ಚಾಮರಾಜನಗರ: ನಗರಸಭೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು ಹಣ ಕೊಟ್ಟವರಿಗೆ ಮಾತ್ರ ‘ಎ’ ಖಾತಾ, ‘ಬಿ’ ಖಾತಾ ದೊರೆಯುತ್ತಿದೆ ಎಂದು ನಗರಸಭೆ ಸದಸ್ಯರು ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿದರು.
ನಗರಸಭೆ ಸಭಾಂಗಣದಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಧ್ಯವರ್ತಿಗಳ ಹಾವಳಿ ವಿಚಾರವನ್ನು ಪ್ರಸ್ತಾಪಿಸಿದ ಸದಸ್ಯರು ಕಡಿವಾಣ ಹಾಕಬೇಕು ಎಂದು ನಗರಸಭೆ ಅಧ್ಯಕ್ಷ ಸುರೇಶ್ ಅವರನ್ನು ಒತ್ತಾಯಿಸಿದರು.
ಮಧ್ಯವರ್ತಿಗಳು ಹಣದಾಸೆಗೆ ನಗರಸಭೆ ವ್ಯಾಪ್ತಿಯ ಮನೆಗಳಿಗೆ ತೆರಳಿ ಎ, ಬಿ ಖಾತೆ ಮಾಡಿಸಿಕೊಡುತ್ತೇವೆ ಎಂದು ಹಣ ವಸೂಲಿ ಮಾಡುತ್ತಿದ್ದಾರೆ. ನಗರಸಭೆಯ ಅಧಿಕಾರಿಗಳು ಕೂಡ ಮಧ್ಯವರ್ತಿಗಳ ಜೊತೆ ಶಾಮೀಲಾಗಿ ಅವರ ಕೆಲಸಗಳನ್ನು ಮಾತ್ರ ತುರ್ತು ಮಾಡಿಕೊಡುತ್ತಿದ್ದಾರೆ ಎಂದು ದೂರಿದರು.
ಸಾರ್ವಜನಿಕರ ಆಸ್ತಿಗಳಿಗೆ ಖಾತೆ ಮಾಡಿಕೊಡುವಂತೆ ನಗರಸಭೆ ಸದಸ್ಯರು ಅರ್ಜಿ ಸಲ್ಲಿಸಿದರೆ ಸ್ಪಂದಿಸುತ್ತಿಲ್ಲ. ಮಧ್ಯವರ್ತಿಗಳು ಅರ್ಜಿ ನೀಡಿದರೆ ತಕ್ಷಣ ಖಾತೆ ಮಾಡಿಕೊಡಲಾಗುತ್ತಿದೆ. ನಗರಸಭೆಯ ಕಂಪ್ಯೂಟರ್ ವಿಭಾಗದಲ್ಲಿ ಅರ್ಜಿ ಸಲ್ಲಿಕೆ ಸಂಬಂಧ ಒಟಿಪಿ ಕೇಳಿದರೆ 15 ದಿನಗಳಾದರೂ ನೀಡುತ್ತಿಲ್ಲ ಎಂದು ಸದಸ್ಯರಾದ ಖಲೀಲ್ ಉಲ್ಲಾ, ಅಬ್ರಾರ್ ಅಹಮದ್ ದೂರಿದರು.
5 ಆಸ್ತಿಗಳ ಖಾತೆ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿ 3 ವರ್ಷವಾದರೂ ಮಾಡಿಕೊಟ್ಟಿಲ್ಲ ಎಂದು ಎಂದು ಸದಸ್ಯೆ ಸುಧಾ ಆರೋಪಿಸಿದರು. ‘ನನ್ನ ವಾರ್ಡ್ ವ್ಯಾಪ್ತಿಯಲ್ಲಿರುವ ನಿವಾಸಿಗಳ ಮನೆ, ನಿವೇಶನಗಳ ಖಾತೆ ಮಾಡಿಕೊಡಲು ಅರ್ಜಿ ಸಲ್ಲಿಸಿ ತಿಂಗಳಿನಿಂದ ಅಲೆಯುತ್ತಿದ್ದರೂ ಖಾತೆ ಮಾಡಿಕೊಟ್ಟಿಲ್ಲ ಎಂದು ಸದಸ್ಯರಾದ ಕುಮುದಾ ದೂರಿದರು.
