ADVERTISEMENT

ಕೋವಿಡ್‌ ಪರಿಸ್ಥಿತಿ ನಿಯಂತ್ರಣದಲ್ಲಿ: ಸಚಿವ ಎಸ್‌.ಟಿ.ಸೋಮಶೇಖರ್‌

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2021, 10:28 IST
Last Updated 6 ಆಗಸ್ಟ್ 2021, 10:28 IST
ಸಚಿವ ಎಸ್‌.ಟಿ.ಸೋಮಶೇಖರ್‌ ಹಾಗೂ ಶಾಸಕ ಎನ್‌.ಮಹೇಶ್‌ ಅವರು ಶುಕ್ರವಾರ ಚಾಮರಾಜನಗರದ ಚಾಮರಾಜೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು
ಸಚಿವ ಎಸ್‌.ಟಿ.ಸೋಮಶೇಖರ್‌ ಹಾಗೂ ಶಾಸಕ ಎನ್‌.ಮಹೇಶ್‌ ಅವರು ಶುಕ್ರವಾರ ಚಾಮರಾಜನಗರದ ಚಾಮರಾಜೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು   

ಚಾಮರಾಜನಗರ: ‘ರಾಜ್ಯದಲ್ಲಿ ಕೋವಿಡ್‌ ಹರಡುವಿಕೆ ತಡೆಗಟ್ಟಲು ಸಾರ್ವಜನಿಕರ ಸಹಕಾರ ಅತ್ಯಗತ್ಯ. ಸದ್ಯ ರಾಜ್ಯದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಯಾವುದೇ ಕಾರಣಕ್ಕೂ ರಾಜ್ಯದಾದ್ಯಂತ ಸಂಪೂರ್ಣ ಲಾಕ್‌ಡೌನ್ ಹೇರುವುದಿಲ್ಲ’ ಕೋವಿಡ್‌ ನಿರ್ವಹಣೆಯ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಶುಕ್ರವಾರ ಹೇಳಿದರು.

ಕೋವಿಡ್‌ ಪರಿಸ್ಥಿತಿ ಹಾಗೂ ನೆರೆ ನಿರ್ವಹಣೆಗೆ ಸಂಬಂಧಿಸಿದಂತೆ ಜಿಲ್ಲೆಯ ಉಸ್ತುವಾರಿಯನ್ನು ಹಂಚಿಕೆ ಮಾಡಿದ ನಂತರ ಮೊದಲ ಬಾರಿಗೆ ನಗರಕ್ಕೆ ಭೇಟಿ ನೀಡಿದ ಸೋಮಶೇಖರ್‌ ಅವರು ಚಾಮರಾಜೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೋವಿಡ್‌ ಮೂರನೇ ಅಲೆ ಬರಲಿದೆ ಎಂದು ಹೇಳಲಾಗುತ್ತಿದೆ. ಇದರ ತಡೆಗೆ ಜನರು ಸಹಕಾರ ನೀಡಬೇಕು. ಕೋವಿಡ್‌ ಮತ್ತು ಪ್ರವಾಹ ಪರಿಸ್ಥಿತಿ ನಿರ್ವಹಣೆಯ ಜವಾಭ್ದಾರಿಯನ್ನು ಮುಖ್ಯಮಂತ್ರಿ ಅವರು ನೀಡಿದ್ದಾರೆ. ಮೂರ್ನಾಲ್ಕು ದಿನಗಳಲ್ಲಿ ಕೋವಿಡ್‌ ಹಾಗೂ ನೆರೆ ಪರಿಸ್ಥಿತಿ ಬಗ್ಗೆ ಮುಖ್ಯಮಂತ್ರಿಯವರಿಗೆ ವರದಿ ಸಲ್ಲಿಸಲಾಗುವುದು’ ಎಂದು ಹೇಳಿದರು.

ADVERTISEMENT

ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರು ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಎಸ್‌.ಟಿ.ಸೋಮಶೇಖರ್‌ ಅವರು, ‘ಅವರು ಹಿರಿಯ ರಾಜಕಾರಣಿ.50 ವರ್ಷಗಳ ರಾಜಕೀಯದಲ್ಲಿ ಅನೇಕ ಏಳು ಬೀಳು ಕಂಡಿದ್ದಾರೆ. ಅವರು ಕಂದಾಯ ಸಚಿವರಾಗಿದ್ದಾಗ ಬೆಂಗಳೂರಿನಲ್ಲಿ 18 ಕಿ.ಮೀ ವ್ಯಾಪ್ತಿ ಸರ್ಕಾರಿ ಭೂಮಿಯನ್ನು ಕ್ರಮಬದ್ಧಗೊಳಿಸುವ ಐತಿಹಾಸಿಕ ಕ್ರಮ ಕೈಗೊಂಡಿದ್ದರು. 94 ಸಿಸಿ ಕಾಯ್ದೆ ಜಾರಿಗೆ ತಂದು ಬೇಕಾದಷ್ಟು ಜನರಿಗೆ ಅನುಕೂಲ ಮಾಡಿದ್ದಾರೆ. ಆರೋಗ್ಯ ಹಾಗೂ ವಯಸ್ಸಿನ ದೃಷ್ಟಿಯಿಂದ ತಮ್ಮ ಅವಧಿ ಮುಗಿದ ನಂತರ ಚುನಾವಣಾ ರಾಜಕೀಯದಿಂದ ನಿವೃತ್ತಿ ಆಗಲಿದ್ದಾರೆ’ ಎಂದರು.

ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಅವರು ಬಿಜೆಪಿಗೆ ಸೇರ್ಪಡೆಯಾಗಿರುವುದರ ಬಗ್ಗೆ ಕೇಳಿದ ಪ್ರಶ್ನೆಗೆ, ‘ಮಹೇಶ್ ಅವರು ಐದಾರು ವರ್ಷಗಳಿಂದ ಪರಿಚಯ. ಸದನದಲ್ಲಿ ಯಾವುದೇ ವಿಷಯದ ಬಗ್ಗೆ‌ಯಾದರೂ ಗಂಟೆ ಗಟ್ಟಲೆ ಮಾತನಾಡುತ್ತಾರೆ. ಅವರ ಸಾಮರ್ಥ್ಯವನ್ನು ಬಳಸಿಕೊಂಡು ಬಿಜೆಪಿ ಸದೃಢವಾಗಿ ಬೆಳೆಯಲು ಅವಕಾಶವಿದೆ’ ಎಂದು ಉತ್ತರಿಸಿದರು.

ಶಾಸಕ ಎನ್.ಮಹೇಶ್, ನಗರಸಭಾ ಅಧ್ಯಕ್ಷೆ ಆಶಾ, ಕೇಂದ್ರ ಬರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸುಂದರ್, ಚುಡಾ ಅಧ್ಯಕ್ಷ ಶಾಂತಮೂರ್ತಿ ಕುಲಗಾಣ ಇತರರು ಇದ್ದರು.

ಸಚಿವ ಸ್ಥಾನಕ್ಕೆ ಲಾಬಿ ಮಾಡಿಲ್ಲ: ಎನ್‌.ಮಹೇಶ್‌

ಬಿಜೆಪಿ ಸೇರ್ಪಡೆಗೆ ಸಂಬಂಧಿಸಿದಂತೆ ಮುಖಂಡರನ್ನು ಭೇಟಿ ಮಾಡಲು ದೆಹಲಿಗೆ ಹೋಗಿದ್ದೆನೆಯೇ ವಿನಾ, ಸಚಿವ ಸ್ಥಾನಕ್ಕೆ ಲಾಬಿ ಮಾಡಲು ಅಲ್ಲ ಎಂದು ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಅವರು ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರ ಭೇಟಿ ಸೌಹಾರ್ದವಾಗಿತ್ತು. ಯಾವುದೇ ಷರತ್ತು ಒಡ್ಡದೆ ಬಿಜೆಪಿಗೆ ಸೇರಿದ್ದೇನೆ. ನನಗೆ ಮಂತ್ರಿ ಸ್ಥಾನ ಕೊಡುವುದು ಹಾಗೂ ಹೇಗೆ ನಡೆಸಿಕೊಳ್ಳಬೇಕು ಎಂಬುದು ಪಕ್ಷಕ್ಕೆ ಬಿಟ್ಟ ವಿಚಾರ. ನಾನು ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿದ್ದೇನೆ’ ಎಂದರು.

‘ಬಾಯಲ್ಲಿ ಭೀಮ, ಹೃದಯದಲ್ಲಿ ರಾಮ, ಕ್ಷೇತ್ರದ ಜನತೆಗೆ ಪಂಗನಾಮ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಅವರು ಟೀಕಿಸಿರುವುದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಎನ್‌.ಮಹೇಶ್‌ ಅವರು, ‘ಧ್ರುವನಾರಾಯಣ ಅವರ ಬಗ್ಗೆ ಗೌರವವಿದೆ. ಇತ್ತೀಚೆಗೆ ವೈಯಕ್ತಿಕವಾಗಿ ಮಾತನಾಡುತ್ತಿದ್ದಾರೆ. ಅದನ್ನು ಮಾಡಬಾರದು ಎಂದು ಅವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ವೈಯಕ್ತಿಕವಾಗಿ ಮಾತನಾಡಲು ನನಗೂ ಬೇಕಾದಷ್ಟು ವಿಷಯಗಳಿವೆ. ಗೌರವ ಕೊಡುವುದನ್ನು ಅವರು ರೂಢಿಸಿಕೊಳ್ಳಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.