ADVERTISEMENT

ಚಾಮರಾಜನಗರ: ಶಾಸಕ ಪುಟ್ಟರಂಗಶೆಟ್ಟಿ ಮೇಲೆ ದಲಿತ ಮುಖಂಡರ ಮುನಿಸು

ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಮಧ್ಯಸ್ಥಿಕೆಯಲ್ಲಿ ಸಭೆ, ಆರೋಪಗಳ ಸುರಿಮಳೆ

ಸೂರ್ಯನಾರಾಯಣ ವಿ
Published 5 ನವೆಂಬರ್ 2022, 7:47 IST
Last Updated 5 ನವೆಂಬರ್ 2022, 7:47 IST
ಅ.1ರಂದು ಕಾಂಗ್ರೆಸ್‌ನ ದಲಿತ ಮುಖಂಡರು ಅಂಬೇಡ್ಕರ್‌ ಭವನದಲ್ಲಿ ಸಭೆ ಸೇರಿದ್ದ ಚಿತ್ರ
ಅ.1ರಂದು ಕಾಂಗ್ರೆಸ್‌ನ ದಲಿತ ಮುಖಂಡರು ಅಂಬೇಡ್ಕರ್‌ ಭವನದಲ್ಲಿ ಸಭೆ ಸೇರಿದ್ದ ಚಿತ್ರ   

ಚಾಮರಾಜನಗರ: ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರ ಮೇಲೆ ಕಾಂಗ್ರೆಸ್‌ನ ದಲಿತ ಮುಖಂಡರು ಮುನಿಸಿಕೊಂಡಿದ್ದು, ಇತ್ತೀಚೆಗೆ ಸಮುದಾಯದ ಪ್ರಮುಖ ನಾಯಕರೆಲ್ಲ ಸೇರಿ ಸಭೆ ನಡೆಸಿ ಶಾಸಕರ ಕಾರ್ಯವೈಖರಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಮುಖಂಡರನ್ನು ಸಮಾಧಾನಪಡಿಸಲುಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಅವರು ಶಾಸಕ ಪುಟ್ಟರಂಗಶೆಟ್ಟಿ ಹಾಗೂ ಸಮುದಾಯದ ಮುಖಂಡರೊಂಡನೆ ಗುರುವಾರ ಸಂಜೆ ಸಂತೇಮರಹಳ್ಳಿಯಲ್ಲಿ ರಾಜಿ ಸಂಧಾನ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಕೂಡ ಮುಖಂಡರು ಶಾಸಕರ ವಿರುದ್ಧ ಹರಿಹಾಯ್ದಿದ್ದಾರೆ ಎಂದು ಗೊತ್ತಾಗಿದೆ.

‘ಸತತ ಮೂರು ಬಾರಿ ಗೆದ್ದಿರುವ ಪುಟ್ಟರಂಗಶೆಟ್ಟಿ ಅವರು ಪರಿಶಿಷ್ಟಜಾತಿಯ ಮುಖಂಡರನ್ನು ಕಡೆಗಣಿಸುತ್ತಿದ್ದಾರೆ. ಸಮುದಾಯದವರಿಗೆ ಅನುಕೂಲ ಮಾಡಿಕೊಡುತ್ತಿಲ್ಲ’ ಎಂದು ಮುಖಂಡರು ಮೊದಲಿನಿಂದಲೂ ಖಾಸಗಿಯಾಗಿ ಹೇಳುತ್ತಲೇ ಬಂದಿದ್ದರು.

ADVERTISEMENT

ಆದರೆ, ಇದೇ 1ರಂದು ನಗರದ ಅಂಬೇಡ್ಕರ್‌ ಭವನದಲ್ಲಿ ಮುಖಂಡರು ಸಭೆ ಸೇರಿ ಈ ಬಗ್ಗೆ ಚರ್ಚಿಸಿದ್ದಾರೆ.ಕ್ಷೇತ್ರವ್ಯಾಪ್ತಿಯ ಎಲ್ಲ ಗ್ರಾಮಗಳಿಂದ ಮುಖಂಡರು ಈ ಸಭೆಯಲ್ಲಿ ಭಾಗವಹಿಸಿದ್ದರು.

