ಕೊಳ್ಳೇಗಾಲ: ಜಮೀನು ಒತ್ತುವರಿ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರ ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿಗೆ ನಗರದ ಹೆಚ್ಚವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ಐದು ಸಾವಿರದ ದಂಡ ವಿಧಿಸಿದೆ.
ಹನೂರು ತಾಲ್ಲೂಕಿನ ಜಿ.ಕೆ ಹೊಸೂರು ಗ್ರಾಮದ ರವಿ ಶಿಕ್ಷೆಗೆ ಗುರಿಯಾದ ವ್ಯಕ್ತಿ.
ಪ್ರಕರಣದ ವಿವರ: ಹನೂರು ಠಾಣಾ ವ್ಯಾಪ್ತಿಯ ಜಿಕೆ ಹೊಸೂರು ಗ್ರಾಮದಲ್ಲಿ ಜಮೀನು ಒತ್ತುವರಿ ವಿಚಾರವಾಗಿ ರಾಜಮಣಿ ಕುಟುಂಬ ಹಾಗೂ ಆರೋಪಿ ರವಿ ಕುಟುಂಬದ ಮಧ್ಯೆ ವೈಮನಸ್ಸು ಉಂಟಾಗಿತ್ತು. ವಿವಾದಿತ ಜಮೀನಿನ ಗಡಿ ಗುರುತಿಸಿದ ನಂತರವೂ ಆರೋಪಿ ರವಿ ಅಕ್ರಮವಾಗಿ ಜಮೀನು ಉಳುಮೆಗೆ ಮುಂದಾದಾಗ ರಾಜಮಣಿ ಹಾಗೂ ಅವರ ಪುತ್ರ ಮನೋಜ್ ಪ್ರಶ್ನಿಸಿದ್ದರು. ಈ ಸಂದರ್ಭ ರವಿ ಹಾಗೂ ಕುಟುಂಬಸ್ಥರು ಮನೋಜ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಮನೋಜ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು.
ಅಂದಿನ ಹನೂರು ಠಾಣೆ ಇನ್‌ಸ್ಪೆಕ್ಟರ್ ಸಂತೋಷ್ ಕಶ್ಯಪ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಐವರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಟಿ.ಸಿ.ಶ್ರೀಕಾಂತ್ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ರವಿಗೆ ಜೀವಾವಧಿ ಕಠಿಣ ಶಿಕ್ಷೆ ವಿಧಿಸಿದ್ದಾರೆ. ಪ್ರಕರಣದಲ್ಲಿ ಉಳಿದ ಆರೋಪಿಗಳನ್ನು ಬಿಡುಗಡೆಗೆ ಆದೇಶಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.