ADVERTISEMENT

ಕಳಪೆ ರಸಗೊಬ್ಬರ: ಕಂಪನಿಗೆ ₹3.55 ಲಕ್ಷ ದಂಡ

​ಪ್ರಜಾವಾಣಿ ವಾರ್ತೆ
Published 25 ಜುಲೈ 2023, 5:50 IST
Last Updated 25 ಜುಲೈ 2023, 5:50 IST
ಚಾಮರಾಜನಗರದ ಕೋರ್ಟ್‌ ರಸ್ತೆಯಲ್ಲಿರುವ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ
ಚಾಮರಾಜನಗರದ ಕೋರ್ಟ್‌ ರಸ್ತೆಯಲ್ಲಿರುವ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ   

ಕೊಳ್ಳೇಗಾಲ: ಕಳಪೆ ರಸಗೊಬ್ಬರ ಹಾಗೂ ಔಷಧಿ ಸರಬರಾಜು ಮಾಡಿದ್ದ ಇನ್ ಫಿನಿಟಿ ಆಫ್ ವೆಲ್ತ್ ಮತ್ತು ಹೆಲ್ತ್ ಕಂಪನಿಗೆ ಚಾಮರಾಜನಗರ ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗವು ₹3.55 ಲಕ್ಷ ದಂಡ ವಿಧಿಸಿದೆ.   

ನಗರದ ಬಸವೇಶ್ವರ ನಗರದ ನಿವಾಸಿ ಯಶವಂತ್ ಕುಮಾರ್ ಅವರು ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಿದ್ದರು.

ಯಶವಂತ್ ಕುಮಾರ್ ಅವರು ಜಮೀನಿನಲ್ಲಿ 5 ಎಕರೆಗೆ 1,750 ಏಲಕ್ಕಿ ಬಾಳೆ ಗಡ್ಡೆ ನಾಟಿ ಮಾಡಿದ್ದರು. ಇನ್ ಫಿನಿಟ್‌ ಇನ್ ಫಿನಿಟ್ ಆಫ್ ವೆಲ್ತ್ ಮತ್ತು ಹೆಲ್ತ್ ಕಂಪನಿಗೆ ಸೇರಿದ ಕೀಟನಾಶಕ ಹಾಗೂ ರಸಗೊಬ್ಬರವನ್ನು ಖರೀದಿಸಿ ಸಿಂಪಡಿಸಿದ್ದರು. ಆದರೆ ನಿರೀಕ್ಷೆಯಂತೆ ಬೆಳೆ ಬಂದಿರಲಿಲ್ಲ. ಇದಕ್ಕಾಗಿ ಕಂಪನಿ ವಿರುದ್ಧ ಗ್ರಾಹಕರ ವೇದಿಕೆಗೆ ದೂರು ನೀಡಿದ್ದರು. 

ADVERTISEMENT

ತೋಟಗಾರಿಕೆ ಇಲಾಖೆಯವರಿಂದ ಈ ಬಗ್ಗೆ ವರದಿ ಪಡೆದು ನಷ್ಟ ಉಂಟಾಗಿರುವ ಬಗ್ಗೆ ಖಚಿತ ಪಡಿಸಲಾಗಿತ್ತು.

ಗ್ರಾಹಕರ ವೇದಿಕೆಯ ಪ್ರಭಾರ ಅಧ್ಯಕ್ಷೆ ಎಂ‌.ವಿ.ಭಾರತೀ ಹಾಗೂ ಸದಸ್ಯ ಕೆ.ಎಸ್.ರಾಜು ಅವರು ದೂರುದಾರರು ಹಾಗೂ ಎದುರುದಾರರ ವಾದ ಪ್ರತಿವಾದ ಆಲಿಸಿ ಪ್ರಕರಣದಲ್ಲಿ ರೈತನಿಗೆ ನಷ್ಟ ಉಂಟಾಗಿರುವುದು ಖಚಿತವಾಗಿದೆ ಎಂದು ಹೇಳಿದ್ದರು. ಇದಕ್ಕಾಗಿ ಬೆಳೆ ನಷ್ಟ ಆಗಿರುವುದಕ್ಕೆ ₹3 ಲಕ್ಷ , ಭೂಮಿ ಹದ ಹಾಗೂ ಉಳುಮೆಗೆ, ಕಾರ್ಮಿಕರ ಕೂಲಿ ವೆಚ್ಚ ₹30 ಸಾವಿರ, ಘಟನೆಯಿಂದ ರೈತನಿಗಾಗಿರುವ ಮಾನಸಿಕ ವೇದನೆಗೆ ₹20 ಸಾವಿರ, ಪ್ರಕರಣದ ಖರ್ಚು ₹5 ಸಾವಿರ ಸೇರಿದಂತೆ ಒಟ್ಟು ₹3.55 ಲಕ್ಷ ದಂಡ ವಿಧಿಸಿ ಇದೇ 19 ರಂದು ಆದೇಶ ನೀಡಿದ್ದಾರೆ.

ಆದೇಶ ನೀಡಿದ ತಿಂಗಳ ಒಳಗಾಗಿ ದಂಡ ಪಾವತಿಸದಿದ್ದರೆ, ಆ ದಿನದಿಂದ ಶೇ 9ರಷ್ಟು ಬಡ್ಡಿ ಸೇರಿಸಿ ಹಣ ಸಂದಾಯ ಮಾಡಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.

ಯಶವಂತಕುಮಾರ್‌ ಸಿ.ಶಿವಕುಮಾರ್ ವಾದ ಮಂಡಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.