ADVERTISEMENT

ಚಾಮರಾಜನಗರ | ಅನ್‌ಲಾಕ್‌ ಆದರೂ ಚೇತರಿಸದ ಮದ್ಯ ವಹಿವಾಟು

ಸಂಕಷ್ಟದಲ್ಲಿ ಮಾಲೀಕರು, ಕಾರ್ಮಿಕರು, ಸಹಜ ಸ್ಥಿತಿಗೆ ಬರಲು ಇನ್ನಷ್ಟು ಸಮಯ ಬೇಕು

ಸೂರ್ಯನಾರಾಯಣ ವಿ
Published 27 ಆಗಸ್ಟ್ 2020, 20:30 IST
Last Updated 27 ಆಗಸ್ಟ್ 2020, 20:30 IST
ಚಾಮರಾಜನಗರದಲ್ಲಿರುವ ಮದ್ಯದ ಅಂಗಡಿಯೊಂದರ ನೋಟ
ಚಾಮರಾಜನಗರದಲ್ಲಿರುವ ಮದ್ಯದ ಅಂಗಡಿಯೊಂದರ ನೋಟ   

ಚಾಮರಾಜನಗರ: ರಾಜ್ಯ ಸರ್ಕಾರವು ಮದ್ಯದ ಅಂಗಡಿಗಳನ್ನು ತೆರೆಯಲು (ಮೇ 4ರಿಂದ) ಅವಕಾಶ ನೀಡಿ ಮೂರೂವರೆ ತಿಂಗಳು ಕಳೆದಿದ್ದರೂ ಜಿಲ್ಲೆಯಲ್ಲಿ ಮದ್ಯದ ವಹಿವಾಟು ಚೇತರಿಕೆ ಕಂಡಿಲ್ಲ.

ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳಲ್ಲೇ ಮದ್ಯಪಾನ ಮಾಡಲು ಹಾಗೂ ಆಹಾರ ಸೇವಿಸಲು ಸರ್ಕಾರ ಇನ್ನೂ ಅವಕಾಶ ನೀಡಿಲ್ಲ. ಸದ್ಯ ಪಾರ್ಸೆಲ್‌ ಮಾತ್ರ ನೀಡಲಾಗುತ್ತಿದೆ ಇದರಿಂದ ವ್ಯಾಪಾರ ಹೆಚ್ಚಾಗಿಲ್ಲ ಎಂದು ಹೇಳುತ್ತಾರೆ ಮಾಲೀಕರು. ಜೊತೆಗೆಅನ್‌ಲಾಕ್ ಪ್ರಕ್ರಿಯೆ ಜಾರಿಯಲ್ಲಿದ್ದರೂ ನಗರ, ಪಟ್ಟಣ ಪ್ರದೇಶಗಳಲ್ಲಿ ಜನರ ಓಡಾಟ ಕಡಿಮೆ ಇರುವುದರಿಂದ ಮದ್ಯದ ಅಂಗಡಿಗಳಿಗೆ ವ್ಯಾಪಾರ ಕಡಿಮೆ. ಈ ಕಾರಣಗಳಿಂದಾಗಿ ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳ ಮಾಲೀಕರು ಹಾಗೂ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಅಂತರರಾಜ್ಯ ಸಂಚಾರಕ್ಕೆ ರಾಜ್ಯ ಸರ್ಕಾರ ಈಗ ಅನುಮತಿ ನೀಡಿರುವುದರಿಂದ, ಪ್ರವಾಸಿಗರು ಹಾಗೂ ಸಾರ್ವಜನಿಕರ ಓಡಾಟ ಜಾಸ್ತಿಯಾದರೆ ವ್ಯಾಪಾರ ಹೆಚ್ಚಬಹುದು ಎಂಬ ನಿರೀಕ್ಷೆಯಲ್ಲಿ ಮಾಲೀಕರಿದ್ದಾರೆ.

ADVERTISEMENT

ಒಂದು ಕ್ಲಬ್‌ ಸೇರಿದಂತೆ ಜಿಲ್ಲೆಯಲ್ಲಿ 125 ಮದ್ಯದ ಅಂಗಡಿಗಳು ಇವೆ. ಎಲ್ಲ ಕಡೆಯೂ ಪಾರ್ಸೆಲ್‌ ಮಾತ್ರ ಲಭ್ಯವಿದೆ. ಎಂಆರ್‌ಪಿಯಷ್ಟೇ ದರವನ್ನು ಪಡೆಯಲಾಗುತ್ತಿದೆ.

