ADVERTISEMENT

ಅಸ್ಪೃಶ್ಯರಂತೆ ಕಾಣಬೇಡಿ: ಕೋವಿಡ್‌ನಿಂದ ಗುಣಮುಖರಾದ ವ್ಯಕ್ತಿ

ಕೋವಿಡ್‌ ಗೆದ್ದವರ ಕಥೆಗಳು

​ಪ್ರಜಾವಾಣಿ ವಾರ್ತೆ
Published 20 ಜುಲೈ 2020, 15:20 IST
Last Updated 20 ಜುಲೈ 2020, 15:20 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಸೋಂಕಿನಿಂದ ಗುಣಮುಖರಾಗಿದ್ದರೂ ಸುತ್ತಮುತ್ತಲಿನ ಜನರು ಈಗಲೂ ವಿಚಿತ್ರವಾಗಿ ನೋಡುತ್ತಿದ್ದಾರೆ. ಇದರಿಂದ ಮನಸ್ಸಿಗೆ ನೋವಾಗುತ್ತಿದೆ. ಕಾಯಿಲೆ ಕೊಟ್ಟ ವೇದನೆಗಿಂತಲೂ ಜನರು ನೀಡುತ್ತಿರುವ ನೋವೇ ಹೆಚ್ಚಾಗಿದೆ ಎಂದು ಹೇಳುತ್ತಾರೆ ಕೊಳ್ಳೇಗಾಲದ ರತ್ನ ಅವರು.

***

ಕೊಳ್ಳೇಗಾಲ: ಕೋವಿಡ್-19 ಗಂಭೀರ ಕಾಯಿಲೆಯಲ್ಲ. ಸಾಮಾನ್ಯ ರೋಗ. ಅದಕ್ಕೆ ಔಷಧವೇ ಬೇಕಿಲ್ಲ, ಧೈರ್ಯವೇ ಮದ್ದು. ನಾವು ದೇಶದ್ರೋಹಿಗಳಲ್ಲ ಬೇರೆಯವರಿಗೆ ಕೇಡೂ ಬಗೆದಿಲ್ಲ. ಆದರೆ, ಜನರು ಸೋಂಕಿತರನ್ನು ರೋಗಿಗಳಂತೆ ಕಾಣದೆ, ಕಳಂಕಿತರಂತೆ ನೋಡುತ್ತಿದ್ದಾರೆ. ಇದು ಕಾಯಿಲೆ ಬಂದಿರುವುದಕ್ಕಿಂತಲೂ ಹೆಚ್ಚು ಬೇಸರ ತರಿಸುತ್ತಿದೆ.

ADVERTISEMENT

ಹತ್ತು ದಿನಗಳ ಹಿಂದೆ ಸಣ್ಣ ಪ್ರಮಾಣದಲ್ಲಿ ಜ್ವರ ಹಾಗೂ ನೆಗಡಿ ಬಂತು. ಸಾರ್ವಜನಿಕ ಉಪ ವಿಭಾಗ ಆಸ್ಪತ್ರೆಗೆ ಹೋಗಿ ವೈದ್ಯರಿಗೆ ಹೇಳಿದೆ. ವೈದ್ಯರು ಕೋವಿಡ್-19 ಪರೀಕ್ಷೆ ಮಾಡಿಸಿ ಎಂದು ಸಲಹೆ ನೀಡಿ ಜ್ವರಕ್ಕೆ ಮಾತ್ರೆ ಕೊಟ್ಟರು. ಜ್ವರ ಒಂದೇ ದಿನಕ್ಕೆ ಹೋಗಿ ಗುಣಮುಖವಾದೆ. ನಂತರ ಪರೀಕ್ಷೆ ಮಾಡಿಸಿ ಮನೆಯಲ್ಲೇ ಉಳಿದೆ. ಮೂರು ದಿನಗಳ ನಂತರ ದೂರವಾಣಿ ಮೂಲಕ ಕರೆ ಮಾಡಿ ನಿಮಗೆ ಕೋವಿಡ್‌–19 ಧೃಡಪಟ್ಟಿದೆ.

