ADVERTISEMENT

ಕೊಳ್ಳೇಗಾಲ: ಹಾಲಿನ ಡೇರಿ ಕಾರ್ಯದರ್ಶಿ ಕೊಚ್ಚಿ ಕೊಲೆ– ಆರೋಪಿ ದಂಪತಿ ಪರಾರಿ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 5:31 IST
Last Updated 30 ಡಿಸೆಂಬರ್ 2025, 5:31 IST
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕವಿತಾ ಶವಗಾರಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕವಿತಾ ಶವಗಾರಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು   

ಕೊಳ್ಳೇಗಾಲ: ತಾಲ್ಲೂಕಿನ ಚನ್ನೀಪುರದೊಡ್ಡಿ ಗ್ರಾಮದಲ್ಲಿ ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಪತಿ–ಪತ್ನಿ ಇಬ್ಬರು ಸೇರಿ ಮಾರಕಾಸ್ತ್ರದಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಚನ್ನೀಪುರದೊಡ್ಡಿ ಗ್ರಾಮದ ಹಾಲಿನ ಡೇರಿ ಕಾರ್ಯದರ್ಶಿ ಹಾಗೂ ರೈತ ಉಮೇಶ್ (50) ಕೊಲೆಯಾದವರು. ಅದೇ ಗ್ರಾಮದ ಸ್ವಾಮಿಗೌಡ (60) ಹಾಗೂ ನಾಗಮ್ಮ (50) ಆರೋಪಿಗಳು.

ಚನ್ನೀಪುರ ದೊಡ್ಡಿ ಗ್ರಾಮದಲ್ಲಿ ಹಾಲಿನ ಡೇರಿ ಇಟ್ಟಿದ್ದ ಉಮೇಶ್ ಆರೋಪಿ ಸ್ವಾಮಿಗೌಡನಿಗೆ ಹಿಂದೆ ಒಂದು ಲಕ್ಷ ಹಣವನ್ನು ವೈಕ್ತಿಕವಾಗಿ ಸಾಲ ನೀಡಿದ್ದರು. ಕಳೆದ ಒಂದು ವರ್ಷದಿಂದ ಉಮೇಶನ ಡೇರಿಗೆ ಹಾಲು ಹಾಕದೇ ಪಕ್ಕದ ಹೊಸಹಳ್ಳಿ ನಿಂಗಯ್ಯದೊಡ್ಡಿ ಗ್ರಾಮದ ಡೇರಿಗೆ ಹಾಲು ಹಾಕುತ್ತಿದ್ದನು. ಶನಿವಾರ ತಾನು ನೀಡಿದ್ದ ಹಣವನ್ನು ಕೇಳಲು ಹೋಗಿದ್ದ ಉಮೇಶ್ ಜೊತೆ ಆರೋಪಿಗಳು ಗಲಾಟೆ ಮಾಡಿದ್ದಾರೆ.

ಸೋಮವಾರ ಸಂಜೆ ಉಮೇಶ್ ಆರೋಪಿ ಮನೆ ಮುಂದೆ ನಡೆದುಕೊಂಡು ಹೋಗುವಾಗ ಆರೋಪಿ ಸ್ವಾಮಿಗೌಡ ಹಾಗೂ ಆತನ ಹೆಂಡತಿ ನಾಗಮ್ಮ ಉಮೇಶ್ ಜೊತೆಗೆ ಜಗಳವಾಡಿ ಲಾಂಗ್–ಮಚ್ಚು, ಮಾರಕಾಸ್ತ್ರದಿಂದ ತಲೆ ಹಾಗೂ ಕತ್ತು ಭಾಗಕ್ಕೆ ಹೊಡೆದು ಪಕ್ಕದ ನಾಲೆಗೆ ಬಿಸಾಡಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಗ್ರಾಮದ ಮಹದೇವ ನಾಲೆಗೆ ಬಿದ್ದಿದ್ದ ಉಮೇಶ್ ನನ್ನು ನೋಡಿದಾಗ ಉಸಿರಾಡುವುದನ್ನು ಕಂಡು ತಕ್ಷಣ ಕಾರಿನಲ್ಲಿ ಗಾಯಾಳುವನ್ನು ನಗರದ ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸುವಷ್ಟರಲ್ಲಿ ಸಾವನ್ನಪ್ಪಿದ್ದಾರೆ‌. ವಿಚಾರ ತಿಳಿದು ಆಸ್ಪತ್ರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕವಿತಾ ಭೇಟಿ ನೀಡಿ ಬಳಿಕ ಕೃತ್ಯ ನಡೆದ ಸ್ಥಳಕ್ಕೂ ಭೇಟಿ ನೀಡಿದರು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಆರೋಪಿ ಪತ್ತೆಗೆ ಬಲೆಬೀಸಿದ್ದಾರೆ.

ಉಮೇಶ್ ಕೊಲೆಯಾದ ವ್ಯಕ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.