
ಬಂಧನ
ಹನೂರು: ತಾಲೂಕಿನ ದೊಮ್ಮನ ಗದ್ದೆ ಸಮೀಪದ ಜಿ ಆರ್ ನಗರ ಗ್ರಾಮದಲ್ಲಿ ದಲಿತ ಮಹಿಳೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಂಬಕ್ಕೆ ಕಟ್ಟಿ ಥಳಿಸಿರುವ ಫೋಟೊ ಮತ್ತು ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ತಾಲೂಕಿನ ಜಿ.ಆರ್. ನಗರ ಗ್ರಾಮದ ದಲಿತ ಮಹಿಳೆ ಕಣ್ಣಮ್ಮ ತನ್ನ ಜಮೀನಿನಲ್ಲಿ ಹುರುಳಿ ಬೆಳೆದಿದ್ದು, ಕಟಾವು ಮಾಡುವ ಸಂದರ್ಭದಲ್ಲಿ ಅದೇ ಗ್ರಾಮದ ತೋಟದ ಮನೆಯ ಸೆಲ್ವಿ ಎಂಬುವರ ಜಾನುವಾರುಗಳು ಮೇಯ್ದು ತುಳಿದು ಹಾಳು ಮಾಡಿದ್ದವು. ಈ ಸಂಬಂಧ ಕಣ್ಣಮ್ಮ ರಾಮಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಪೊಲೀಸರು ಸ್ಟೇಷನ್‌ಗೆ ಬಂದು ಬಗೆಹರಿಸಿಕೊಳ್ಳುವಂತೆ ಸೆಲ್ವಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದರು. ಇದನ್ನು ಸಹಿಸದ ಸೆಲ್ವಿ ಶನಿವಾರ , ಮನೆಯಲ್ಲಿದ್ದ ಕಣ್ಣಮ್ಮ ಮತ್ತು ಅವರ ಮಗನನ್ನು ಎಳೆದು ಹೊರತಂದು, ಜಾತಿ ಬಳಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಕಣ್ಣಮ್ಮನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಬಗ್ಗೆ ಫೋಟೊ ಮತ್ತು ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಕಣ್ಣಮ್ಮ ಹಾಗೂ ಅವರ ಮಗ ಪೆರುಮಾಳ್ ರಾಮಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ರಾಮಪುರ ಪೊಲೀಸರು ಮಂಜು ಮತ್ತು ಅಂಗಮುತ್ತು ಎಂಬ ಇಬ್ಬರನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಸೆಲ್ವಿ ತಲೆಮರೆಸಿಕೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜ್ ರಾಮಪುರ ಪೊಲೀಸ್ ಠಾಣೆ ಮತ್ತು ಜಿ. ಆರ್. ನಗರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.