ನಾನು ಯಾವುದೇ ರಾಜ್ಯಕ್ಕೆ ಮತ್ತು ಯಾವುದೇ ಜಿಲ್ಲೆಗೂ ಹೋಗಿರಲಿಲ್ಲ. ಅದರೂ ನನಗೆ ಹೇಗೆ ಸೋಂಕು ತಗುಲಿತು ಎಂದು ಯೋಚನೆ ಮಾಡಿದೆ. ನನಗೆ ಜ್ವರ ನೆಗಡಿ ವಾಸಿಯಾಗಿತ್ತು. ರೋಗ ಲಕ್ಷಣಗಳೂ ಇರಲಿಲ್ಲ. ಆದರೂ ನಾನು ಕೋವಿಡ್ ಕೇಂದ್ರಕ್ಕೆ ಹೋಗಲು ಮುಂದಾದೆ.

ಬಾಗಿಲು ತೆರೆದು ಹೊರಗೆ ಬಂದಾಗ ಅಕ್ಕಪಕ್ಕದ ಜನರು ಮತ್ತು ಸಾರ್ವಜನಿಕರು ನನ್ನನ್ನು ಅಸ್ಪೃಶ್ಯಳಂತೆ ಕಾಣುತ್ತಿದ್ದರು. ನನಗೆ ಸೋಂಕಿನ ಭಯ ಇಲ್ಲದಿದ್ದರೂ, ಜನರ ವರ್ತನೆಯಿಂದ ಆತಂಕ ಹೆಚ್ಚಾಯಿತು.

ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ಐದು ದಿನಗಳ ಕಾಲ ಮಾತ್ರ ಇದ್ದೆ. ವೈದ್ಯರು ಮತ್ತು ನರ್ಸ್‍ಗಳು ನಮ್ಮನ್ನು ಉತ್ತಮವಾಗಿ ನೋಡಿಕೊಂಡು ಸಮಯಕ್ಕೆ ಸರಿಯಾಗಿ ಊಟ, ಮಾತ್ರೆಗಳನ್ನು ನೀಡುತ್ತಿದ್ದರು.

ಕೊರೊನಾ ಬಂದವರಿಗೆ ಸರಿಯಾಗಿ ಊಟ ನೀಡುವುದಿಲ್ಲ ಮತ್ತು ನೋಡಿಕೊಳ್ಳುವುದಿಲ್ಲ ಎಂದು ದೃಶ್ಯ ಮಾಧ್ಯಮಗಳಲ್ಲಿ ಸುದ್ದಿ ನೋಡಿದ್ದ ನನಗೆ, ಅದು ಸುಳ್ಳು ಎಂಬುದು ಗೊತ್ತಾಯಿತು. ವೈದ್ಯಕೀಯ ಸಿಬ್ಬಂದಿ ಹಾಗೂ ಇತರ ಅಧಿಕಾರಿಗಳು ಉತ್ತಮ ಬೆಂಬಲ ನೀಡುತ್ತಿದ್ದಾರೆ. ಕೋವಿಡ್‌–19 ಪರೀಕ್ಷೆಯನ್ನು ಮತ್ತೆ ಮಾಡಿಸಿದಾಗ ನೆಗೆಟಿವ್ ಬಂತು. ನಂತರ ನನ್ನನ್ನು ಅಲ್ಲಿಂದ ಮನೆಗೆ ಕಳುಹಿಸಿದರು.

ಆದರೆ, ಸುತ್ತಮುತ್ತಲಿನ ಜನರು ಈಗಲೂ ವಿಚಿತ್ರವಾಗಿ ನೋಡುತ್ತಿದ್ದಾರೆ. ಇದರಿಂದ ಮನಸ್ಸಿಗೆ ನೋವಾಗುತ್ತಿದೆ. ಕಾಯಿಲೆ ಕೊಟ್ಟ ವೇದನೆಗಿಂತಲೂ ಸುತ್ತಮುತ್ತಲಿನ ಜನರು ನೀಡುತ್ತಿರುವ ನೋವೇ ಹೆಚ್ಚಾಗಿದೆ.

ನಿರೂಪಣೆ: ಅವಿನ್ ಪ್ರಕಾಶ್ ವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.