ADVERTISEMENT

ಚಾಮರಾಜನಗರ | ವಾರಾಂತ್ಯ ಕರ್ಫ್ಯೂ; ನಿಯಮ ಉಲ್ಲಂಘಿಸಿದವರಿಗೆ ದಂಡದ ಬಿಸಿ

ವಾರಾಂತ್ಯ ಕರ್ಫ್ಯೂ; ಜನ ಸಂಚಾರ ವಿರಳ, ಅಂಗಡಿ ಮುಂಗಟ್ಟುಗಳು ಬಂದ್‌

​ಪ್ರಜಾವಾಣಿ ವಾರ್ತೆ
Published 8 ಜನವರಿ 2022, 14:15 IST
Last Updated 8 ಜನವರಿ 2022, 14:15 IST
ವಾರಾಂತ್ಯ ಕರ್ಫ್ಯೂನ ಮೊದಲ ದಿನವಾದ ಶನಿವಾರ ಕೂಲಿ ಕೆಲಸಕ್ಕಾಗಿ ಮಹಿಳೆಯರು ಹೊರಟಿದ್ದ ದೃಶ್ಯ ಚಾಮರಾಜನಗರಕ್ಕೆ ಸಮೀಪದ ಬೂದಿತಿಟ್ಟು ಕ್ರಾಸ್‌ನಲ್ಲಿ ಶನಿವಾರ ಬೆಳಿಗ್ಗೆ ಕಂಡು ಬಂತು
ವಾರಾಂತ್ಯ ಕರ್ಫ್ಯೂನ ಮೊದಲ ದಿನವಾದ ಶನಿವಾರ ಕೂಲಿ ಕೆಲಸಕ್ಕಾಗಿ ಮಹಿಳೆಯರು ಹೊರಟಿದ್ದ ದೃಶ್ಯ ಚಾಮರಾಜನಗರಕ್ಕೆ ಸಮೀಪದ ಬೂದಿತಿಟ್ಟು ಕ್ರಾಸ್‌ನಲ್ಲಿ ಶನಿವಾರ ಬೆಳಿಗ್ಗೆ ಕಂಡು ಬಂತು   

ಚಾಮರಾಜನಗರ: ಕೋವಿಡ್‌ ಮೂರನೇ ಅಲೆ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ವಾರಾಂತ್ಯ ಕರ್ಫ್ಯೂನ ಮೊದಲ ದಿನವಾದ ಶನಿವಾರ ಜಿಲ್ಲೆಯಲ್ಲಿ ಮಾಸ್ಕ್‌, ಹೆಲ್ಮೆಟ್‌ ಧರಿಸಿದೆ ನಿಯಮ ಉಲ್ಲಂಘಿಸಿದವರಿಗೆ ಪೊಲೀಸರು ಹಾಗೂ ಸ್ಥಳೀಯ ಆಡಳಿತದ ಸಿಬ್ಬಂದಿ ದಂಡ ವಿಧಿಸಿದರು.

ಜಿಲ್ಲಾ ಕೇಂದ್ರದ ಪ್ರಮುಖ ರಸ್ತೆಗಳು ಹಾಗೂ ವೃತ್ತಗಳಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು, ದ್ವಿಚಕ್ರ ಸೇರಿದಂತೆ ಇತರ ವಾಹನಗಳಲ್ಲಿ ಸಂಚರಿಸುತ್ತಿದ್ದವರನ್ನು ತಡೆದು ವಿಚಾರಿಸಿದರು. ಮಾಸ್ಕ್‌ ಧರಿಸಿದರೆ ಕೋವಿಡ್‌ ನಿಯಮ ಉಲ್ಲಂಘಿಸಿದವರಿಗೆ ಎಚ್ಚರಿಕೆ ನೀಡಿ ದಂಡವನ್ನು ವಿಧಿಸಿದರು. ಹೆಲ್ಮೆಟ್‌ ಧರಿಸಿದೆ ಓಡಾಡುತ್ತಿದ್ದವರೂ ದಂಡ ತೆರಬೇಕಾಯಿತು.

