ADVERTISEMENT

ಪತ್ರ ಚಳವಳಿ ರೂಪಿಸಲು ದಲಿತ ಮುಖಂಡರ

ಎಸ್‌ಸಿ ಪಟ್ಟಿಯಿಂದ ಕೊರಮ, ಕೊರಚ, ಬೋವಿ, ಲಂಬಾಣಿ ಜಾತಿಗಳನ್ನು ಕೈಬಿಡುವಂತ ಒತ್ತಾಯ

​ಪ್ರಜಾವಾಣಿ ವಾರ್ತೆ
Published 9 ಜುಲೈ 2020, 14:59 IST
Last Updated 9 ಜುಲೈ 2020, 14:59 IST
ಸಭೆಯಲ್ಲಿ ಚಾಮರಾಜನಗರದ ದಲಿತ ಸಮುದಾಯದ ಮುಖಂಡರು ಭಾಗವಹಿಸಿದ್ದರು
ಸಭೆಯಲ್ಲಿ ಚಾಮರಾಜನಗರದ ದಲಿತ ಸಮುದಾಯದ ಮುಖಂಡರು ಭಾಗವಹಿಸಿದ್ದರು   

ಚಾಮರಾಜನಗರ: ಪರಿಶಿಷ್ಟ ಜಾತಿಗಳ ಪಟ್ಟಿಯಿಂದ ಕೊರಮ, ಕೊರಚ, ಬೋವಿ, ಲಂಬಾಣಿ ಜಾತಿಗಳನ್ನು ಕೈ ಬಿಡುವಂತೆ ಒತ್ತಾಯಿಸಿ ದೊಡ್ಡಮಟ್ಟದ ಪತ್ರ ಚಳವಳಿ ರೂಪಿಸಲು ನಡೆದ ಪರಿಶಿಷ್ಟ ಜಾತಿ ಹಾಗೂ ದಲಿತ ಸಂಘಟನೆಗಳ ಮುಖಂಡರು ತೀರ್ಮಾನಿಸಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಗುರುವಾರ ನಗರದಲ್ಲಿ ಸಭೆ ಸೇರಿದ್ದ ಮುಖಂಡರು ಒಮ್ಮತದಿಂದ ಈ ನಿರ್ಧಾರಕ್ಕೆ ಬಂದಿದ್ದಾರೆ.

ಸಭೆಯ ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್‌ ಮುಖಂಡ ಎಸ್.ನಂಜುಂಡಸ್ವಾಮಿ ಅವರು, ‘ಪರಿಶಿಷ್ಟ ಜಾತಿಯ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆಯುತ್ತಿದ್ದು, ಸಂವಿಧಾನಕ್ಕೂ ಗಂಡಾಂತರ ಎದುರಾಗಿದೆ. ಮೀಸಲಾತಿಯ ದುರ್ಬಳಕೆಯಾಗುತ್ತಿದೆ. ಅಸ್ಪೃಶ್ಯಲ್ಲದವರು ಮೀಸಲಾತಿ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಇದರ ಬಗ್ಗೆ ನಾವೆಲ್ಲರೂ ಮೊದಲೇ ಜಾಗೃತರಾಗಬೇಕಿತ್ತು. ತಡವಾಗಿಯಾದರೂ ಈಗ ಎಲ್ಲರೂ ಜಾಗೃತರಾಗುತ್ತಿದ್ದಾರೆ. ಈ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಲಾಗುವುದು’ ಎಂದರು.