ಶೇ 30ರಷ್ಟು ವ್ಯಾಪಾರ: ‘ಮಾರ್ಚ್‌ನಿಂದ ಸರಿಯಾಗಿ ವಹಿವಾಟು ನಡೆದಿಲ್ಲ. ಲಾಕ್‌ಡೌನ್‌ ಅವಧಿಗೂ ಮೊದಲಿನ ವ್ಯಾಪಾರಕ್ಕೆ ಹೋಲಿಸಿದರೆ ಈಗ ಶೇ 30ರಷ್ಟು ಮಾರಾಟ ಇದೆಯಷ್ಟೇ. ಮೊದಲಿನ ಸ್ಥಿತಿಗೆ ಬರಲು ಇನ್ನೂ ಕೆಲವು ತಿಂಗಳು ಬೇಕಾಗಬಹುದು’ ಎಂದು ನಗರದ ಸತ್ಯಮಂಗಲ ರಸ್ತೆಯಲ್ಲಿರುವ ರತ್ನೇಶ್ವರಿ ರೆಸಿಡೆನ್ಸಿ ಮಾಲೀಕ ಶಿವಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಗ್ರಾಮೀಣ ಭಾಗದಿಂದ ಜನರು ನಗರಕ್ಕೆ ಬರುತ್ತಿಲ್ಲ. ಪ್ರವಾಸಿಗರ ಓಡಾಟವೂ ಇಲ್ಲ. ನಮ್ಮ ಮಳಿಗೆ, ರೆಸ್ಟೋರೆಂಟ್‌ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇದೆ. ಅಂತರರಾಜ್ಯ ಸಂಚಾರ ಮಾಡುವವರೇ ಗ್ರಾಹಕರು. ಐದಾರು ತಿಂಗಳಿಂದ ಗಡಿಯೇ ಬಂದ್‌ ಆಗಿದೆ. ಹಾಗಾಗಿ, ವ್ಯಾಪಾರವೇ ಇಲ್ಲ. ಹೋಟೆಲನ್ನು ನಾವು ತೆರೆದೇ ಇಲ್ಲ’ ಎಂದು ಅವರು ಹೇಳಿದರು.

‘ಆರಂಭದ ಕೆಲವು ತಿಂಗಳು ಎಲ್ಲ ಸಿಬ್ಬಂದಿಗೆ ಸಂಬಳ ಕೊಟ್ಟಿದ್ದೆವು. ಈಗ ವ್ಯಾಪಾರ ಕಡಿಮೆ. ಸಂಬಳ ಕೊಡುವುದಕ್ಕೆ ಆಗುತ್ತಿಲ್ಲ’ ಎಂದು ಅವರು ಹೇಳಿದರು.

ಹಲವು ತಿಂಗಳುಗಳೇ ಬೇಕು:‘ಕೋವಿಡ್‌ ಆರಂಭಕ್ಕೂ ಮೊದಲಿಗೆ ಹೋಲಿಸಿದರೆ ಈಗ ಶೇ 25ರಷ್ಟೇ ವಹಿವಾಟು ನಡೆಯುತ್ತಿದೆ. ಅನ್‌ಲಾಕ್‌ ಪ್ರಕ್ರಿಯೆ ಆರಂಭವಾದ ಬಳಿಕ ಸ್ವಲ್ಪ ಹೆಚ್ಚಾಗಿದೆ. ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳಿಗೆ ವಿಧಿಸಲಾಗಿರುವ ನಿರ್ಬಂಧ ಇನ್ನೂ ಸಡಿಲಿಕೆ ಮಾಡಿಲ್ಲ. ಜನರು ಬರುವುದಕ್ಕೆ ಹೆದರುತ್ತಿದ್ದಾರೆ. ಕೆಲಸಗಳಿಗೆ ಅನಿವಾರ್ಯವಾಗಿ ಬರಲೇಬೇಕಾದವರು ಮಾತ್ರ ಬರುತ್ತಿದ್ದಾರೆ’ ಎಂದು ನಿಜಗುಣ ರೆಸಿಡೆನ್ಸಿ ಮಾಲೀಕ ನಿಜಗುಣ ರಾಜು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಂತರರಾಜ್ಯ ಸಂಚಾರ ಈಗ ಆರಂಭವಾಗಿದೆ. ಹಾಗಾಗಿ, ವ್ಯಾಪಾರ ಇನ್ನು ಹೆಚ್ಚಾಗಬಹುದು. ಹಾಗಿದ್ದರೂ, ಮೊದಲಿನ ಸ್ಥಿತಿಗೆ ಬರಲು ಹಲವು ತಿಂಗಳುಗಳೇ ಬೇಕು’ ಎಂದು ಅವರು ಹೇಳಿದರು.