ಜನ ಸಂಚಾರ ವಿರಳ: ಕೋವಿಡ್‌ ಮೂರನೇ ಅಲೆಯ ಮೊದಲ ವಾರಾಂತ್ಯ ಕರ್ಫ್ಯೂವಿಗೆ ಗಡಿ ಜಿಲ್ಲೆಯ ಜನರು ಉತ್ತಮವಾಗಿ ಸ್ಪಂದಿಸಿದರು. ನಗರ, ಪಟ್ಟಣ ಪ್ರದೇಶಗಳಲ್ಲಿ ಜನರು ಮನೆಯಲ್ಲೇ ಉಳಿದರು. ಅನಿವಾರ್ಯ ಇದ್ದವರು ಮಾತ್ರ ಹೊರಗಡೆ ಬಂದರು.

ADVERTISEMENT

ಶನಿವಾರ ತಿಂಗಳ ಎರಡನೇ ಶನಿವಾರ ವಾಗಿದ್ದರಿಂದ ರಜಾ ದಿನವಾಗಿತ್ತು. ಹೀಗಾಗಿ ಸರ್ಕಾರಿ ಕಚೇರಿಗಳು, ಬ್ಯಾಂಕುಗಳು ಕಾರ್ಯನಿರ್ವಹಿಸಲಿಲ್ಲ.

ಆಸ್ಪತ್ರೆ, ಕ್ಲಿನಿಕ್‌ಗಳು, ಔಷಧ ಅಂಗಡಿಗಳು,ಆಹಾರ, ದಿನಸಿ, ಹಣ್ಣು–ತರಕಾರಿ, ಮೀನು, ಮಾಂಸ, ಡೇರಿ, ಹಾಲಿನ ಬೂತು, ಜ್ಯೂಸ್‌ ಅಂಗಡಿಗಳು, ಪ್ರಾಣಿಗಳ ಆಹಾರಗಳ ಮಾರಾಟ ಮಳಿಗೆಗಳು ತೆರೆದಿದ್ದವು.ನ್ಯಾಯಬೆಲೆ ಅಂಗಡಿಗಳು ತೆರೆದಿದ್ದವು. ಬೀದಿ ವ್ಯಾಪಾರಿಗಳು ಕೂಡ ರಸ್ತೆ ಬದಿಯಲ್ಲಿ ಮಳಿಗೆಗಳನ್ನು ಇಟ್ಟಿದ್ದರು.

ಹೋಟೆಲ್‌, ರೆಸ್ಟೋರೆಂಟ್‌, ಬೇಕರಿಗಳು, ಬಾರ್‌ಗಳು, ಫಾಸ್ಟ್‌ಫುಡ್‌ ಮಳಿಗೆಗಳು ತೆರೆದಿದ್ದವು. ಆದರೆ, ಪಾರ್ಸೆಲ್‌ಗೆ ಮಾತ್ರ ಅವಕಾಶ ನೀಡಲಾಗಿತ್ತು. ಜವಳಿ ಅಂಗಡಿ, ಮೊಬೈಲ್‌ ಅಂಗಡಿ, ಎಲೆಕ್ಟ್ರಾನಿಕ್ಸ್‌ ಅಂಗಡಿಗಳು ಮುಚ್ಚಿದ್ದವು. ಇದರಿಂದಾಗಿ ನಗರದ ದೊಡ್ಡಂಗಡಿ ಬೀದಿ, ಚಿಕ್ಕಂಗಡಿ ಬೀದಿ ಸಹಿತ ಹಲವು ರಸ್ತೆಗಳು ಬಿಕೋ ಎನ್ನುತ್ತಿದ್ದವು.

