ADVERTISEMENT

ತರುಲತೆಗಳಲ್ಲೂ ಕೊರೊನಾ ಚಿತ್ತಾರ!

ಪರಿಸರದಲ್ಲೀಗ ಕೋವಿಡ್‌ ವೈರಸ್‌ ಹೋಲುವ ಪುಷ್ಪಗಳ ಮೆರವಣಿಗೆ

ನಾ.ಮಂಜುನಾಥ ಸ್ವಾಮಿ
Published 26 ಆಗಸ್ಟ್ 2020, 16:57 IST
Last Updated 26 ಆಗಸ್ಟ್ 2020, 16:57 IST
ವೈರಸ್‌ನ ರೀತಿಯಲ್ಲೇ ಮುಳ್ಳುಗಳ ರಚನೆಯುಳ್ಳ ಕಾಡುಪುಷ್ಪ
ವೈರಸ್‌ನ ರೀತಿಯಲ್ಲೇ ಮುಳ್ಳುಗಳ ರಚನೆಯುಳ್ಳ ಕಾಡುಪುಷ್ಪ   

ಯಳಂದೂರು:ಈಗ ವೈರಸ್‌ ಎಂದರೆ ಎಲ್ಲರ ಬಾಯಲ್ಲೂ ಕೇಳಿ ಬರುವ ಹೆಸರು ಕೊರೊನಾ. ಕೋಟ್ಯಂತರ ಜನರ ಬಾಯಲ್ಲಿ ಇದರದ್ದೇ ಮಾತು. ಪೋರರಿಂದ ಹಿಡಿದು ವೃದ್ಧರವರೆಗೂ ಮೂರುತಲೆಮಾರನ್ನು ಈ ವೈರಸ್‌ ಬಾಧಿಸುತ್ತಿದೆ. ವೃತ್ತಾಕಾರದಲ್ಲಿ ಮುಳ್ಳು ಮುಳ್ಳಾಗಿರುವ ವೈರಸ್‌ನ ಚಿತ್ರವನ್ನು ಕಂಡೊಡನೆ ಜನರು ಬೆಚ್ಚಿ ಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ನಮ್ಮ ಪರಿಸರದಲ್ಲಿ ಈ ವೈರಾಣುವನ್ನೇ ಹೋಲುವ ಹಲವು ಆಕರ್ಷಕ ಕಾಡು ಹೂವುಗಳನ್ನು ಜನರನ್ನು ಸೆಳೆಯುತ್ತಿವೆ!

ರಸ್ತೆ ಬದಿ, ಹೊಳೆ ದಂಡೆ, ಬೆಟ್ಟ ಗುಡ್ಡ, ಹಿತ್ತಲ ಬೇಲಿ ಬದಿಗಳಲ್ಲಿಗುಟ್ಟಾಗಿ ಅರಳುವ ಈ ಹೂವುಗಳು ಒಂದಷ್ಟು ದಿನ ರಾರಾಜಿಸಿ ಬಾಡಿ ಹೋಗುತ್ತವೆ. ಕೊರೊನಾ ವೈರಸ್‌ ಚಿತ್ರವನ್ನೇ ಹೋಲುವ ಇವುಗಳು ವಿವಿಧ ಬಣ್ಣಗಳಲ್ಲಿ ಕಂಗೊಳಿಸಿ ಮನಸ್ಸಿಗೆ ಮುದ ನೀಡುತ್ತವೆ‌. ಬರಿ ಕಣ್ಣಿಗೆ ಗೋಚರಿಸದ ಕೊರೊನಾ ವೈರಾಣುವನ್ನು ನೈಸರ್ಗಿಕವಾಗಿ ತರುಲತೆಗಳಲ್ಲಿ ಕಂಡು ಜೀವನೋತ್ಸಾಹಹೆಚ್ಚಿಸಿಕೊಳ್ಳಲು ಅಡ್ಡಿ ಇಲ್ಲ ಎನ್ನುತ್ತಾರೆ ಮನೋವೈದ್ಯರು.

