ಗುಂಡ್ಲುಪೇಟೆ: ಸರ್ಕಾರಿ ಕಚೇರಿಗಳಲ್ಲಿ ದಲ್ಲಾಳಿಗಳಿಗೆ ಕಡಿವಾಣ ಹಾಕಬೇಕೆಂದು ಲೋಕಾಯುಕ್ತ ಡಿವೈಎಸ್ಪಿ ಗಜೇಂದ್ರಪ್ರಸಾದ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸಾರ್ವಜನಿಕ ಕುಂದುಕೊರತೆ, ದೂರು ಸ್ವೀಕಾರ ಕಾರ್ಯಕ್ರಮದಲ್ಲಿ ದೂರುದಾರರ ಸಮಸ್ಯೆ ಆಲಿಸಿ ಮಾತನಾಡಿದರು. ಅಧಿಕಾರಿಗಳು ಸಾರ್ವಜನಿಕರನ್ನು ವಿನಾಕಾರಣ ಕಚೇರಿಗಳಿಗೆ ಅಲೆಸಬಾರದು. ಕಾಲ ಮಿತಿಯೊಳಗೆ ಸಾರ್ವಜನಿಕರ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ಜನರಿಂದ ಹಣಕ್ಕೆ ಬೇಡಿಕೆ ಇಡುವುದು, ಭ್ರಷ್ಟಾಚಾರ ಕಂಡುಬಂದರೆ ಕೂಡಲೇ ಸಾರ್ವಜನಿಕರು ಲೋಕಾಯುಕ್ತರಿಗೆ ದೂರು ನೀಡಬೇಕೆಂದು ತಿಳಿಸಿದರು.
ಪಟ್ಟಣದ ಜನತಾ ಕಾಲೊನಿ ನಿವಾಸಿ ಮಹದೇವಮ್ಮ, ಮನೆಯ ಮೇಲೆ ಹೈ ಟೆನ್ಷನ್ ವಿದ್ಯುತ್ ತಂತಿ ಹಾದು ಹೋಗಿದ್ದು, ಇದನ್ನು ತೆರವುಗೊಳಿಸುವಂತೆ 2019ರಿಂದಲೂ ಸೆಸ್ಕ್‌ಗೆ ಹಲವಾರು ಬಾರಿ ಅರ್ಜಿ ಸಲ್ಲಿಸಿದರೂ ಯಾವುದೇ ರೀತಿಯ ಕ್ರಮ ತೆಗೆದುಕೊಂಡಿಲ್ಲ ಎಂದು ದೂರು ನೀಡಿದರು. ಈ ಸಂಬಂಧ ಸಮಸ್ಯೆ ಆಲಿಸಿದ ಲೋಕಾಯುಕ್ತ ಅಧಿಕಾರಿಗಳು, ದೂರುದಾರರು ಬಡವರಾಗಿದ್ದಾರೆ. ಸರ್ಕಾರ ನೀಡಿರುವ ನಿವೇಶನದಲ್ಲಿ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಸ್ವಂತ ಖರ್ಚಿನಲ್ಲಿ ವಿದ್ಯುತ್ ತಂತಿ ಸ್ಥಳಾಂತರಿಸಲು ಅಶಕ್ತರಾಗಿದ್ದು, ಪುರಸಭೆ ಮತ್ತು ಸೆಸ್ಕ್ ಇಲಾಖೆಯವರು ಜಂಟಿಯಾಗಿ ವಿದ್ಯುತ್ ಲೈನ್ ಸ್ಥಳಾಂತರ ಮಾಡುವಂತೆ ಸೂಚಿದರು.
ಅಗತಗೌಡನಹಳ್ಳಿ ಗ್ರಾಮದ ನಟರಾಜು ಎಂಬುವವರು ಮನೆಗೆ ಜಲವಿಷನ್ ಕುಡಿಯುವ ನೀರಿನ ಸಂಪರ್ಕ ನೀಡಲು ಅಧಿಕಾರಿಗಳು ಅಲೆದಾಡಿಸುತಿದ್ದು, ಸಮಸ್ಯೆ ಬಗೆಹರಿಸಿಕೊಡುವಂತೆ ದೂರು ನೀಡಿದರು. ಹಂಗಳ ಗ್ರಾಮದ ಸಿದ್ದರಾಜು ಪುತ್ತನಪುರ ಗ್ರಾಮದ ಸರ್ವೆ ನಂಬರ್ 112ರಲ್ಲಿ 1.30 ಎಕರೆ ಜಮೀನಿಗೆ ಸಾಗುವಳಿ ಮಂಜೂರಾಗಿದ್ದು, ಖಾತೆ ಮಾಡಿಕೊಡುವಂತೆ ಅಗತ್ಯ ದಾಖಲೆಗಳನ್ನು ನೀಡಿ ತಹಶೀಲ್ದಾರ್‌ಗೆ ಅರ್ಜಿ ಸಲ್ಲಿಸಿದ್ದರು ಖಾತೆ ಮಾಡುತಿಲ್ಲ ಎಂದು ದೂರು ನೀಡಿದರು.
ಕುಡಿಯುವ ನೀರು ಪೂರೈಕೆ ಮಾಡುವುದು ಜಲಜೀವನ್ ಮಿಷನ್ ಯೋಜನೆಯ ಪ್ರಮುಖ ಉದ್ದೇಶವಾಗಿದ್ದುಮ, ಯಾವುದೇ ಕಾರಣ ನೀಡದೆ ವಾರದೊಳಗೆ ದೂರುದಾರರ ಮನೆಗೆ ನಲ್ಲಿ ಸಂಪರ್ಕ ನೀಡುವಂತೆ ಜಲಜೀವನ್ ವಿಷನ್ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ಜಯಪ್ರಕಾಶ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶಶಿಧರ್, ಲೋಕಾಯುಕ್ತ ಇನ್‌ಸ್ಪೆಕ್ಟರ್ ಶಶಿಕುಮಾರ್, ಕಾನ್‌ಸ್ಟೆಬಲ್‌ಗಳಾದ ಗುರುಪ್ರಸಾದ್, ಶಕುಂತಲಾ, ಗೌತಮ್, ಮನೋರಂಜನ್, ಪುರಸಭೆ, ಕೆಆರ್‌ಡಿಎಲ್, ಲೋಕೋಪಯೋಗಿ ಇಲಾಖೆ ಸೇರಿದಂತೆ ತಾಲ್ಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.