ಜನ ಸಂಚಾರ ಹೆಚ್ಚು ಇಲ್ಲದಿದ್ದುದರಿಂದ ಹೋಟೆಲ್‌, ಅಂಗಡಿಗಳಲ್ಲಿ ವ್ಯಾಪಾರ ಹೆಚ್ಚಾಗಲಿಲ್ಲ. ತರಕಾರಿ, ಹಣ್ಣುಗಳ ಮಳಿಗೆಗಳಲ್ಲಿ ಬೆಳಗಿನ ಹೊತ್ತು ಗ್ರಾಹಕರು ಕಂಡು ಬಂದರು.

ಕೆಎಸ್‌ಆರ್‌ಟಿಸಿ ಬಸ್‌ ಸೇವೆ ಲಭ್ಯವಿತ್ತು. ಆದರೆ, ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದುದರಿಂದ ಬೇಡಿಕೆಗೆ ಅನುಸಾರವಾಗಿ ಸಂಚರಿಸಿದವು. ಕೆಲವೇ ಕೆಲವು ಖಾಸಗಿ ಬಸ್‌ಗಳು ರಸ್ತೆಗೆ ಇಳಿದಿದ್ದವು. ಆಟೊಗಳು ಕೂಡ ಇದ್ದವು.

ಶ್ರಮಿಕರಿಗಿಲ್ಲ ತೊಂದರೆ: ಕರ್ಫ್ಯೂ ಜಾರಿಯಲ್ಲಿದ್ದರೂ ಕಟ್ಟಡ ನಿರ್ಮಾಣ ಸೇರಿದಂತೆ ಇತರ ಕಾಮಗಾರಿಗಳಿಗೆ ತೊಂದರೆಯಾಗಲಿಲ್ಲ. ನೌಕರರು ಎಂದಿನಂತೆ ಕೆಲಸದಲ್ಲಿ ತೊಡಗಿದ್ದರು.

ದೇವಾಲಯಗಳಲ್ಲಿ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಪ್ರವಾಸಿ ತಾಣಗಳಲ್ಲೂ ಪ್ರವಾಸಿಗರಿಗೆ ಅವಕಾಶ ಇರಲಿಲ್ಲ.

ಗ್ರಾಮೀಣ ಭಾಗದಲ್ಲಿ ಸಹಜ ಸ್ಥಿತಿ: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಜನ ಜೀವನದ ಮೇಲೆ ಕರ್ಫ್ಯೂ ಪ್ರಭಾವ ಬೀರಲಿಲ್ಲ. ಕೃಷಿ ಚಟುವಟಿಕೆ ಎಂದಿನಂತೆ ಸಾಗಿತ್ತು. ಕೃಷಿ ಕಾರ್ಮಿಕರು ಜಮೀನುಗಳಲ್ಲಿ ಕೂಲಿಯಲ್ಲಿ ನಿರತರಾಗಿದ್ದರು. ಗ್ರಾಮೀಣ ಭಾಗಗಳಲ್ಲಿ ಜನರ ಓಡಾಟಕ್ಕೂ ನಿರ್ಬಂಧವಿರಲಿಲ್ಲ.

ಕರ್ಫ್ಯೂ ಬಗ್ಗೆ ’ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್‌ ಅವರು, ’ಕರ್ಫ್ಯೂ ಮೊದಲ ದಿನ ಜಿಲ್ಲೆಯ ಜನರು ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಿ ಕರ್ಫ್ಯೂ ಜಾರಿಗೆ ಕ್ರಮ ಕೈಗೊಳ್ಳಲಾಗಿದೆ. ನಿಯಮ ಉಲ್ಲಂಘನೆ ಮಾಡಿದವರಿಗೆ ಎಚ್ಚರಿಕೆಯ ಸಹಿತ ದಂಡ ವಿಧಿಸಲಾಗಿದೆ. ಮೊದಲ ದಿನ ಆದ ಕಾರಣ ಪ್ರಕರಣಗಳು ಕಡಿಮೆ ಸಂಖ್ಯೆಯಲ್ಲಿವೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.