ಗುಂಡ್ಲುಪೇಟೆ: ತಾಲ್ಲೂಕಿನ ತೆರಕಣಾಂಬಿ ಹೋಬಳಿ ವ್ಯಾಪ್ತಿಯಲ್ಲಿ ಭಾನುವಾರ ಸಂಜೆ ಸುರಿದ ಬಿರುಗಾಳಿ ಸಹಿತ ಜೋರು ಮಳೆಗೆ ನೆಲಕಚ್ಚಿದ ಬಾಳೆ ಬೆಳೆಯ ಜಮೀನುಗಳಿಗೆ ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಭೇಟಿ ನೀಡಿ ಪರಿಶೀಲಿಸಿ, ಬೆಳೆ ಹಾನಿ ಸಮೀಕ್ಷೆ ನಡೆಸಿದರು.
ಸೋಮನಪುರ, ಶೀಲವಂತಪುರ, ಕೆ.ಕೆ.ಹುಂಡಿ, ಕೊಡಸೋಗೆ, ಉಲ್ಲಾಣ, ಮಾರಿಹೊಸಹಳ್ಳಿ ಸೇರಿದಂತೆ ವಿವಿಧೆಡೆ ಹಲವು ಮಂದಿ ರೈತರ ಜಮೀನುಗಳಿಗೆ ಭೇಟಿ ನೀಡಿದ ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸಿ ತೋಟಗಾರಿಕೆಯ ಬಾಳೆ ಬೆಳೆ ಯಾವ ಪ್ರಮಾಣದಲ್ಲಿ ನೆಲಕಚ್ಚಿ, ನಷ್ಟ ಉಂಟಾಗಿದೆ ಎಂದು ಸ್ಥಳ ಪರಿಶೀಲಿಸಿ ಮಾಹಿತಿ ಕಲೆ ಹಾಕಿದರು.
ಈ ಕುರಿತು ತೋಟಗಾರಿಕೆ ಇಲಾಖೆ ಅಧಿಕಾರಿ ಕುಮಾರ್.ಬಿ ಮಾತನಾಡಿ, ಸುಮಾರು 50 ಹೆಕ್ಟರ್ ಪ್ರದೇಶದಲ್ಲಿ ಹಾನಿಯಾಗಿದೆ. ಈ ಬಗ್ಗೆ ಸ್ಥಳೀಯ ಶಾಸಕರು, ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸರ್ಕಾರದ ಮಾರ್ಗಸೂಚಿಯ ಅನ್ವಯ ಪ್ರಕೃತಿ ವಿಕೋಪದಿಂದ ಹಾನಿಯಾದ ಬೆಳೆಗಳಿಗೆ ಸೂಕ್ತ ಪರಿಹಾರ ದೊರಕಿಸಲಾಗುವುದು ಎಂದು ತಿಳಿಸಿದರು.
ಕಂದಾಯ ಇಲಾಖೆ ಅಧಿಕಾರಿ ಮಹೇಶ್, ಗೋವರ್ಧನ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.