‘ಎಲ್ಲ ಬಾರ್‌, ರೆಸ್ಟೋರೆಂಟ್‌ಗಳ ಮಾಲೀಕರಿಗೆ ತುಂಬಾ ನಷ್ಟವಾಗಿದೆ. ನಮಗೆ ಅನುಕೂಲ ಕಲ್ಪಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಕೆಲವು ವಿನಾಯಿತಿ ನೀಡುವ ಭರವಸೆಯನ್ನೂ ನೀಡಿದೆ. ವಿದ್ಯುತ್‌ ಬಿಲ್‌ ವಿನಾಯಿತಿ ಮಾಡಲಾಗಿದೆ ಎಂದು ಸರ್ಕಾರ ಹೇಳಿದೆ. ಆದರೆ, ಸೆಸ್ಕ್‌ನವರು ಪಾವತಿಸಬೇಕು ಎಂದು ಹೇಳುತ್ತಿದ್ದಾರೆ. ಕೇಂದ್ರ ಸರ್ಕಾರದ ನಿರ್ದೇಶನಗಳಿಗಾಗಿ ಕಾಯುತ್ತಿದ್ದೇವೆ’ ಎಂದು ಹೇಳಿದರು.

‘ಕೋವಿಡ್‌–19 ತಡೆಗೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಲಾಗುತ್ತಿದೆ. ಆದರೆ, ರೆಸ್ಟೋರೆಂಟ್‌ಗಳಲ್ಲಿ ಮದ್ಯಪಾನ ಹಾಗೂ ಆಹಾರ ಸೇವನೆಗೆ ಅವಕಾಶ ಇಲ್ಲದಿ‌ರುವುದರಿಂದ ವ್ಯಾಪಾರ ಮಂದಗತಿಯಲ್ಲಿ ಸಾಗುತ್ತಿದೆ. ಇದರಿಂದಾಗಿ ತೊಂದರೆಯಾಗಿದೆ’ ಎಂದು ಕೊಳ್ಳೇಗಾಲದ ಮದ್ಯದ ಅಂಗಡಿಯೊಂದರ ಮಾಲೀಕ ನಾಗಣ್ಣ ಅವರು ‘ಪ್ರಜಾವಾಣಿ’ಗೆ ಹೇಳಿದರು.

ಬಿಯರ್‌ ಮಾರಾಟ ಶೇ 40 ಕುಸಿತ

ಜಿಲ್ಲೆಯ ಮದ್ಯ ಮಾರಾಟದ ಸದ್ಯದ ಸ್ಥಿತಿಗತಿಗಳ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಅಬಕಾರಿ ಇಲಾಖೆಯ ಉಪ ಆಯುಕ್ತ ಕೆ.ಎಸ್‌.ಮುರಳಿ ಅವರು, ‘ಲಾಕ್‌ಡೌನ್‌ ನಂತರ ಮದ್ಯದ ಮಾರಾಟಕ್ಕೆ ಅನುವು ಮಾಡಿದ ಬಳಿಕ ಮದ್ಯ ಹಾಗೂ ಬಿಯರ್‌ ಮಾರಾಟದಲ್ಲಿ ಕುಸಿತವಾಗಿರುವುದು ನಿಜ. ಬಿಯರ್‌ ಮಾರಾಟ ಶೇ 40ರಷ್ಟು ಇಳಿಕೆಯಾಗಿದೆ. ಆದರೆ, ಮದ್ಯ ಮಾರಾಟ ಆ ಪ್ರಮಾಣದಲ್ಲಿ ಕುಸಿದಿಲ್ಲ. ಒಂದು ತಿಂಗಳು ವ್ಯಾಪಾರ ಕಡಿಮೆಯಾದರೆ, ಇನ್ನೊಂದು ತಿಂಗಳು ಜಾಸ್ತಿಯಾಗಿದೆ. ಆದರೆ, ಈ ವರ್ಷ ಮಾರಾಟದಲ್ಲಿ ಪ್ರಗತಿಯಾಗಿಲ್ಲ’ ಎಂದು ಹೇಳಿದರು.

‘ಜನರ ಓಡಾಟ ಕಡಿಮೆಯಾಗಿದೆ. ಪ್ರವಾಸಿಗರ ಸಂಚಾರವೂ ಇಲ್ಲದಿರುವುದು ಇದಕ್ಕೆ ಕಾರಣ. ಮಾರಾಟ ಮೊದಲಿನ ಸ್ಥಿತಿಗೆ ಬರಲು ಇನ್ನೂ ಸ್ವಲ್ಪ ಸಮಯ ಬೇಕಾಗಬಹುದು’ ಎಂದು ಅವರು ಹೇಳಿದರು.

‘ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳಿಗೆ ಹೇರಲಾಗಿರುವ ನಿರ್ಬಂಧವನ್ನು ಸಡಿಲಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳಬೇಕು. ಈ ಸಂಬಂಧ ನಮಗೆ ಇದುವರೆಗೆ ಸೂಚನೆ ಬಂದಿಲ್ಲ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.