ಮಳೆ ಬಿದ್ದನಂತರ ಚಿಗುರುವ ಹಲವು ಪುಷ್ಪ ಪ್ರಭೇದಗಳು ಪುಟ್ಟಪುಟ್ಟ ಲತೆಗಳಲ್ಲಿ ತಮ್ಮ ರೂಪ,ಸಾಮ್ಯತೆಗಳಲ್ಲಿ ಭಿನ್ನಭಿನ್ನವಾಗಿ ಗೋಚರಿಸುತ್ತವೆ. ಕೆಲವೇ ದಿನ ಅರಳಿ ನಿಲ್ಲುವ ಇವುಗಳು ಕೊರೊನಾ ವೈರಸ್‌ನಂತೆ ಬೇಗ ಸಾಯುತ್ತವೆ.

ADVERTISEMENT

ಸುಬಾಬುಲ್‌ ಹೂ, ಮತ್ತಿ, ಚೌವೆ, ಬೈಸೆ ಹೂ, ಮುಟ್ಟಿದರೆ ಮುನಿ (ನಾಚಿಕೆ ಮುಳ್ಳು) ಗಿಡದ ಹೂವುಗಳು ಕೊರೊನಾ ವೈರಸ್‌ನ ರೂಪಾಂತರದಂತೆ ಕಾಣಿಸುತ್ತವೆ. ಕೆಲವು ವೃತ್ತಾಕಾರ, ಮತ್ತೆ ಕೆಲವು, ವಕ್ರವಾಗಿ ಮುಳ್ಳು ಮುಳ್ಳುಗಳ ರಚನೆಯಿಂದ ಕೂಡಿ ಆಕರ್ಷಿಸುತ್ತವೆ.

‘ಜಗತ್ತಿನ ಗಮನ ಸೆಳೆದ ಬ್ಯಾಕ್ಟೀರಿಯಾ, ವೈರಸ್‌ಗಳ ರೂಪ, ದೇಹ, ಜೀವಿತಾವಧಿ ಅರ್ಥ ಮಾಡಿಕೊಳ್ಳಲು ಜೀವ ವಿಜ್ಞಾನಿಗಳು ಜೀವನ ಪೂರ್ತಿ ವ್ಯಯಿಸಬೇಕು. ಆದರೆ, ಜನರು ಇಂತಹದ್ದನ್ನು ಅರ್ಥ ಮಾಡಿಕೊಳ್ಳಲು ಪರದಾಡಬೇಕಿಲ್ಲ. ಕೊರೊನಾ ವೈರಸ್‌ ಅನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ಸಾಮಾನ್ಯ ಜನರಿಗೆ, ಮಕ್ಕಳಿಗೆ ಕೊರೊನಾ ವೈರಾಣು ಹೋಲುವ ಪುಷ್ಪಗಳನ್ನುವೀಕ್ಷಿಸಲು ಅನುವು ಮಾಡಿಕೊಟ್ಟರೆ ಸಾಕು. ನಿಜವಾದ ವೈರಸ್‌ ಹೇಗಿರಬಹುದು ಎಂಬ ಕಲ್ಪನೆ ಅವರಲ್ಲಿ ಮೂಡುತ್ತದೆ.ಸೂಕ್ಷ ಜೀವಾಣುಗಳ ಲೋಕ ಹೇಗೆ ವಿಕಾಸಆಗುತ್ತವೆ. ಯಾವ ಆಕಾರ ತಳೆಯುತ್ತದೆ ಎಂಬ ಪರಿಕಲ್ಪನೆಯ ಹೊಳಹು ಕೂಡ ಸಿದ್ಧಿಸಲುಸಾಧ್ಯ’ ಎಂದು ಏಟ್ರೀ ತಜ್ಞ ಡಾ.ಸಿ.ಮಾದೇಗೌಡ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.