ಸದಸ್ಯರ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಅಧ್ಯಕ್ಷ ಸುರೇಶ್, ‘ಆದ್ಯತೆ ಮೇಲೆ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಿಕೊಡುವಂತೆ ಹಲವು ಬಾರಿ ಅಧಿಕಾರಿಗಳು ಹಾಗೂ ನೌಕರರಿಗೆ ಸೂಚಿಸಲಾಗಿದ್ದರೂ ದೂರುಗಳು ಕೇಳಿ ಬರುತ್ತಲೇ ಇವೆ. ಮತ್ತೊಮ್ಮೆ ದೂರುಗಳು ಬಾರದಂತೆ ಕ್ರಮ ತೆಗೆದುಕೊಳ್ಳುವುದಾಗಿ ಉತ್ತರಿಸಿದರು.
ಸದಸ್ಯ ಶಿವರಾಜ್ ಮಾತನಾಡಿ, ‘ಸಂತೇಮರಹಳ್ಳಿ ವೃತ್ತದಲ್ಲಿ ನಗರಸಭೆಯ ಕಟ್ಟಡ ಕಾಮಗಾರಿ ಪೂರ್ಣಗೊಂಡಿಲ್ಲ. ಶೀಘ್ರ ಮುಗಿಸಿ ಟೆಂಡರ್ ಕರೆದು ಬಾಡಿಗೆಗೆ ನೀಡಿ ಆದಾಯ ಬರುವ ವ್ಯವಸ್ಥೆ ಮಾಡಬೇಕು.
ಜಲಮಂಡಳಿಯಿಂದ ನಗರದಲ್ಲಿ ಪೈಪ್ ಲೈನ್ ಅಳವಡಿಕೆ ಮಾಡುವಾಗ ರಸ್ತೆಗಳನ್ನು ಹಾಳು ಮಾಡಲಾಗಿದ್ದು ಗುಂಡಿಗಳನ್ನು ಮುಚ್ಚದೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ನಿತ್ಯವೂ ಬಿದ್ದು ಗಾಯ ಮಾಡಿಕೊಲ್ಳುತ್ತಿದ್ದಾರೆ. ಕೆಲವು ವಾರ್ಡ್‌ಗಳಲ್ಲಿ ಕಾಮಗಾರಿಯೇ ಪೂರ್ಣಗೊಂಡಿಲ್ಲ ಎಂದು ಸದಸ್ಯರಾದ ರಾಘವೇಂದ್ರ, ಅಬ್ರಾರ್ ಅಹಮದ್, ಶಿವರಾಜ್, ಆರ್.ಪಿ.ನಂಜುಂಡಸ್ವಾಮಿ, ಗಾಯಿತ್ರಿ, ಆಶಾ ನಟರಾಜು ಜಲಮಂಡಳಿ ಅಧಿಕಾರಿಗಳ ವಿರುದ್ಧ ಆಕ್ಷೇಪ ವ್ಯಕ್ತಪಡಿದರು.
ಲೋಕೋಪಯೋಗಿ ಇಲಾಖೆ ವಸತಿ ಗೃಹಗಳಿಂದ ನಗರಸಭೆಗೆ ₹ 3.50 ಕೋಟಿ ಕಂದಾಯ ವಸೂಲಿ ಬಾಕಿ ಇದ್ದು ವಸೂಲಿ ಮಾಡಬೇಕು ಎಂದು ಸದಸ್ಯ ಮಹೇಶ್ ಆಗ್ರಹಿಸಿದರು. ಸದಸ್ಯೆ ಆಶಾ ನಟರಾಜ್ ಮಾತನಾಡಿ, ರಾಮಸಮುದ್ರ ಬಡಾವಣೆಯ ಮಠದ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
ಕಂದಾಯ ನಿರೀಕ್ಷಕ ಶಕೀಲ್ ಅಹಮ್ಮದ್ ಮಾತನಾಡಿ, ತಾಂತ್ರಿಕ ಸಮಸ್ಯೆಗಳಿಂದ ಸಾರ್ವಜನಿಕರಿಗೆ ಸೇವೆ ನೀಡುವಲ್ಲಿ ವಿಳಂಬವಾಗುತ್ತಿದೆ. ಶೀಘ್ರ ಸರಿಪಡಿಸಿ ಸಮರ್ಪಕ ಸೇವೆ ನೀಡಲಾಗುವುದು ಎಂದರು.
ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಮಮತಾ, ಪೌರಾಯುಕ್ತ ಎಸ್.ವಿ.ರಾಮದಾಸ್, ನಗರಸಭೆ ಸದಸ್ಯರು, ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.