ADVERTISEMENT

ಚಾಮರಾಜನಗರ: ಗುಣಮುಖರ ಸಂಖ್ಯೆ ಏರಿಕೆ, ಹೊಸ ಪ್ರಕರಣ ಇಳಿಕೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2021, 16:37 IST
Last Updated 10 ಜೂನ್ 2021, 16:37 IST
ಚಾಮರಾಜನಗರದ ಕೋವಿಡ್‌–19 ಆಸ್ಪತ್ರೆ
ಚಾಮರಾಜನಗರದ ಕೋವಿಡ್‌–19 ಆಸ್ಪತ್ರೆ   

ಚಾಮರಾಜನಗರ: ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದು, ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ವಾರದಿಂದೀಚೆಗೆ ಸಾವಿನ ಸಂಖ್ಯೆಯೂ ಕಡಿಮೆಯಾಗುತ್ತಿದೆ.

ಜಿಲ್ಲೆಯಲ್ಲಿ ಗುರುವಾರ 179 ಪ್ರಕರಣಗಳು ದೃಢಪಟ್ಟಿವೆ. ದಾಖಲೆಯ 537 ಜನರು ಗುಣಮುಖರಾಗಿದ್ದಾರೆ. ಬುಧವಾರ ಸಂಜೆ 6 ಗಂಟೆಯಿಂದ ಶುಕ್ರವಾರ ಸಂಜೆ 6 ಗಂಟೆಯವರೆಗಿನ ಅವಧಿಯಲ್ಲಿ ಇಬ್ಬರು ಮೃತಪಟ್ಟಿದ್ದೂ, ಎರಡೂ ಕೋವಿಡ್‌ಯೇತರ ಪ್ರಕರಣ ಎಂದು ಕೋವಿಡ್‌ ಆಸ್ಪತ್ರೆ ಆಡಳಿತ ತಿಳಿಸಿದೆ.

ಗುಣಮುಖರಾದವರ ಸಂಖ್ಯೆ ಹೆಚ್ಚಾಗಿರುವುದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 1,934ಕ್ಕೆ ಇಳಿದಿದೆ. ಈ ಪೈಕಿ 56 ಮಂದಿ ಐಸಿಯುನಲ್ಲಿದ್ದಾರೆ. 76 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. ಉಳಿದವರು ಆಸ್ಪತ್ರೆ ಹಾಗೂ ಕೋವಿಡ್‌ ಕೇರ್‌ ಕೇಂದ್ರಗಳಲ್ಲಿ ಇದ್ದಾರೆ.

ADVERTISEMENT

ಜಿಲ್ಲೆಯ ಒಟ್ಟು ಪ‍್ರಕರಣಗಳ ಸಂಖ್ಯೆ 29,006ಕ್ಕೆ ಏರಿದೆ. ಗುಣಮುಖರಾದವರ ಸಂಖ್ಯೆ26,594ಕ್ಕೆ‌ಹಿಗ್ಗಿದೆ. ಗುರುವಾರ 1,675 ಕೋವಿಡ್‌ ಪರೀಕ್ಷಾ ವರದಿ ಬಂದಿದ್ದು, 1499 ವರಿಗಳು ನೆಗೆಟಿವ್‌ ಬಂದಿವೆ. 176 ಮಂದಿಗೆ ಸೋಂಕು ಇರುವುದು ಖಚಿತವಾಗಿದೆ. ಹಳೆಯ ಮೂರು ಪ್ರಕರಣಗಳನ್ನು ಗುರುವಾರದ ಪ್ರಕರಣಗಳಿಗೆ ಸೇರಿಸಲಾಗಿದ್ದು, ಒಟ್ಟು ಸಂಖ್ಯೆ 179 ತಲುಪಿದೆ.

179 ಸೋಂಕಿತರಲ್ಲಿ ಚಾಮರಾಜನಗರ ತಾಲ್ಲೂಕಿನ 68, ಗುಂಡ್ಲುಪೇಟೆಯ 45, ಕೊಳ್ಳೇಗಾಲದ 29, ಹನೂರಿನ 8 ಹಾಗೂ ಯಳಂದೂರು ತಾಲ್ಲೂಕಿನ ಎಂಟು ಮಂದಿ ಸೇರಿದ್ದಾರೆ. ಇಬ್ಬರು ಹೊರ ಜಿಲ್ಲೆಯವರಿದ್ದಾರೆ.

ಗುಣಮುಖರಾದ 537 ಮಂದಿಯ ಪೈಕಿ 10 ಜನರು ಆಸ್ಪತ್ರೆಯಲ್ಲಿದ್ದರು. ಒಂಬತ್ತು ಮಂದಿ ಹೋಂ ಐಸೊಲೇಷನ್‌ನಲ್ಲಿದ್ದರು. ಕೋವಿಡ್‌ ಕೇರ್‌ ಸೆಂಟರ್‌ನಲ್ಲಿದ್ದ 518 ಜನರು ಗುರುವಾರ ಮನೆಗೆ ತೆರಳಿದ್ದಾರೆ.

ಗುಣಮುಖರಾದವರಲ್ಲಿ ಚಾಮರಾಜನಗರ ತಾಲ್ಲೂಕಿನ 172, ಗುಂಡ್ಲುಪೇಟೆಯ 112, ಕೊಳ್ಳೇಗಾಲದ 91, ಹನೂರಿನ 129 ಹಾಗೂ ಯಳಂದೂರು ತಾಲ್ಲೂಕಿನ 30 ಹಾಗೂ ಹೊರ ಜಿಲ್ಲೆಯ ಮೂವರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.