ಸಭೆಯಲ್ಲಿ ಮಾತನಾಡಿರುವ ಪ್ರತಿಯೊಬ್ಬರೂ ಪುಟ್ಟರಂಗಶೆಟ್ಟಿ ಅವರ ಧೋರಣೆ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ. ಇದೇ ವರ್ತನೆಯನ್ನು ಅವರು ಮುಂದುವರಿಸಿದ್ದೇ ಆದರೆ, ಮುಂದಿನ ಚುನಾವಣೆಯಲ್ಲಿ ಅವರಿಗೆ ಪಕ್ಷದ ಟಿಕೆಟ್‌ ನೀಡಬಾರದು ಎಂದು ವರಿಷ್ಠರನ್ನು ಒತ್ತಾಯಿಸಬೇಕು ಎಂಬ ತೀರ್ಮಾನವನ್ನೂ ಕೈಗೊಂಡಿದ್ದಾರೆ ಎಂದು ಗೊತ್ತಾಗಿದೆ.

ಅಲ್ಲದೇ, ಪುಟ್ಟರಂಗಶೆಟ್ಟಿ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಅವರಿಗೆ ಲಿಖಿತವಾಗಿ ದೂರನ್ನೂ ನೀಡಿದ್ದಾರೆ.

ಆರೋಪಗಳೇನು?: ಪುಟ್ಟರಂಗಶೆಟ್ಟಿ ಅವರು ದಲಿತರನ್ನು ಕಡೆಗಣಿಸುತ್ತಿದ್ದಾರೆ. ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ದೂರವಾಣಿ ಕರೆ ಮಾಡಿದರೆ ಸ್ಪಂದಿಸುವುದಿಲ್ಲ. ಸಮುದಾಯದ ಬಡವರಿಗೆ ಅನುಕೂಲ ಮಾಡಿಕೊಡುತ್ತಿಲ್ಲ. ಗುತ್ತಿಗೆದಾರರಿಗೆ ಗುತ್ತಿಗೆ ನೀಡದೆ ಹೊರಗಿನವರಿಗೆ ಕೊಡಿಸುತ್ತಿದ್ದಾರೆ. ಮನೆ ಅಥವಾ ಪ್ರವಾಸಿ ಮಂದಿರಕ್ಕೆ ಭೇಟಿ ಮಾಡಲು ಹೋದರೆ ‘ಯಾಕೆ ಬಂದಿದ್ದು’ ಎಂದು ವಿಚಾರಿಸುವ ಕನಿಷ್ಠ ಸೌಜನ್ಯವನ್ನೂ ಶಾಸಕರು ತೋರುತ್ತಿಲ್ಲ ಎಂಬುದು ಮುಖಂಡರ ಆರೋಪ.

ಸಂಧಾನ ಸಭೆ: ಚುನಾವಣೆಗೆ ಇನ್ನು ಕೆಲವು ತಿಂಗಳು ಇರುವಾಗಲೇ ದಲಿತ ಮುಖಂಡರು ಪುಟ್ಟರಂಗಶೆಟ್ಟಿ ವಿರುದ್ಧ ಸಿಡಿದೆದ್ದಿರುವುದು ರಾಜ್ಯ ಮಟ್ಟದ ನಾಯಕರಿಗೆ ಇರಿಸು ಮುರಿಸು ಉಂಟು ಮಾಡಿದ್ದು, ಬಿಕ್ಕಟ್ಟನ್ನು ಬಗೆಹರಿಸಲು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಅವರು ಪ್ರಯತ್ನ ನಡೆಸಿದ್ದಾರೆ.

