ. ಆದರೆ ಕೆಲವರು ಇದನ್ನು ಇತ್ತೀಚಿಗೆ ಮರೆಮಾಚುತ್ತಿದ್ದಾರೆ. ಈ ಬಗ್ಗೆ ಯುವಕರಿಗೆ ಅರಿವು ಮೂಡಿಸಿದರೆ ಮಾತ್ರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು.

ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಮಾಡ್ರಹಳ್ಳಿ ಸುಭಾಷ್ ಮಾತನಾಡಿ, ದೇಶದಲ್ಲಿ ಸರ್ವಾಧಿಕಾರಿ ಧೋರಣೆ ಮನೆ ಮಾಡಿದೆ. ಇದು ಸಮಾಜಕ್ಕೆ ಮಾರಕವಾಗಿದೆ. ಕಳೆದ ಹತ್ತು ವರ್ಷಗಳ ಆಳ್ವಿಕೆ ನಡೆಸಿದ ಬಿಜೆಪಿ ಸರ್ಕಾರ ಶ್ರೀಮಂತರ ಕೈಗೊಂಬೆಯಾಗಿದ್ದು, ಬಂಡವಾಳ ಶಾಹಿಗಳ ಪರ ನಿಂತಿದೆ. ಕನ್ನಡಿಗರು ಸ್ಥಾಪಿಸಿದ ಬ್ಯಾಂಕ್ ಗಳನ್ನು ಉತ್ತರ ಭಾರತದ ಬ್ಯಾಂಕ್ ಗಳಿಗೆ ವಿಲೀನಗೊಳಿಸಿದ ಕಾರಣ ಕನ್ನಡಿಗರ ಉದ್ಯೋಗವನ್ನು ಬೇರೆ ರಾಜ್ಯದವರ ಪಾಲಾಗಿದೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಗೆ ಕಡಿಮೆ ಅನುದಾನ ನೀಡಿದ್ದಾರೆ. ಸಂಸ್ಕೃತ ಭಾಷೆಗೆ ಹೆಚ್ಚಿನ ಅನುದಾನ ನೀಡಿ ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೆ. ಆದ್ದರಿಂದ ಇದೀಗ ಸಂವಿಧಾನ ಉಳಿಸುವ ವಾತಾವರಣ ನಿರ್ಮಾಣವಾಗಿದ್ದು, ಇದಕ್ಕೆ ಎಚ್ಚರಿಕೆಯಿಂದ ಹೆಜ್ಜೆ ಹಿಡಬೇಕು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಮಾನವ ಬಂಧುತ್ವ ವೇದಿಕೆಯ ತಾಲ್ಲೂಕು ಸಂಚಾಲಕ ಸೋಮಣ್ಣ, ಬಾಬು ಜಗಜೀವನ್ ರಾಂ ವೇದಿಕೆಯ ನಾಗಯ್ಯ, ಮಹಾ ನಾಯಕ ರಕ್ಷಣಾ ವೇದಿಕೆಯ ಉಲ್ಲಾಸ್, ಮುತ್ತಣ್ಣ, ಹೊರೆಯಾಲ ಸಿದ್ದರಾಜು, ವಕೀಲ ರಾಜೇಶ್ ಮಾಡ್ರಹಳ್ಳಿ ರಂಗಸ್ವಾಮಿ, ಅರುಣ್ ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.