ADVERTISEMENT

ದಲಿತ ಮುಖಂಡ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಯ ಸಿ.ಎಂ.ಕೃಷ್ಣಮೂರ್ತಿ ಅವರು ಮಾತನಾಡಿ, ‘ಪರಿಶಿಷ್ಟ ಜಾತಿಯ ಪಟ್ಟಿಯಿಂದ ಲಂಬಾಣಿ, ಬೋವಿ, ಕೊರಮ, ಕೊರಚ ಉಪಜಾತಿಗಳನ್ನು ಕೈ ಬಿಡುವಂತೆ ಅಂಬೇಡ್ಕರ್ ಪೀಪಲ್ ಪಾರ್ಟಿ ವತಿಯಿಂದ ಸುಪ್ರೀಂಕೋರ್ಟ್ ಅರ್ಜಿ ಸಲ್ಲಿಸಲಾಗಿತ್ತು. ಅದನ್ನು ಸುಪ್ರೀಂಕೋರ್ಟ್ ಪುರಸ್ಕರಿಸಿ, ಇತ್ತೀಚೆಗೆ ಸುಪ್ರೀಂಕೋರ್ಟ್ ಈ ಬಗ್ಗೆ ವರದಿ ಸಲ್ಲಿಸುವಂತೆ ಕೇಂದ್ರ, ರಾಜ್ಯ ಸರ್ಕಾರಗಳು ಮತ್ತು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗಕ್ಕೆ ಸೂಚಿಸಿದೆ. ಹೀಗಾಗಿ,ಪರಿಶಿಷ್ಟ ಜಾತಿಯ ಹೊಲೆಯ, ಮಾದಿಗರು ಸಂಘಟಿತರಾಗಿ ಜಿಲ್ಲೆಯಿಂದ ಮುಖ್ಯಮಂತ್ರಿಗಳಿಗೆ ದೊಡ್ಡಮಟ್ಟದಲ್ಲಿ ಪತ್ರ ಚಳುವಳಿ ನಡೆಸಬೇಕಾಗಿದೆ’ ಎಂದರು.

ಮುಖಂಡರಾದ ಸಿ.ಕೆ.ಮಂಜುನಾಥ್ ಅವರು ಮಾತನಾಡಿ, ‘ಕೊರಮ, ಕೊರಚ, ಬೋವಿ, ಲಂಬಾಣಿ ಉಪಜಾತಿಗಳನ್ನು ಪರಿಶಿಷ್ಟ ಜಾತಿಯಿಂದ ಕೈ ಬಿಡುವಂತೆ ಒತ್ತಾಯಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಬೇಕಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ’ ಎಂದರು.

ಕೆ.ಎಂ.ನಾಗರಾಜು ಅವರು ಮಾತನಾಡಿ, ‘ಜಿಲ್ಲಾ ಮಟ್ಟದಲ್ಲಿ ಸಮಿತಿಯೊಂದನ್ನು ರಚಿಸಿ ರಚನೆ ಮಾಡಿ ನಾಲ್ಕು ಉಪಜಾತಿಗಳನ್ನು ಕೈ ಬಿಡುವಂತೆ ರಾಜ್ಯ ಪರಿಶಿಷ್ಟ ಜಾತಿಯ ಆಯೋಗ ಮತ್ತು ಸರ್ಕಾರಕ್ಕೆ ಮನವಿ ಮಾಡಬೇಕು’ ಎಂದು ಸಲಹೆ ನೀಡಿದರು.
ಎಂ.ಶಿವಮೂರ್ತಿ ಮಾತನಾಡಿ, ‘ಈ ನಾಲ್ಕು ಉಪಜಾತಿಗಳು ಆರ್ಥಿಕವಾಗಿ ಸಬಲರಾಗಿವೆ. ಹಾಗಾಗಿ, ‌ಪರಿಶಿಷ್ಟ ಜಾತಿಯ ಪಟ್ಟಿಯಿಂದ ಇವನ್ನು ಕೈಟ್ಟು ಸಂವಿಧಾನ ಉಳಿಸುವಂತೆ ಒತ್ತಾಯಿಸಿ ನಾವೆಲ್ಲರೂ ಸಂಘಟಿತರಾಗಿ ಜಿಲ್ಲೆಯಲ್ಲಿ ಪ್ರ‌ಬಲ ಹೋರಾಟ ರೂಪಿಸಬೇಕಿದೆ’ ಎಂದರು.

ಮುಖಂಡರಾದ ಅರಕಲವಾಡಿ ನಾಗೇಂದ್ರ, ಸಿ.ಎಂ.ಶಿವಣ್ಣ, ಎನ್.ನಾಗಯ್ಯ, ಬಸವನಪುರ ರಾಜಶೇಖರ್, ಆರ್.ಮಹದೇವು, ಬ್ಯಾಡಮೂಡ್ಲು ಬಸವಣ್ಣ, ರಾಮಸಮುದ್ರ ಸುರೇಶ್, ಕೆಸ್ತೂರು ಮರಪ್ಪ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.