ಇದರ ಭಾಗವಾಗಿ, ಗುರುವಾರ ಸಂತೇಮರಹಳ್ಳಿಯಲ್ಲಿ ಪುಟ್ಟರಂಗಶೆಟ್ಟಿ ಹಾಗೂ ಪಕ್ಷದ ದಲಿತ ಮುಖಂಡರೊಂದಿಗೆ ಅವರು ಸಭೆ ನಡೆಸಿ ಆರೋಪಗಳ ಬಗ್ಗೆ ಚರ್ಚೆಸಿದ್ದಾರೆ. ಈ ಸಭೆಯಲ್ಲೂ ಹಲವು ಮುಖಂಡರು ಶಾಸಕರ ಕಾರ್ಯವೈಖರಿಯನ್ನು ಪ್ರಶ್ನಿಸಿ, ನೇರವಾಗಿ ಆರೋಪ ಮಾಡಿದರು ಎಂದು ಮೂಲಗಳು ತಿಳಿಸಿವೆ.

ಶಾಸಕರ ಪರವಾಗಿದ್ದ ಕೆಲವು ಮುಖಂಡರು ಮಾತ್ರ ಪುಟ್ಟರಂಗಶೆಟ್ಟಿ ಅವರನ್ನು ಸಮರ್ಥಿಸಿಕೊಂಡರು ಎಂದು ತಿಳಿದು ಬಂದಿದೆ.

‘ಚುನಾವಣೆ ಹತ್ತಿರದಲ್ಲಿರುವಾಗ ಇಂತಹ ಬೆಳವಣಿಗೆಗಳು ಒಳ್ಳೆಯದಲ್ಲ. ದಲಿತ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು ಎಂದು ಧ್ರುವನಾರಾಯಣ ಅವರು ಪುಟ್ಟರಂಗಶೆಟ್ಟಿ ಅವರಿಗೆ ಸೂಚಿಸಿದರು’ ಎಂದು ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಸಭೆಯಲ್ಲಿ ಮಾತನಾಡಿದ ಪುಟ್ಟರಂಗಶೆಟ್ಟಿ, ಮುಂದೆ ಇಂತಹ ತಪ್ಪು ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದರು ಎಂದು ಗೊತ್ತಾಗಿದೆ.

ಆಂತರಿಕ ವಿಚಾರ, ಬಗೆಹರಿದಿದೆ: ಧ್ರುವ
ಈ ಬೆಳವಣಿಗೆಗಳ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ, ‘ಅದು ಪಕ್ಷದ ಆಂತರಿಕ ವಿಚಾರ. ಹೆಚ್ಚು ಮಹತ್ವ ಕೊಡಬೇಕಿಲ್ಲ. ಮನೆ ಅಂದ ಮೇಲೆ ಸಣ್ಣ ಪುಟ್ಟ ಸಮಸ್ಯೆಗಳಿರುವಂತೆ ಪಕ್ಷದಲ್ಲೂ ಇರುತ್ತವೆ. ಅದೆಲ್ಲವೂ ಬಗೆಹರಿದಿದೆ. ಮುಖಂಡರು ತಮ್ಮ ಬೇಡಿಕೆಗಳನ್ನು ಸಭೆಯಲ್ಲಿ ಮುಂದಿಟ್ಟಿದ್ದರು. ಎಲ್ಲವನ್ನೂ ಬಗೆಹರಿಸಲಾಗಿದೆ’ ಎಂದು ಹೇಳಿದರು.

ಶೀಘ್ರ ಇನ್ನೊಂದು ಸಭೆ?

‘ಗುರುವಾರ ನಡೆದಸಂಧಾನ ಸಭೆ ಪೂರ್ಣ ಯಶಸ್ಸು ಕಂಡಿಲ್ಲ. ಮತ್ತೆ ಶೀಘ್ರದಲ್ಲಿ ಇನ್ನೊಂದು ಸಭೆ ನಡೆಯಲಿದೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸಭೆಯ ಬಗ್ಗೆ ಪ್ರತಿಕ್ರಿಯೆ ಪಡೆಯಲು ಪುಟ್ಟರಂಗಶೆಟ್ಟಿ ಅವರಿಗೆ ಕರೆ ಮಾಡಿದಾಗ, ‘ಅದು ಪಕ್ಷದ ಆಂತರಿಕ ವಿಚಾರ. ಅದೆಲ್ಲ ನಿಮಗೆ ಯಾಕೆ’ ಎಂದು ಹೇಳಿ ಕರೆ ಕಡಿತಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.