ಚಾಮರಾಜನಗರ: ‘ಹೈಕೋರ್ಟ್‌ನ ನಿರ್ದೇಶನದಂತೆ ಕೊಳ್ಳೇಗಾಲದ ತಾಲ್ಲೂಕಿನ ಚಿಕ್ಕಲ್ಲೂರು ಜಾತ್ರೆಯಲ್ಲಿ ಪ್ರಾಣಿ ಬಲಿ ತಡೆಯಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಭಕ್ತರು ಕೂಡ ಸಾತ್ವಿಕ ರೂಪದಲ್ಲಿ ಪೂಜೆ ಸಲ್ಲಿಸಬೇಕು’ ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ಅಧ್ಯಕ್ಷ ದಯಾನಂದ ಸ್ವಾಮೀಜಿ ಗುರುವಾರ ಒತ್ತಾಯಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಮತ್ತು ಪಶು ಸಂಗೋಪನಾ ಇಲಾಖೆ ಕಾರ್ಯದರ್ಶಿಗಳು, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು, ಚಾಮರಾಜನಗರ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಲಿಖಿತವಾಗಿ ಮನವಿ ಸಲ್ಲಿಸಲಾಗಿದೆ’ ಎಂದರು.
‘ಜಿಲ್ಲಾಧಿಕಾರಿ ಅವರು ಈಗಾಗಲೇ ಪ್ರಾಣಿಬಲಿ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಈ ವರ್ಷ 18 ಸೆಕ್ಟೆರ್ ಅಧಿಕಾರಿಗಳನ್ನೂ ಜಿಲ್ಲಾಡಳಿತ ನೇಮಿಸಿರುವುದು ಒಳ್ಳೆಯ ಬೆಳವಣಿಗೆ. ನಮ್ಮ ನಿರಂತರ ಹೋರಾಟದಿಂದಾಗಿ ಬಿಳಿಗಿರಿರಂಗನಬೆಟ್ಟದಲ್ಲಿ ಪ್ರಾಣಿಗಳ ಬಲಿಗೆ ಸಂಪೂರ್ಣವಾಗಿ ತಡೆ ಬಿದ್ದಿದೆ. ಹನೂರಿನ ಕೂಡ್ಲೂರು ಮುನೇಶ್ವರ ಜಾತ್ರೆ ಸಮಯದಲ್ಲೂ ಇದು ಬಹುತೇಕ ನಿಯಂತ್ರಣಕ್ಕೆ ಬಂದಿದೆ. ಚಿಕ್ಕಲ್ಲೂರಿನಲ್ಲೂ ಸಿದ್ದಪ್ಪಾಜಿ ದೇವಾಲಯದ ಆವರಣ ಹಾಗೂ ವ್ಯಾಪ್ತಿಯಲ್ಲಿ ಪ್ರಾಣಿ ಬಲಿ ನಡೆಯುತ್ತಿಲ್ಲ’ ಎಂದರು.
‘ಎಲ್ಲರೂ ನಮ್ಮ ಹೋರಾಟಕ್ಕೆ ಸಹಕರಿಸುತ್ತಿದ್ದಾರೆ. ದೇವಾಲಯಗಳು ವಧಾಲಯಗಳು ಆಗಬಾರದು. ಪ್ರಾಣಿ ಬಲಿ ಹಿಂಸೆಯನ್ನು ಪೋಷಿಸುವುದು ಮಾತ್ರವಲ್ಲದೆ, ಇದರಿಂದ ಪರಿಸರವೂ ಹಾಳಾಗುತ್ತದ. ಇದು ಕಾನೂನು ಮತ್ತು ಧರ್ಮ ಹಾಗೂ ದೈವ ವಿರೋಧಿ ಆಚರಣೆ. ಪ್ರಾಣಿಗಳ ಬಗ್ಗೆ ಅನುಕಂಪ ಹೊಂದಿರಬೇಕು ಎಂದು ಸಂವಿಧಾನ ಕೂಡ ಹೇಳಿದೆ. ಭಕ್ತರು ಪ್ರಾಣಿಬಲಿ ತ್ಯಜಿಸಿ, ಅಹಿಂಸಾತ್ಮಕವಾಗಿ ಸಾತ್ವಿಕ ಪೂಜೆ ಸಲ್ಲಿಸಬೇಕು’ ಎಂದು ಅವರು ಮನವಿ ಮಾಡಿದರು.
ಸಂದೇಶ ಯಾತ್ರೆ: ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಒಂದು ವಾರದ ಕಾಲ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮತ್ತು ಚಿಕ್ಕಲ್ಲೂರು ಜಾತ್ರಾ ಪರಿಸರ, ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಹಿಂಸಾ ಪ್ರಾಣಿದಯಾ ಅಧ್ಯಾತ್ಮ ಸಂದೇಶ ಯಾತ್ರೆ ಹಮ್ಮಿಕೊಳ್ಳಲಾಗಿದೆ’ ಎಂದು ದಯಾನಂದ ಸ್ವಾಮೀಜಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.